ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಹೃದಯ ಭಾಗದಲ್ಲಿರುವ ಜೂನಿಯರ್ ಕಾಲೇಜಿನ ಹಿಂಭಾಗದಲ್ಲಿರುವ ಸುಮಾರು ೫೭ ಕುಟುಂಬಗಳಿಗೆ ರಾಯಪುರ ಬಳಿ ಇರುವ ಸರ್ವೆ ನಂ ೧೪೯ರಲ್ಲಿ ೫ ಎಕರೆ ಜಾಗವನ್ನು ಈಗಾಗಲೇ ಗುರುತು ಮಾಡಿದ್ದು, ಆ ಜಾಗಕ್ಕೆ ನಿವಾಸಿಗಳನ್ನು ಕೂಡಲೇ ಸ್ಥಳಾಂತರ ಮಾಡಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ ಎಚ್ ಕೆ ಸುರೇಶ್ ತಿಳಿಸಿದರು.ಪುರಸಭೆ ಅಧ್ಯಕ್ಷರ ಕಚೇರಿಯಲ್ಲಿ ಕರೆಯಲಾಗಿದ್ದ ಆಶ್ರಯ ನಿವೇಶನಗಳನ್ನು ಹಂಚುವ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಾಲೇಜು ಮೈದಾನದಲ್ಲಿ ಇರುವ ೫೭ ಗುಡಿಸಲು ಇದು ವಿಶ್ವ ಪ್ರಖ್ಯಾತಿ ಬೇಲೂರು ಪ್ರವಾಸಿ ತಾಣವಾಗಿದ್ದು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ತೊಂದರೆಯಾಗುತ್ತಿರುವುದರಿಂದ ಅಲ್ಲಿರುವ ಗುಡಿಸಲು ನಿವಾಸಿಗಳನ್ನು ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಅದಕ್ಕೂ ಮೊದಲು ಸ್ಥಳಾಂತರ ಜಾಗದಲ್ಲಿ ಮೂಲಭೂತ ಸೌಕರ್ಯಗಳು ಆಗಬೇಕಿದ್ದು ರಸ್ತೆ, ಚರಂಡಿ, ಯುಜಿಡಿ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಗೌರವಯುತವಾಗಿ ಸ್ಥಳಾಂತರಿಸಲು ಯೋಜನೆ ರೂಪಿಸಬೇಕಿದೆ. ಅದಕ್ಕಾಗಿ ರಾಜೀವ್ ಗಾಂಧಿ ಹಾಗೂ ವಾಜಪೇಯಿ ನಿಗಮದ ಆಶ್ರಯ ಸಮಿತಿ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಅಧಿಕಾರಿಗಳ ಹಾಗೂ ಸಮಿತಿಯ ಸದಸ್ಯರ ಸಭೆ ಕರೆದು ತೀರ್ಮಾನಿಸಲಾಗಿದೆ. ಸಾರ್ವಜನಿಕರ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಅವರ ಹೆಸರು ಶಾಶ್ವತವಾಗಿರುತ್ತದೆ. ನಗರದಲ್ಲಿ ನಿರ್ಗತಿಕ ಕುಟುಂಬಗಳು ಹಾಗೂ ಬಡವರ್ಗದವರನ್ನು ಗುರ್ತಿಸಿ ನಿವೇಶನ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಮಾತನಾಡಿ, ಬಂಟೇನಹಳ್ಳಿ ಹಾಗೂ ರಾಯಪುರ ಬಳಿ ವಸತಿ ನಿವೇಶನ ರಹಿತರಿಗೆ ಜಾಗ ಗುರ್ತಿಸಿದ್ದು ಬಂಟೇನಹಳ್ಳಿ ಸರ್ವೆ ೧೫೮ರಲ್ಲಿ ಮೂರು ಎಕರೆ ೧೮ ಕುಂಟೆ ಜಾಗ ಸಂಪೂರ್ಣವಾಗಿ ಸಿದ್ಧವಿದ್ದು ಅಲ್ಲಿ ಜಾಗದ ಮಾಲೀಕರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಇದು ತಾತ್ಕಾಲಿಕವಾಗಿ ತಡೆಯಾಗಿದ್ದು ಈ ಜಾಗದ ಬಗ್ಗೆ ಸಾರ್ವಜನಿಕರ ಜನತಾ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ ಇತ್ಯರ್ಥ ಪಡಿಸಿದರೆ ಈ ಜಾಗವನ್ನು ಒಂದು ತಿಂಗಳೊಳಗಾಗಿ ನಿವೇಶನವನ್ನು ಹಂಚಬಹುದು. ಅದರಂತೆ ರಾಯಪುರ ಬಳಿ ಈಗಾಗಲೇ ನಿವೇಶನ ಗುರ್ತು ಮಾಡಿರುವ ಸ್ಥಳದಲ್ಲಿ ಮೊದಲ ಹಂತದಲ್ಲಿ ಗುಡಿಸಲು ನಿವಾಸಿಗಳಿಗೆ ಪೌರ ಕಾರ್ಮಿಕರಿಗೆ ಹಾಗೂ ಪತ್ರಕರ್ತರಿಗೆ ಮತ್ತು ನೀರು ಸರಬರಾಜು ಮಾಡುವ ಬಡ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಪ್ರತೀ ವಾರ್ಡ್‌ಗಳಲ್ಲಿ ನಿವೇಶನ ರಹಿತ ಬಡವರ್ಗದವರನ್ನು ಗುರ್ತಿಸಿ ಅವರಿಗೆ ನಿವೇಶನ ನೀಡಿದರೆ ೨೫ ವರ್ಷಗಳಿಂದ ಆಶ್ರಯ ಸಮಿತಿ ಸಭೆ ನಡೆದಿಲ್ಲ. ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರೆ ಒಳ್ಳೆಯದು. ಬಡಾವಣೆಗಳ ಅಭಿವೃದ್ಧಿಪಡಿಸಲು ಸಂಪನ್ಮೂಲಗಳ ಅವಶ್ಯಕತೆ ಅತಿಮುಖ್ಯವಾಗಿದೆ. ಅಲ್ಲದೆ ೨೫ ವರ್ಷಗಳ ಹಿಂದೆ ಇದ್ದ ಮಾಜಿ ಶಾಸಕರು ಕೆಲವರಿಗೆ ನಿವೇಶನ ಹಂಚಿದ್ದು ಬಿಟ್ಟರೆ ನಂತರ ಬಂದಂತ ಶಾಸಕರು ನಿವೇಶನ ಹಂಚಲು ಮುಂದಾಗಿಲ್ಲ. ಈಗಿನ ಶಾಸಕರು ಆದಷ್ಟು ಬೇಗ ನಿವೇಶನಗಳನ್ನು ಹಂಚಲು ಮುಂದಾದರೆ ಅವರಿಗೆ ಸಂಪೂರ್ಣ ಸಹಕಾರವನ್ನು ಪುರಸಭೆ ವತಿಯಿಂದ ನೀಡಲಾಗುತ್ತದೆ ಎಂದು ಹೇಳಿದರು.ಆಶ್ರಯ ಸಮಿತಿಯ ಸದಸ್ಯರಾದ ಇಕ್ಬಾಲ್ ಹಾಗೂ ಹರೀಶ್ ಮಾತನಾಡಿ, ಈ ಹಿಂದೆ ನೂರಾರು ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಕೆಲವರು ನಿವೇಶನಗಳನ್ನು ಪಡೆದಂತವರು ಒಳಬಾಡಿಗೆ ಸೇರಿದಂತೆ ಇನ್ನು ಸುಮಾರು ನೂರಕ್ಕೂ ಹೆಚ್ಷು ಖಾಲಿ ನಿವೇಶನಗಳು ಶಂಕರ ದೇವರ ಪೇಟೆ ಹೊಸನಗರ, ಚನ್ನಕೇಶವ ನಗರ ಬಡಾವಣೆಗಳಲ್ಲಿ ಖಾಲಿ ಇದ್ದು ಅವು ಯಾರ ಹೆಸರಿನಲ್ಲಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಮೊದಲು ಪತ್ತೆ ಹಚ್ಚಿದರೆ ಅದರಲ್ಲಿ ಗುರುತು ಮಾಡಿದರೆ ಈ ೫೭ ಜನರಿಗೆ ಮೊದಲ ಹಂತದಲ್ಲೇ ಒಂದು ವಾರದಲ್ಲಿ ಗುಡಿಸಲು ನಿವಾಸಿಗಳಿಗೆ ನಿವೇಶನ ಹಂಚಬಹುದು. ಇದರ ಜೊತೆ ನಗರವಾಸಿಗಳಿಗೆ ಕಡುಬಡವರಿಗೆ ಗುರುತು ಮಾಡಿ ನಿವೇಶನ ಹಂಚುವಂತೆ ಮನವಿ ಮಾಡಿದರು.
ಆಶ್ರಯ ಸಮಿತಿ ಸದಸ್ಯರಾದ ನಾಗರಾಜ್, ಮುಖ್ಯಾಧಿಕಾರಿ ಸುಜಯ್, ಕಂದಾಯ ಅಧಿಕಾರಿಗಳಾದ ಗೋಪಿ, ಪ್ರಶಾಂತ್, ಎಂಜಿನಿಯರ್ ಮೋಹನ್, ಆರೋಗ್ಯಾಧಿಕಾರಿ ಲೋಹಿತ್ ಇದ್ದರು.* ಹೇಳಿಕೆ- 1 ಕೆಲವ ಪ್ರಭಾವಿ ವ್ಯಕ್ತಿಗಳು ಅವರ ಜಾಗಕ್ಕಿಂತ ಹೆಚ್ಚಿನ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅಲ್ಲದೇ ಬೇರೆಯವರ ಹೆಸರಿನಲ್ಲಿ ಹಲವು ನಿವೇಶನ ಪಡೆದು ಒಳಬಾಡಿಗೆ ನೀಡಿದ್ದಾರೆ. ಅವರಿಗೆ ನೀಡಿರುವ ಮನೆಗಳಲ್ಲಿ ವಾಸವಿಲ್ಲದೆ ಮನೆಗಳನ್ನು ಗುರ್ತಿಸಿ ಪುರಸಭೆಯವರು ಬಡವರಿಗೆ ನೀಡಿದರೆ ಒಳ್ಳೆಯದು. - ಡಿಂಪಲ್ ರಾಣಿ, ಪುರಸಭೆ ಸದಸ್ಯೆ