ಎಂಎಲ್ಸಿಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸಿ

| Published : May 26 2024, 01:39 AM IST

ಎಂಎಲ್ಸಿಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ತಿಂಗಳು ವಿಧಾನ ಪರಿಷತ್ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಏಳು ಸ್ಥಾನಗಳು ಸಿಗಲಿದೆ. ಹಾಗಾಗಿ ಅದರಲ್ಲಿ ಉತ್ತರ ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ವಿಜಯಪುರ ಜಿಲ್ಲೆಗೆ ಆದ್ಯೆತೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಅಲ್ಪಸಂಖ್ಯಾತ ಮುಖಂಡ ಎಂ.ಸಿ.ಮುಲ್ಲಾ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮುಂದಿನ ತಿಂಗಳು ವಿಧಾನ ಪರಿಷತ್ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಏಳು ಸ್ಥಾನಗಳು ಸಿಗಲಿದೆ. ಹಾಗಾಗಿ ಅದರಲ್ಲಿ ಉತ್ತರ ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ವಿಜಯಪುರ ಜಿಲ್ಲೆಗೆ ಆದ್ಯೆತೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಅಲ್ಪಸಂಖ್ಯಾತ ಮುಖಂಡ ಎಂ.ಸಿ.ಮುಲ್ಲಾ ಆಗ್ರಹಿಸಿದರು.

ನಗರದಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ‌ ಹಾಗೂ ಅಲ್ಪಸಂಖ್ಯಾತರ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಈ ಬಾರಿ ಇಲ್ಲಿನ ಓರ್ವ ಮುಸ್ಲಿಂ ವರ್ಗದವರಿಗೆ ಅವಕಾಶ ಕೊಡಬೇಕು ಎಂದು ಜಿಲ್ಲಾ, ರಾಜ್ಯ ಮಟ್ಟದ ನಾಯಕರಿಗೆ ಒತ್ತಾಯಿಸಿದರು. ಇದುವರೆಗೂ ಎಂಎಲ್‌ಸಿ ಸ್ಥಾನ ಸಿಗದೆ ವಂಚಿತ ಆಗಿರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದರು.

ಈ ಬಾರಿ ಕಾಂಗ್ರೆಸ್‌ಗೆ ಒಲಿಯಲಿರುವ 7 ಸ್ಥಾನಗಳಲ್ಲಿ ವಿಜಯಪುರದಲ್ಲಿನ ಕಾಂಗ್ರೆಸ್ ಅಲ್ಪಸಂಖ್ಯಾತರ ನಾಯಕರೊಬ್ಬರಿಗೆ ಅವಕಾಶ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ವಿಜಯಪುರ ಸೇರಿ ರಾಜ್ಯದ ಹಲವೆಡೆ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಶೇ.99ರಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್ ಗೆ ಮತದಾನ ಮಾಡುತ್ತದೆ. ಹೀಗಾಗಿ ಪಕ್ಷದ ಮಂತ್ರಿಗಳು, ಶಾಸಕರು, ಜಿಲ್ಲಾಧ್ಯಕ್ಷರು ಅಲ್ಪಸಂಖ್ಯಾತರಿಗೆ ಅವಕಾಶ ಕೊಡಿಸುವ ಕೆಲಸ ಮಾಡಬೇಕು. ಬೇರೆ ಜಿಲ್ಲೆಗಳಲ್ಲಿ ಹೇಗೆ ಅಲ್ಪಸಂಖ್ಯಾತರಿಗೆ ಅವಕಾಶ ಮಾಡುತ್ತಾರೆ, ಅದೇ ರೀತಿ ನಮ್ಮ ಜಿಲ್ಲೆಯ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರನ್ನು ಎಂಎಲ್‌ಸಿ ಮಾಡಬೇಕು ಎಂದರು.

ಇದುವರೆಗೂ ವಿಧಾನ ಪರಿಷತ್‌ಗೆ ಎಲ್ಲ ವರ್ಗಗಳಿಗೂ ಅವಕಾಶ ಸಿಕ್ಕಿದೆ. ಆದರೆ ಅಲ್ಪ ಸಂಖ್ಯಾತರಿಗೆ ಸಿಕ್ಕಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಮತದಾರರೇ ಕಾರಣ‌ ಎಂದು ಹೇಳಿದರು.

ಪದೇ ಪದೇ ಬೆಂಗಳೂರು, ಮೈಸೂರು ಭಾಗದವರನ್ನೇ ಆಯ್ಕೆ ಮಾಡುವ ಬದಲು, ಈ ಭಾಗಕ್ಕೂ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಇಂದೇ ಜಿಲ್ಲಾ ಮುಖಂಡರಿಗೂ ಮನವಿ ಕೊಡಲಾಗುವುದು. ಅಲ್ಪಸಂಖ್ಯಾತರ ಮುಖಂಡರು ಸೇರಿ ಇಬ್ಬರು ಸಚಿವರು, ಶಾಸಕರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಫಯಾಜ್ ಕಲಾದಗಿ, ದಸ್ತಗೀರ ಸಾಲೊಟಗಿ, ಅಕ್ರಮ ಮಾಶಾಳಕರ, ಜಮೀರ ಹಮ್ಮದ ಭಕ್ಷಿ, ಶಬ್ಬಿರ ಜಹಾಗಿರದಾರ ಉಪಸ್ಥಿತರಿದ್ದರು.