ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಭ್ಯಾಸಕ್ಕೆಂದು ಹೊರ ರಾಜ್ಯ, ವಿದೇಶಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದು ಅವರಿಗೆ ಕನ್ನಡ ಕಲಿಸಲು ಕ್ರಮ ಕೈಗೊಂಡಿದ್ದೇವೆ ಎಂದು ವಿವಿ ಕುಲಪತಿ ಡಾ.ಬಿ.ಸಿ. ಭಗವಾನ್ ತಿಳಿಸಿದ್ದಾರೆ.ವಿವಿ ಹಾಗೂ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಜಯನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಬಹುದೊಡ್ಡ ಆರೋಗ್ಯ ವಿವಿ ಎಂಬ ಹೆಗ್ಗಳಿಕೆ ಗಳಿಸಿರುವ ನಾವು ಸಾಮಾಜಿಕ ಹಾಗೂ ಸಮುದಾಯ ಆರೋಗ್ಯ ರಕ್ಷಣೆಯ ಜೊತೆಗೆ ಕನ್ನಡ ಭಾಷೆ, ನೆಲ, ಜಲ ಮತ್ತು ಪರಂಪರೆಯ ಬೇರನ್ನು ಗಟ್ಟಿಗೊಳಿಸುವ ಕೆಲಸದಲ್ಲೂ ಹಿಂದೆ ಬಿದ್ದಿಲ್ಲ. ವಿವಿಗೆ ಪ್ರವೇಶ ಪಡೆಯುವ ಹೊರ ರಾಜ್ಯ, ವಿದೇಶಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.ಕನ್ನಡಾಭಿಮಾನವನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲ, ಆಚರಣೆಯಲ್ಲೂ ಪ್ರದರ್ಶಿಸುತ್ತಿದ್ದೇವೆ. ಕನ್ನಡ ಭಾಷೆಯ ಪ್ರಚಾರ-ಪ್ರಸಾರ ನಮ್ಮ ವಿವಿಯ ಸಾಂಸ್ಕೃತಿಕ ಹೊಣೆಗಾರಿಕೆಯೂ, ನಮ್ಮ ಬೌದ್ಧಿಕ ಕರ್ತವ್ಯವೂ ಆಗಿದೆ. ಬಹುತೇಕ ಆಡಳಿತಾತ್ಮಕ ವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸಲಾಗುತ್ತಿದೆ. ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಲು, ವೈದ್ಯಕೀಯ ಸಾಹಿತ್ಯವನ್ನು ವಿಸ್ತರಿಸಲು ವಿವಿಯ ಪ್ರಸಾರಾಂಗದ ಮೂಲಕ ಅಮೂಲ್ಯ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾಸ್ಯ ಲೇಖಕ ಎಂ.ಎಸ್.ನರಸಿಂಹಮೂರ್ತಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಇಂಗ್ಲಿಷ್‌ನ ಮಹಾ ಸಾಹಿತಿಗಳು ಜನಿಸುವ ಸಮಯಕ್ಕೆ ಕನ್ನಡದ ರನ್ನ-ಪೊನ್ನರು, ಪುರಂದರದಾಸರು 12 ಜನುಮಗಳಿಗೆ ಆಗುವಷ್ಟು ಸಮೃದ್ಧ ಸಾಹಿತ್ಯ ರಚಿಸಿ ಹೋಗಿದ್ದರು. ಆನಂತರ ಬಂದ ಇಂಗ್ಲಿಷ್‌ಗೆ ನಾವೆಲ್ಲಾ ಸಮ್ಮೋಹನಗೊಂಡೆವು ಎಂದು ಬೇಸರ ವ್ಯಕ್ತಪಡಿಸಿದರು.ಕುಲಸಚಿವ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವ ಡಾ.ರಿಯಾಜ್ ಬಾಷಾ, ಹಣಕಾಸು ಅಧಿಕಾರಿ ಬಿಒ.ಕೆ.ಗಂಗಾಧರ ಮಾತನಾಡಿದರು.-ಬಾಕ್ಸ್-
ವೈದ್ಯನಾಗುವ ಆಸೆಯಿತ್ತು: ಡಾಲಿ ಧನಂಜಯನಾನು ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಕನ್ನಡದಲ್ಲಿ 125 ಕ್ಕೆ 123 ಅಂಕ ಗಳಿಸಿದ್ದೆ. ವೈದ್ಯನಾಗಬೇಕೆಂಬ ಮಹದಾಸೆ ಇತ್ತು. ಆದರೆ ಸಿಇಟಿಯಲ್ಲಿ ಕಡಿಮೆ ರ್‍ಯಾಂಕ್ ಬಂದಿದ್ದರಿಂದ ಇಂಜಿನಿಯರಿಂಗ್ ಅಭ್ಯಾಸ ಮಾಡಿದೆ ಎಂದು ನಟ ಡಾಲಿ ಧನಂಜಯ ಮನದಾಳದ ಮಾತುಗಳನ್ನು ಹಂಚಿಕೊಂಡರು.
ನನ್ನ ಪತ್ನಿ ವೈದ್ಯೆಯಾಗಿರುವುದು ಹೆಮ್ಮೆಯಾಗಿದೆ. ವೈದ್ಯ ವೃತ್ತಿ ಬಹಳ ಶ್ರೇಷ್ಠವಾಗಿದ್ದು ಎಲ್ಲ ಜಾತಿ-ಧರ್ಮಗಳ ರೋಗಿಗಳನ್ನೂ ಸಮನಾಗಿ ಕಾಣುತ್ತಾರೆ. ಇದಕ್ಕಾಗಿ ಸಮಾಜದಲ್ಲಿ ನಿಮಗೆ ಬಹಳ ದೊಡ್ಡ ಸ್ಥಾನವಿದೆ. ಅದಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕ್ಯಾಪ್ಷನ್....ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಜಯನಗರದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಾಸ್ಯ ಲೇಖಕ ಎಂ.ಎಸ್.ನರಸಿಂಹಮೂರ್ತಿ ಉದ್ಘಾಟಿಸಿದರು. ವಿವಿ ಕುಲಪತಿ ಡಾ.ಬಿ.ಸಿ.ಭಗವಾನ್, ನಟ ಡಾಲಿ ಧನಂಜಯ ಮತ್ತಿತರರು ಹಾಜರಿದ್ದರು.
;Resize=(128,128))