ಸಾರಾಂಶ
ಆರನೇ ಸುತ್ತಿನ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರೈತರ ಉಪ ಕಸುಬಾದ ಹೈನುಗಾರಿಕೆಗೆ ಉತ್ತೇಜನ ನೀಡಲು ಸರ್ಕಾರ ಹೊಸ ಹೊಸ ತಳಿಗಳನ್ನು ಸಂಶೋಧನೆ ಮಾಡಿ ರಾಸುಗಳ ರಕ್ಷಣೆಗೆ ಮುಂದಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ತೇಗೂರು ಗ್ರಾಪಂ ವ್ಯಾಪ್ತಿಯ ನಲ್ಲೂರಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ತಾಲೂಕು ಪಂಚಾಯ್ತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಆರನೇ ಸುತ್ತಿನ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ರೈತರ ಜೀವನಾಡಿಯಾದ ಪಶು ಸಂಗೋಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಹೊಸ ಹೊಸ ತಳಿಗಳನ್ನು ಸಂಶೋಧಿಸಿ ರಕ್ಷಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ರಾಸುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆಯನ್ನು ಹಾಕಿಸುವ ಮೂಲಕ ಅವುಗಳ ರಕ್ಷಣೆ ಮಾಡಬೇಕೆಂದು ಹೇಳಿದರು.ಕೃಷಿಯ ಜೊತೆಗೆ ಉಪ ಕುಸುಬಾಗಿ ಹೈನುಗಾರಿಕೆ ಪ್ರಾರಂಭಿಸಿದರೆ ರೈತರ ಆರ್ಥಿಕ ಮಟ್ಟ ಸುಧಾರಿಸುತ್ತದೆ. ಆದ್ದರಿಂದ ಗೋವುಗಳನ್ನು ಹೊಂದಿರುವ ರೈತರು ಉದಾಸೀನ ಮಾಡದೆ ಲಸಿಕೆ ಹಾಕಿಸುವ ಮೂಲಕ ಕಾಲುಬಾಯಿ ರೋಗ ಸಂಪೂರ್ಣ ನಿಯಂತ್ರಣಕ್ಕೆ ಸಹಕರಿಸ ಬೇಕೆಂದು ಮನವಿ ಮಾಡಿದರು.ದೇಶದಲ್ಲೇ ಕರ್ನಾಟಕ ರಾಜ್ಯ ಹಸುಗಳಿಗೆ ಲಸಿಕೆ ಹಾಕುವ ಆರನೇ ಸುತ್ತಿನ ಲಸಿಕಾ ಅಭಿಯಾನ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಮಿಶ್ರ ಬೆಳೆ ಜೊತೆಗೆ ಹೈನುಗಾರಿಕೆ ಮುಂದುವರೆಸುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬೇಕೆಂದು ಕರೆ ನೀಡಿದರು.ಜಿಲ್ಲೆಯಲ್ಲಿ ಅತೀ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆಯಾಗುತ್ತಿರುವುದರಿಂದ ಕೆಎಂಎಫ್ ಮೂಲಕ ವಿದೇಶಗಳಿಗೆ ಹಾಲನ್ನು ರಫ್ತು ಮಾಡಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಇದು ಸಮರ್ಪಕವಾಗಿ ಆದಾಗ ರೈತರಿಗೆ ಹೆಚ್ಚು ಸಹಾಯಧನ ಸಿಗುತ್ತದೆ ಎಂದು ಹೇಳಿದರು.ಜಿಲ್ಲೆಗೆ ಪ್ರತ್ಯೇಕ ಡೈರಿ ಸ್ಥಾಪನೆ ಬಗ್ಗೆ ಸರ್ಕಾರ ಈಗಾಗಲೇ ಸಂಬಂಧಿಸಿದ ಇಲಾಖೆಗೆ ಸರ್ವೆ ಮಾಡಲು ಸೂಚನೆ ನೀಡಿದೆ. ಹೆಚ್ಚು ಹಾಲು ಉತ್ಪಾದನೆಯಾದ ವರದಿ ಬಂದರೆ ಪ್ರತ್ಯೇಕ ಡೈರಿ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ ಅವರು, ನಗರದಲ್ಲಿ ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಮೋಹನ್‌ಕುಮಾರ್ ಮಾತನಾಡಿ, ಎಲ್ಲಾ ರಾಸುಗಳಿಗೆ ವ್ಯಾಕ್ಸಿನ್ ಹಾಕಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಹಿಂದೆ ಕಾಲುಬಾಯಿ ರೋಗ ಹೆಚ್ಚಾಗಿ ಬರುತ್ತಿತ್ತು, ಇಲಾಖೆ ಈಗ ಲಸಿಕೆ ನೀಡುತ್ತಿರುವುದರಿಂದ ನಿಯಂತ್ರಣದಲ್ಲಿದೆ. ಮುಂದಿನ 15 ದಿನಗಳಲ್ಲಿ ರಾಷ್ಟ್ರೀಯ ಜನಗಣತಿ ಮಾಡುತ್ತೇವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಹೇಮಂತ್‌ಕುಮಾರ್, ತೇಗೂರು ಗ್ರಾಪಂ ಅಧ್ಯಕ್ಷೆ ರಾಧ, ಉಪಾಧ್ಯಕ್ಷೆ ಜಯಶ್ರೀ, ಸದಸ್ಯ ಪವನ್, ಶಾಂತಕುಮಾರ್, ಜಯರಾಜ್ ಅರಸ್, ಡಾ. ಪ್ರವೀಣ್ ಉಪಸ್ಥಿತರಿದ್ದರು. 22 ಕೆಸಿಕೆಎಂ 1ಚಿಕ್ಕಮಗಳೂರಿನ ಹೊರ ವಲಯದ ನಲ್ಲೂರಿನಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಆರನೇ ಸುತ್ತಿನ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಡಾ. ಮೋಹನ್‌ಕುಮಾರ್, ಡಾ. ಹೇಮಂತ್ ಕುಮಾರ್, ರಾಧ, ಜಯರಾಜ್ ಅರಸ್ ಇದ್ದರು.