ಕೆಜಿಎಫ್‌ನಲ್ಲಿ ಕೆಐಡಿಬಿಗೆ ಜಮೀನು ಮಂಜೂರು

| Published : Feb 09 2024, 01:48 AM IST

ಸಾರಾಂಶ

ಬಿಇಎಂಎಲ್ ಸಂಸ್ಥೆಯು ಜಾಗವನ್ನು ಬಳಕೆ ಮಾಡದೆ ಬಿಟ್ಟಿದ್ದ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಉದ್ದೇಶದಿಂದ ಸರ್ಕಾರ ಕ್ಷೇತ್ರದ ಜನರ ಮನವಿಗೆ ಸ್ಪಂದಿಸಿದೆ, ಇದೀಗ ಅಲ್ಲಿ ಕೈಗಾರಿಕೆಗಳು ಬರುವುದರಿಂದ ಯುವಕರು ಉದ್ಯೋಗಕ್ಕಾಗಿ ಅಲೆಯುವುದು ತಪ್ಪಲಿದೆ

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಕೆಜಿಎಫ್ ಸಮೀಪ ಬಿಇಎಂಎಲ್‌ಗೆ ನೀಡಿದ್ದ ಉಳಿಕೆ ಜಾಗದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಸ.ನಂ.೨ ರಲ್ಲಿನ ೬೬೮ ಎಕರೆ ಜಾಗವನ್ನು ಕೆಐಡಿಬಿಗೆ ಹಾಗೂ ಸ.ನಂ. ೩ ರಲ್ಲಿನ ೨೯೪ ಎಕರೆ ಪ್ರದೇಶವನ್ನು ಇಂಟಿಗ್ರೇಟೆಡ್ ಟೌನ್‌ಷಿಫ್‌ಗಾಗಿ ನಗರಾಭಿವೃದ್ದಿ ಇಲಾಖೆಗೆ ಮಂಜೂರು ಮಾಡಿಸುವಲ್ಲಿ ಶಾಸಕಿ ರೂಪಕಲಾ ಶಶಿಧರ್‌ ಯಶಸ್ವಿಯಾಗಿದ್ದಾರೆ.

ಕೆಜಿಎಫ್ ನಗರದ ಸಮಗ್ರ ಅಭಿವೃದ್ದಿಯ ಕನಸು ಹೊತ್ತು ಕಳೆದ ೧೦ ವರ್ಷದಿಂದ ಹೋರಾಟ ನಡೆಸಿರುವ ಶಾಸಕರು, ಸರ್ಕಾರದ ಮೇಲೆ ಒತ್ತಡ ತಂದು ಚಿನ್ನದ ಗಣಿಯ ನಿರುದ್ಯೋಗಿ ಯುವಕರ ಜೀವನ ಭದ್ರತೆಗೆ ಕೈಗಾರಿಕಾ ವಲಯ ಮಂಜೂರು ಮಾಡಿಸಿದ್ದಾರೆ. ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಬಲರಾಮ್ ರಾಜ್ಯಪಾಲರ ಹೆಸರಿನಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಉದ್ಯೋಗ ಸೃಷ್ಟಿಗೆ ಅವಕಾಶಈ ಕುರಿತು ಹೇಳಿಕೆ ನೀಡಿರುವ ಅವರು, ಬಿಇಎಂಎಲ್ ಸಂಸ್ಥೆಯು ಜಾಗವನ್ನು ಬಳಕೆ ಮಾಡದೆ ಬಿಟ್ಟಿದ್ದ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಉದ್ದೇಶದಿಂದ ಸರ್ಕಾರ ಕ್ಷೇತ್ರದ ಜನರ ಮನವಿಗೆ ಸ್ಪಂದಿಸಿದೆ, ಇದೀಗ ಅಲ್ಲಿ ಕೈಗಾರಿಕೆಗಳು ಬರುವುದರಿಂದ ಕೆಜಿಎಫ್‌ನ ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಅಲೆಯುವುದು ತಪ್ಪಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

೨೦೨೧ರಲ್ಲಿ ೫ ಎಕರೆ ಜಾಗ ಪ್ರಾದೇಶಿಕ ಸಾರಿಗೆ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ, ೨೦೨೨ರಲ್ಲಿ ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಹೆಸರಿಗೆ ೫ ಎಕರೆ, ೨೦೨೩ರಲ್ಲಿ ಬೀದಿಬದಿ ವಾಸವಿರುವ ವಸತಿ ರಹಿತ ದಿನಗೂಲಿ ಕಾರ್ಮಿಕರಿಗೆ ಪುನರ್ವಸತಿಗಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ೯ ಎಕರೆ ಮಂಜೂರು ಮಾಡಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಮಗೆ ಬರಬೇಕಾದ ತೆರಿಗೆ ಹಣ ಕೇಳಬಾರದೆ?ದೆಹಲಿಯಲ್ಲಿ ನಿಂತು ಘರ್ಜಿಸುವ ಧೈರ್ಯ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಟ್ಟು ಯಾರಿಗೂ ಇಲ್ಲ ಎಂದು ಕರಕುಶಲ ಅಭಿವೃದ್ಧಿ ಕೈಗಾರಿಕೆ ನಿಗಮ ಅಧ್ಯಕ್ಷೆ ಹಾಗೂ ಶಾಸಕಿ ರೂಪಕಲಾ ಶಶಿಧರ್ ಹೇಳಿದರು.ಕೇಂದ್ರ ಸರಸ್ಕಾರ ರಾಜ್ಯದ ಪಾಲಿನ ತೆರಿಗೆಯನ್ನು ಬಿಡುಗಡೆ ಮಾಡದೆ ತಾರತಮ್ಯ ಮಾಡುತ್ತಿದೆ. ೧೫ನೇ ಹಣಕಾಸು ಆಯೋಗದಿಂದಾಗಿ ತೆರಿಗೆಯೊಂದರಿಂದಲ್ಲೇ ರಾಜ್ಯಕ್ಕೆ ೬೨.೦೯೮ ಕೋಟಿ ರು.ಗಳ ಪಾಲು ಕೊಡಬೇಕಿತ್ತು, ಇದನ್ನು ನಮ್ಮ ಮುಖ್ಯ ಮಂತ್ರಿ ಪ್ರಶ್ನಿಸಬಾರದೇ, ಬಿಜೆಪಿಯವರು ನಿರಂತರ ಸುಳ್ಳುಗಳ ಮೂಲಕ ತಮ್ಮ ದ್ರೋಹ ಮರೆಮಾಚಲು ನೋಡುತ್ತಿದ್ದಾರೆ.ಕೇಂದ್ರದ ನಿರಂತರ ದ್ರೋಹ ಹಾಗೂ ವಂಚನೆಯಿಂದ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣ ಶೇ.೧೫ ರಿಂದ ಕೆಳಗೆ ಜಾರಿ ಶೇ.೯ಕ್ಕೆ ಕುಸಿದಿದೆ, ಈ ದೊಟ್ಟ ಕುಸಿತಕ್ಕೆ ಕೇಂದ್ರದ ಮಲತಾಯಿ ಧೋರಣೆ ಮತ್ತು ವಂಚನೆಯೇ ಕಾರಣ ಎಂದರು.ಪ್ರತಿಭಟನೆಗೆ ಗೈರು ಸ್ಪಷ್ಟೀಕರಣ: ದೆಹಲಿಯ ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕ್ಷೇತ್ರದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಭಾಗವಹಿಸಲು ಆಗುತ್ತಿಲ್ಲವೆಂದು ಮುಖ್ಯಮಂತ್ರಿ ಗಮನಕ್ಕೆ ತಂದು ಅನುಮತಿ ಪಡೆದಿದ್ದೇ ಎಂದರು.