ಸಾರಾಂಶ
ನನ್ನನ್ನು ನೌಕರಿಗೆ ನೇಮಿಸಿಕೊಳ್ಳಿ ಇಲ್ಲವೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಜಿಲ್ಲಾ ಆಯುಷ್ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ ವಿಜಯಲಕ್ಷ್ಮೀ ಸರೂರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನನ್ನನ್ನು ನೌಕರಿಗೆ ನೇಮಿಸಿಕೊಳ್ಳಿ ಇಲ್ಲವೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಜಿಲ್ಲಾ ಆಯುಷ್ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ ವಿಜಯಲಕ್ಷ್ಮೀ ಸರೂರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಹುನಗುಂದ ತಾಲೂಕು ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವೇಳೆ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ ಕಾರಣ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೆಲಸದಿಂದ ನನ್ನನ್ನು ವಜಾಗೊಳಿಸಲಾಗಿದೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದೆ. ನ್ಯಾಯಾಲಯ 2025ರ ಜನವರಿ 16ರಂದು ಮರಳಿ ಕೆಲಸಕ್ಕೆ ಸೇರ್ಪಡೆಗೊಳಿಸುವಂತೆ ಆದೇಶ ನೀಡಿದೆ. ಆದೇಶ ಬಂದು ನಾಲ್ಕು ತಿಂಗಳು ಕಳೆದರೂ ಸಂಬಂಧಿತ ಅಧಿಕಾರಿಗಳು ಸೇವೆಗೆ ಸೇರಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ವಾರದೊಳಗಾಗಿ ಮತ್ತೆ ಕೆಲಸಕ್ಕೆ ಸೇರಿಸಿ ಕೊಳ್ಳದಿದ್ದರೆ ಜಿಲ್ಲಾ ಆಯುಷ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇನೆ ಎಂದವರು ಎಚ್ಚರಿಕೆ ನೀಡಿದರು.
ಸರ್ಕಾರಿ ವಸತಿ ಗೃಹಕ್ಕೆ ಅಧಿಕಾರಿಗಳನ್ನು ಯಾರು ಕರೆಸಿದ್ದರು ಎಂಬುವುದಕ್ಕೆ ಸಂಬಂಧಿಸಿದ ಆಡಿಯೋ ಸಾಕ್ಷ್ಯ ಹೊರಹಾಕುವುದಾಗಿ ಅವರು ತಿಳಿಸಿದ್ದಾರೆ.