ಸಾರಾಂಶ
ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ ಮತ್ತು ಭೇಟಿಗೆ ಪಿಡಿಒಗಳು ದಿನ ನಿತ್ಯ 2 ತಾಸು ಸಮಯ ಕೊಡಬೇಕು.
ಕನ್ನಡಪ್ರಭ ವಾರ್ತೆ ಕನಕಗಿರಿ
ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ ಮತ್ತು ಭೇಟಿಗೆ ಪಿಡಿಒಗಳು ದಿನ ನಿತ್ಯ 2 ತಾಸು ಸಮಯ ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಪಂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.ಕೆಲ ಪಿಡಿಒಗಳ ಬಗ್ಗೆ ಉದ್ದಟತನ ತೋರಿರುವ ಮಾಹಿತಿ ಬಂದಿದೆ. ಯಾವ ಅಧಿಕಾರಿಗಳೇ ಆಗಿರಲಿ ಸಾರ್ವಜನಿಕರ ಕೆಲಸ, ಕಾರ್ಯಗಳಿಗೆ ತಡೆಯೊಡ್ಡದೆ ನಿಗದಿತ ಸಮಯದೊಳಗೆ ಮಾಡಿಕೊಡಬೇಕು. ಪಂಚಾಯಿತಿ ಕೇಂದ್ರ ಸ್ಥಾನ ಹಾಗೂ ಅಕ್ಕಪಕ್ಕದ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಗಲೀಜು ಇರುವ ಪ್ರದೇಶಗಳಲ್ಲಿ ಸಿಸಿ ಮತ್ತು ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕು. ಗ್ರಾಮೀಣದಲ್ಲಿ ಪ್ರದೇಶದಲ್ಲಿ ಬಾಕಿ ಉಳಿದಿರುವ ಹಕ್ಕುಪತ್ರಗಳನ್ನು ವಿತರಿಸಲು ಮುಂದಾಗುವಂತೆ ಸೂಚಿಸಿದರು.
ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಸಿಸಿ ಹಾಗೂ ಚರಂಡಿ ನಿರ್ಮಾಣಕ್ಕೆ ₹40 ಕೋಟಿ ಅನುದಾನ ಮಂಜೂರಾಗಲಿದೆ. ಕಾಮಗಾರಿ ಗುಣಮಟ್ಟದಿಂದ ಮಾಡಲು ಗುತ್ತಿಗೆದಾರರಿಗೆ ಸೂಚಿಸಬೇಕು. ಕಳಪೆಯಾಗುವುದು ಕಂಡು ಬಂದಲ್ಲಿ ಪಿಡಿಒ ಅವರನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿ ಪಿಡಿಒಗಳು ಹಾಗೂ ತಾಪಂ ಇಒ ಜಂಟಿಯಾಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವ್ಯವಸ್ಥೆ ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.ತಾಪಂ ಇಒಗಳಾದ ಕೆ. ರಾಜಶೇಖರ, ಲಕ್ಷ್ಮೀದೇವಿ, ಸಹಾಯಕ ನಿರ್ದೇಶಕರಾದ ಶರಪೊನ್ನಿಸಾ ಬೇಗಂ, ವನಜಾಕ್ಷಿ, ವೀರಣ್ಣ ನಕ್ರಳ್ಳಿ ಸೇರಿದಂತೆ ತಾಪಂ ಸಿಬ್ಬಂದಿ, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ನರೇಗಾ ತಾಂತ್ರಿಕ ಸಿಬ್ಬಂದಿ ಇದ್ದರು.ಟ್ಯಾಗ್ ಕಡ್ಡಾಯವಾಗಿ ಬಳಸಲು ಸೂಚನೆ:
ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಪಿಡಿಒಗಳು ಹಾಗೂ ಎಂಜಿನಿಯರ್‌ಗಳು ಇಲಾಖೆ ನೀಡಿದ ಟ್ಯಾಗ್ ಕೊರಳಲ್ಲಿ ಹಾಕಿಕೊಂಡಿರಲಿಲ್ಲ. ಇದನ್ನು ಗಮನಿಸಿದ ಸಚಿವ ತಂಗಡಗಿ ಕೊರಳಲ್ಲಿ ಟ್ಯಾಗ್ ಇಲ್ಲದ ಅಧಿಕಾರಿಗಳನ್ನು ನಿಲ್ಲಿಸಿ ಟ್ಯಾಗ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ನಿಮ್ಮ ಬಗ್ಗೆ ಸಾರ್ವಜನಿಕರು ಏನು ಅರ್ಥೈಸಿಕೊಳ್ಳಬೇಕು? ಈ ರೀತಿ ಮುಂದಿನ ಸಭೆಯಲ್ಲಿ ಆಗಬಾರದು. ಅಧಿಕಾರಿಗಳು, ಸಿಬ್ಬಂದಿಗೂ ಟ್ಯಾಗ್ ಬಳಸುವಂತೆ ಖಡಕ್ಕಾಗಿ ಸೂಚಿಸಿದರು.