ಮೈಸೂರು ಅಂಧ ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕೆ ಅವಕಾಶ: ಡಾ.ಎಚ್.ಎಲ್. ನಾಗರಾಜು

| Published : Jul 29 2024, 12:49 AM IST

ಮೈಸೂರು ಅಂಧ ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕೆ ಅವಕಾಶ: ಡಾ.ಎಚ್.ಎಲ್. ನಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನ ತಿಲಕ್ ನಗರದ ಸರ್ಕಾರಿ ಅಂಧ ಮಕ್ಕಳ ಶಾಲೆಯಲ್ಲಿ ವಸತಿ, ಊಟ, ಆರೋಗ್ಯ ತಪಾಸಣೆ, ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಿದ್ದು, ಇಲ್ಲಿ ಒಳ್ಳೆಯ ಶಿಕ್ಷಣ ಪಡೆದು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲೆಯ ಅಂಧ ಮಕ್ಕಳಿಗೆ ಮೈಸೂರಿನ ತಿಲಕ್ ನಗರದ ಅಂಧ ಮಕ್ಕಳ ಪ್ರವೇಶ ಶಾಲೆಯಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶೇ.40ಕ್ಕಿಂತ ಹೆಚ್ಚು ದೃಷ್ಟಿದೋಷವುಳ್ಳ ಮಕ್ಕಳನ್ನು ಅಂಧ ಮಕ್ಕಳ ಪಾಠಶಾಲೆಗೆ ದಾಖಲಿಸುವ ಹಾಗೂ ನೇತ್ರ ತಜ್ಞರಿಂದ ತಪಾಸಣಾ ಶಿಬಿರ ಆಯೋಜಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.

ಮೈಸೂರಿನ ತಿಲಕ್ ನಗರದ ಸರ್ಕಾರಿ ಅಂಧ ಮಕ್ಕಳ ಶಾಲೆಯಲ್ಲಿ ವಸತಿ, ಊಟ, ಆರೋಗ್ಯ ತಪಾಸಣೆ, ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಿದ್ದು, ಇಲ್ಲಿ ಒಳ್ಳೆಯ ಶಿಕ್ಷಣ ಪಡೆದು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬಹುದಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿರುವ ದೃಷ್ಟಿ ದೋಷವುಳ್ಳ ಮಕ್ಕಳನ್ನು ಮೈಸೂರಿನಲ್ಲಿರುವ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಗೆ ದಾಖಲಿಸಲು ದೃಷ್ಟಿ ದೋಷವುಳ್ಳ ಮಕ್ಕಳ ಪೋಷಕರನ್ನು ಭೇಟಿ ಮಾಡಿ. ಅಲ್ಲಿ ಸಿಗುವ ಸೌಲಭ್ಯ ಸವಲತ್ತುಗಳ ಬಗ್ಗೆ ತಿಳಿಸಿ ಪೋಷಕರ ಮನವೊಲಿಸಿ ಎಂದರು.

ಜಿಲ್ಲೆಯಲ್ಲಿ 6ರಿಂದ 16 ವರ್ಷದೊಳಗಿನ ಒಟ್ಟು 89 ಜನ ದೃಷ್ಠಿ ದೋಷವುಳ್ಳ ವಿಕಲಚೇತನರಿದ್ದಾರೆ. ಅದರಲ್ಲಿ 83 ಜನ ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉಳಿದ 6 ಜನ ಮಕ್ಕಳು ಯಾವುದೇ ಶಾಲೆಯಲ್ಲಿ ವ್ಯಾಸಂಗ ಮಾಡದೆ ಮನೆಯಲ್ಲಿಯೇ ಉಳಿದುಕೊಂಡಿರುತ್ತಾರೆ. ಅವರ ಪೋಷಕರನ್ನು ಮೈಸೂರಿನ ಅಂಧ ಮಕ್ಕಳ ಶಾಲೆಗೆ ದಾಖಲಿಸಲು ತಿಳಿಸಿ ಎಂದರು.

ಜಿಲ್ಲೆಯಲ್ಲಿ ಒಟ್ಟು 2966 ಜನ ವಿಕಲತೆವುಳ್ಳ ಅಂಧ ವಿಕಲಚೇತನರಿದ್ದಾರೆ. ಮಂಡ್ಯ ತಾಲ್ಲೂಕಿನಲ್ಲಿ - 744, ಮದ್ದೂರು - 420, ಮಳವಳ್ಳಿ - 528, ಶ್ರೀರಂಗಪಟ್ಟಣ - 206, ಪಾಂಡವಪುರ - 294, ನಾಗಮಂಗಲ - 348, ಕೆ ಆರ್ ಪೇಟೆ ತಾಲೂಕಿನಲ್ಲಿ - 426 ಅಂಧ ವಿಕಲಚೇತನರಿದ್ದಾರೆ ಎಂದರು.

ಮೈಸೂರಿನ ತಿಲಕ ನಗರದಲ್ಲಿರುವ ಸರ್ಕಾರಿ ಅಂಧ ಮಕ್ಕಳ ಪಾಠ ಶಾಲೆಯಲ್ಲಿ ಈಗಾಗಲೇ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಕೆಲ ಅಂಧ ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಅಂತವರಿಗೆ ಇದು ಒಳ್ಳೆಯ ಅವಕಾಶವಾಗಿದೆ ಎಂದರು.

ಜಿಲ್ಲೆಯಲ್ಲಿರುವ ಒಟ್ಟು 89 ಮಕ್ಕಳು ಅಲ್ಲಿ ಶಿಕ್ಷಣ ಪಡೆಯುವಂತೆ ತಿಳಿಸಿ. ಎಲ್ಲಾ ಅಂಧ ಮಕ್ಕಳ ಪೋಷಕರು ಮೈಸೂರಿನ ಅಂಧ ಮಕ್ಕಳ ಶಾಲೆಗೆ ಒಮ್ಮೆ ಭೇಟಿ ನೀಡಿದಾಗ ಅಲ್ಲಿ ಸಿಗುವ ಸೌಲಭ್ಯಗಳ ಅರಿವಾಗುತ್ತದೆ ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ, ಡಿಎಚ್ ಒ ಡಾ.ಮೋಹನ್, ಜಿಪಂ ಸಹಾಯಕ ಕಾರ್ಯದರ್ಶಿ ಮೋಹನ್ ಕುಮಾರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಮಿಮ್ಸ್ ಅಧೀಕ್ಷಕ ಡಾ.ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.