ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ರಾಜಕೀಯ ಪ್ರೇರಿತ: ಶಿವನಂಜು

| Published : Aug 19 2024, 12:46 AM IST

ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ರಾಜಕೀಯ ಪ್ರೇರಿತ: ಶಿವನಂಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಪಾಲರು ಬಿಜೆಪಿ ಕೈಗೊಂಬೆಯಂತೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ಪ್ರಜ್ಞಾವಂತ ನಾಗರಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಗ್ರವಾಗಿ ಖಂಡಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಹೇಳಿದರು.

ರಾಜ್ಯಪಾಲರು ಬಿಜೆಪಿ ಕೈಗೊಂಬೆಯಂತೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ಪ್ರಜ್ಞಾವಂತ ನಾಗರಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಗ್ರವಾಗಿ ಖಂಡಿಸುತ್ತೇವೆ. ಅಂತೆಯೇ ಪಕ್ಷಪಾತದಿಂದ ವರ್ತಿಸುತ್ತಿರುವ ರಾಜ್ಯಪಾಲರು ರಾಜ್ಯವನ್ನು ಬಿಟ್ಟು ತೊಲಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ನಗರಸಭೆ ಸದಸ್ಯ ಶ್ರೀಧರ್, ಕೆಡಿಪಿ ನಾಮನಿರ್ದೇಶಿತ ಸದಸ್ಯ ಸಿ.ಎಂ.ದ್ಯಾವಪ್ಪ, ಕೆ.ಎಲ್.ನಾಗೇಂದ್ರ, ನಾಗೇಶ್, ರಾಜಣ್ಣ ಗೋಷ್ಠಿಯಲ್ಲಿದ್ದರು.

ರಾಜ್ಯಪಾಲರ ಕ್ರಮ ರಾಜಕೀಯ ಪಿತೂರಿ: ಡಾ.ಮಾದೇಶ್ ಗುರೂಜಿ

ಕೆ.ಆರ್.ಪೇಟೆ:ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಒಪ್ಪಿಗೆ ನೀಡಿದ ರಾಜ್ಯಪಾಲರ ಕ್ರಮ ರಾಜಕೀಯ ಪಿತೂರಿಯಾಗಿದೆ ಎಂದು ದೇವನೂರು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಮಾದೇಶ್ ಗುರೂಜಿ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಸಿಕ್ಯೂಷನ್ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜಕೀಯ ಒಳಸಂಚು ಇದೆ. ಇದಕ್ಕಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ. ಆದರೆ, ತಮ್ಮ ವಿರುದ್ಧ ಆರೋಪದ ತನಿಖೆ ಎದುರಿಸಿ ಆರೋಪ ಮುಕ್ತರಾಗಲಿ ಎಂದರು.ಸಿದ್ದರಾಮಯ್ಯ ನಾಡಿನ ದೀನ, ದಲಿತರು ಮತ್ತು ಅಲ್ಪಸಂಖ್ಯಾತರ ಪರ ರಾಜಕಾರಣಿ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಬಡವರ ನೆರವಿಗೆ ನಿಂತಿದ್ದಾರೆ. ಹಿಂದುಳಿದ ಪರ ನಾಯಕನ ವಿರುದ್ಧ ಸಲ್ಲದ ಅಪಪ್ರಚಾರ ನಡೆಸುತ್ತಾ ಪರಿಶುದ್ಧ ರಾಜಕಾರಣಕ್ಕೆ ಕಳಂಕ ಹಚ್ಚುವ ಪ್ರಯತ್ನ ನಡೆಸಲಾಗಿದೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯು ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧವೂ ಹಲವು ಬ್ರಹ್ಮಾಂಡದಷ್ಟು ಆರೋಪಗಳಿವೆ. ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.