ಸಾರಾಂಶ
- ರೈತಪರ ಬಜೆಟ್ ಮಂಡಿಸಲು ಮುಖ್ಯಮಂತ್ರಿಗೆ ಒತ್ತಾಯಿಸಿ ಡಿಸಿ ಮುಖೇನ ರೈತರ ಒಕ್ಕೂಟ ಮನವಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆಭದ್ರಾ ನಾಲೆಗಳ ಆಧುನೀಕರಣಕ್ಕೆ ಕನಿಷ್ಠ ₹2 ಸಾವಿರ ಮೀಸಲಿಡುವುದು ಸೇರಿದಂತೆ ರಾಜ್ಯ ಬಜೆಟ್ ಅನ್ನು ರೈತರ ಹಿತದೃಷ್ಟಿಯಿಂದ ರೈತಪರವಾಗಿ ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ರೈತರ ಒಕ್ಕೂಟವು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದೆ.
ಇದೇ ವೇಳೆ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಎಲ್ಲರಿಗೂ ಅನ್ನ ನೀಡುವ ರೈತರನ್ನು ಅನ್ನದಾತ ಅಂತಾ ಬಾಯಿಂದ ಕರೆದರಷ್ಟೇ ಸಾಲದು. ಆತನಿಗೆ ಬೆಳೆ ಬೆಳೆಯಲು ಸೂಕ್ತ ಸೌಲಭ್ಯ, ನ್ಯಾಯಯುತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ರೈತ ಬೆವರು ಸುರಿಸಿ, ದುಡಿದು ತಿಂದರೆ ಎಲ್ಲರಿಗೂ ಅನ್ನ ದೊರೆಯಲು ಸಾಧ್ಯವೆಂಬ ಸತ್ಯ ಸರ್ಕಾರ ಅರಿಯಲಿ ಎಂದರು.ರೈತ ಎಂದಿಗೂ ಇನ್ನೊಬ್ಬರ ಮುಂದೆ ಕೈಯೊಡ್ಡಬಾರದು. ಜನರಿಗೆ ನೀಡುವ ಗ್ಯಾರಂಟಿಗಳ ಬದಲಿಗೆ ರೈತರ ಹಿತ ಕಾಪಾಡುವಂತಹ ಯೋಜನೆ, ಕಾರ್ಯಕ್ರಮ ಜಾರಿಗೆ ತರಬೇಕು. ರೈತನನ್ನು ನೇಗಿಲ ಯೋಗಿಯೆಂದು ಕರೆದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ. ಹತ್ತುಹಲವು ಪ್ರಾಣಿ- ಪಕ್ಷಿಗಳನ್ನು ಸಲಹುವ ರೈತನ್ನು ಸಶಕ್ತನಾಗಿ ಮಾಡಿದರೆ ಸರ್ಕಾರಕ್ಕೆ ಸಾಲ ಕೊಡುತ್ತಾನೆ. ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂನ ಕಾಲುವೆಗಳಲ್ಲಿ ಕಳೆ ಗಿಡಗಲೂ ಬೆಳೆದಿವೆ. ದಶಕಗಳಿಂದಲೂ ಹೂಳು ತುಂಬಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಹಾಗಾಗಿ ಅಚ್ಚುಕಟ್ಟು ವ್ಯಾಪ್ತಿಯ ಕಡೇ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಭದ್ರಾ ಕಾಲುವೆಗಳ ಆಧುನೀಕರಣಕ್ಕೆ ಕನಿಷ್ಠ ₹2 ಸಾವಿರ ಕೋಟಿ ನೀಡಬೇಕು ಎಂದು ಒತ್ತಾಯಿಸಿದರು.
ಭದ್ರಾ ಡ್ಯಾಂ 1972ರಲ್ಲಿ ಗಾರೆ ಸುಣ್ಣ, ಕಲ್ಲುಗಳಿಂದ ನಿರ್ಮಿಸಲಾಗಿದೆ. ಸಹಜವಾಗಿ ಬುಡದಲ್ಲಿ ನೀರು ಸೋರಿಕೆಯಾಗುತ್ತಿದೆ. ಕ್ರೆಸ್ಟ್ ಗೇಟ್‌ಗಳು ಹಳೆಯದಾಗಿವೆ. ಅವುಗಳನ್ನು ರೀ ಕಂಡೀಷನ್ ಮಾಡಿಸಿಲ್ಲ. ಇದರಿಂದ ಅಭದ್ರತೆ ಕಾಡುತ್ತಿದೆ. ಭದ್ರಾ ಡ್ಯಾಂ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿ, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡಬೇಕು. ರೈತರು ಬೆವರು ಸುರಿಸಿ, ಬೆಳೆದ ಉತ್ಪನ್ನ ಮಾರಾಟ ಮಾಡಲು ಇ-ಟೆಂಡರ್ ಪದ್ಧತಿ ಕಡ್ಡಾಯಗೊಳಿಸಬೇಕು. ತೂಕದಲ್ಲಿ ವಂಚನೆ ತಪ್ಪಿಸಲು ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ವೇಬ್ರೀಡ್ಜ್ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.ನಿಯೋಗದಲ್ಲಿ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ತೇಜಸ್ವಿ ವಿ. ಪಟೇಲ್, ಬೆಳವನೂರು ಬಿ.ನಾಗೇಶ್ವರ ರಾವ್, ಧನಂಜಯ ಕಡ್ಲೆಬಾಳ್, ಆರನೇಕಲ್ಲು ವಿಜಯಕುಮಾರ, ಅತಿಥ್ ಅಂಬರಕರ್, ಮಾಜಿ ಮೇಯರ್ ಎಚ್.ಎನ್. ಗುರುನಾಥ ಇತರರು ಇದ್ದರು.
- - -ಕೋಟ್ ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿವೆ. ಆದ್ದರಿಂದ ಎಲ್ಲ ಸಕ್ಕರೆ ಕಾರ್ಖಾನೆಗಳ ಆವರಣದಲ್ಲಿ ಎಪಿಎಂಸಿಯಿಂದಲೇ ವೇಬ್ರೀಡ್ಜ್ ಸ್ಥಾಪಿಸಿ , ಎಪಿಎಂಸಿ ಮೂಲಕವೇ ಸರ್ಕಾರ ನಿರ್ವಹಣೆ ಮಾಡಬೇಕು. ಕೃಷಿ-ತೋಟಗಾರಿಕೆ ಇಲಾಖೆಗಳಲ್ಲಿ ಹನಿ, ತುಂತುರು ನೀರಾವರಿ ಸೇರಿದಂತೆ ಯಂತ್ರೋಪಕರಣಗಳ ಖರೀದಿಗೆ ನೀಡುವ ಸಹಾಯಧನವನ್ನು ನೇರವಾಗಿ ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು
- ಬಿ.ಎಂ. ಸತೀಶ ಕೊಳೇನಹಳ್ಳಿ, ರೈತ ಮುಖಂಡ- - - -5ಕೆಡಿವಿಜಿ4.ಜೆಪಿಜಿ:
ಭದ್ರಾ ನಾಲೆ ಆಧುನೀಕರಣಕ್ಕೆ ₹2 ಸಾವಿರ ಕೋಟಿ ಮೀಸಲಿಡುವುದು ಸೇರಿದಂತೆ ರೈತಪರ ಬಜೆಟ್ ಮಂಡಿಸುವಂತೆ ಸಿಎಂಗೆ ಒತ್ತಾಯಿಸಿ ದಾವಣಗೆರೆ ಜಿಲ್ಲಾ ರೈತರ ಒಕ್ಕೂಟದ ನಿಯೋಗ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿತು.