ನಿಟ್ಟುವಳ್ಳಿ ಶಾಖಾ ಗ್ರಂಥಾಲಯ ಕಟ್ಟಡಕ್ಕೆ ನಿವೇಶನ ಮಂಜೂರು

| Published : Dec 13 2024, 12:46 AM IST

ನಿಟ್ಟುವಳ್ಳಿ ಶಾಖಾ ಗ್ರಂಥಾಲಯ ಕಟ್ಟಡಕ್ಕೆ ನಿವೇಶನ ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ನಿಟ್ಟುವಳ್ಳಿ ಶಾಖಾ ಗ್ರಂಥಾಲಯ ಕಟ್ಟಡ ನಿರ್ಮಿಸಲು ಸ್ವಂತ ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಹಾಗೂ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರಿಗೆ ವಾಚನಾಲಯ ಪ್ರಾರಂಭಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಅಧ್ಯಕ್ಷರಾದ ಜಿ.ಎಂ. ಗಂಗಾಧರಸ್ವಾಮಿ ಅನುಮೋದನೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಿಟ್ಟುವಳ್ಳಿ ಶಾಖಾ ಗ್ರಂಥಾಲಯ ಕಟ್ಟಡ ನಿರ್ಮಿಸಲು ಸ್ವಂತ ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಹಾಗೂ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರಿಗೆ ವಾಚನಾಲಯ ಪ್ರಾರಂಭಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಅಧ್ಯಕ್ಷರಾದ ಜಿ.ಎಂ. ಗಂಗಾಧರಸ್ವಾಮಿ ಅನುಮೋದನೆ ನೀಡಿದರು.

ಅವರು ಗುರುವಾರ ಜಿಲ್ಲಾಡಳಿತ ಭವನದಲ್ಲಿ ನಡೆದ 90ನೇ ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾರ್ಡ್ ನಂ.19ರ ಶೇಖರಪ್ಪ ನಗರದಲ್ಲಿರುವ ಕೊಳಚೆ ಪ್ರದೇಶದ ಗ್ರಂಥಾಲಯವನ್ನು 14ನೇ ವಾರ್ಡಿನಲ್ಲಿರುವ ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾದ ಕಟ್ಟಡಕ್ಕೆ ಸ್ಥಳಾಂತರಿಸಿ ಇಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅಧ್ಯಯನ ಕೇಂದ್ರ ಪ್ರಾರಂಭಿಸಲು ತಿಳಿಸಿದರು.ಕೆ.ಎಸ್.ಆರ್.ಟಿ.ಸಿ ಹೊಸ ಬಸ್ ನಿಲ್ದಾಣದಲ್ಲಿ ವಾಚನಾಲಯ ಪ್ರಾರಂಭ ಮಾಡಲು ಅನುಮೋದಿಸಿ, ವಿನೋಬನಗರ ಶಾಖಾ ಗ್ರಂಥಾಲಯಕ್ಕೆ ಮಹಾನಗರ ಪಾಲಿಕೆ ವತಿಯಿಂದ ಉಚಿತವಾಗಿ ಕಟ್ಟಡವನ್ನು ಪಡೆಯಲು ಉಪನಿರ್ದೇಶಕರಿಗೆ ಸೂಚನೆ ನೀಡಿ, ವಾರ್ಡ್ ನಂ. 20 ಹಾಗೂ 31 ರಲ್ಲಿ ಗ್ರಂಥಾಲಯ ತೆರೆಯಲು ತಿಳಿಸಿದರು.ಎಸ್. ನಿಜಲಿಂಗಪ್ಪ ಬಡಾವಣೆಯ ಗ್ರಂಥಾಲಯದ 1ನೇ ಮಹಡಿ ಕಟ್ಟಡ ಹಾಗೂ ಸಿಲ್ವರ್ ಜೂಬಿಲಿ ಶಾಖಾ ಗ್ರಂಥಾಲಯದಲ್ಲಿ ಇರುವ ಖಾಲಿ ಜಾಗದಲ್ಲಿ ಕಟ್ಟಡ ನಿರ್ಮಿಸಲು ಆದಷ್ಟು ಬೇಗನೆ ಲೋಕೋಪಯೋಗಿ ಇಲಾಖೆ ವತಿಯಿಂದ ಅಂದಾಜು ಪಟ್ಟಿ ತಯಾರಿಸಬೇಕು ಎಂದು ತಿಳಿಸಿದರು.ಮಹಾನಗರ ಪಾಲಿಕೆ ಮಹಾಪೌರ ಕೆ. ಚಮನ್ ಸಾಬ್ ಮಾತನಾಡಿ. ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಸೇವಾದಳ ಕಟ್ಟಡದ ಪಕ್ಕದಲ್ಲಿರುವ ಖಾಲಿ ಜಾಗವನ್ನು ಗ್ರಂಥಾಲಯಕ್ಕೆ ಪಡೆಯಲು ಹಾಗೂ ಮಹಾನಗರ ಪಾಲಿಕೆಯಲ್ಲಿ ಉಳಿದ ವಾರ್ಡುಗಳಲ್ಲಿ ಗ್ರಂಥಾಲಯವನ್ನು ಪ್ರಾರಂಭ ಮಾಡಬೇಕು ಎಂದು ಉಪನಿರ್ದೇಶಕರಿಗೆ ತಿಳಿಸಿದರು.ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ದರಾಮ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ರೂಪಶ್ರೀ, ರಾಜನಹಳ್ಳಿ ಸೀತಮ್ಮ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಎಂ.ಪಿ. ಮಂಜಪ್ಪ ಹಾಗೂ ಗ್ರಂಥಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.