ಮಕ್ಕಳಿಗೆ ಪಾಠದ ಜೊತೆ ಆಟ, ಊಟ, ನಿದ್ದೆಯೂ ಮುಖ್ಯ

| Published : Dec 02 2024, 01:19 AM IST

ಸಾರಾಂಶ

ತುರುವೇಕೆರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಆಟ, ಪಾಠ, ಊಟ ಮತ್ತು ನಿದ್ದೆ ಮುಖ್ಯ ಎಂದು ಡಾ.ಎ.ನಾಗರಾಜ್ ಹೇಳಿದರು. ಪಟ್ಟಣದ ವಿಶ್ವ ವಿಜಯ ವಿದ್ಯಾ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾ ಕೂಟ ಮತ್ತು ಪೋಷಕರ ದಿನಾಚರಣೆಯಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕನ್ನಡಪ್ರಭವಾರ್ತೆ, ತುರುವೇಕೆರೆ

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಆಟ, ಪಾಠ, ಊಟ ಮತ್ತು ನಿದ್ದೆ ಮುಖ್ಯ ಎಂದು ಡಾ.ಎ.ನಾಗರಾಜ್ ಹೇಳಿದರು. ಪಟ್ಟಣದ ವಿಶ್ವ ವಿಜಯ ವಿದ್ಯಾ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾ ಕೂಟ ಮತ್ತು ಪೋಷಕರ ದಿನಾಚರಣೆಯಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಕ್ಕಳು ಕೇವಲ ಪಠ್ಯ ಕ್ರಮಗಳಲ್ಲಿ ಮುಂದಾಗಿದ್ದರೆ ಏನೂ ಪ್ರಯೋಜನವಿಲ್ಲ. ಮಕ್ಕಳ ಭೌದ್ಧಿಕ ಬೆಳವಣಿಗೆಗೆ ಮತ್ತು ದೈಹಿಕ ಬೆಳವಣಿಗೆಗೆ ಉತ್ತಮವಾದ ಪೌಷ್ಠಿಕಾಂಶಯುಕ್ತ ಆಹಾರ ಅಗತ್ಯ. ಪ್ರತಿ ದಿನ ೮ ಗಂಟೆಗಳ ಕಾಲ ಮಕ್ಕಳು ನಿದ್ದೆ ಮಾಡಬೇಕು. ದೈಹಿಕವಾಗಿ ದಣಿಯಲು ಒಂದು ಗಂಟೆಗಳ ಕಾಲ ಆಟ ಆಡಬೇಕು. ಆಗಲೇ ಮಕ್ಕಳು ಮಾನಸಿಕವಾಗಿ ಸ್ಥಿರತೆ ಪಡೆದು ಪಠ್ಯದಲ್ಲಿ ಯಶ ಕಾಣಲು ಸಾಧ್ಯ ಎಂದು ಡಾ.ಎ.ನಾಗರಾಜ್ ಹೇಳಿದರು. ಪೋಷಕರು ಎಂದಿಗೂ ತಮ್ಮ ಮಕ್ಕಳು ಮತ್ತು ಇತರೆ ಮಕ್ಕಳು ಪಡೆದಿರುವ ಅಂಕಗಳ ತುಲನೆ ಮಾಡಬಾರದು. ಕೇವಲ ಅಂಕಗಳೇ ಮಕ್ಕಳ ಭವಿಷ್ಯವನ್ನು ರೂಪಿಸಲಾರದು. ಮಕ್ಕಳನ್ನು ದೇವಾಲಯಗಳು, ವಿಚಾರವಂತರ ಕೂಟ ಸೇರಿದಂತೆ ಉತ್ತಮರೊಂದಿಗೆ ಬೆಳೆಸಿ. ಪಠ್ಯದಲ್ಲಿ ರ್‍ಯಾಂಕ್ ಬಂದರೆ ಸಾಲದು, ಬದುಕಿನಲ್ಲಿ ರ್‍ಯಾಂಕ್ ಬರಬೇಕು ಎಂದರು. ಈ ನಿಟ್ಟಿನಲ್ಲಿ ಪೋಷಕರು ಚಿಂತಿಸಿದಲ್ಲಿ ಮಾತ್ರ ಒಳ್ಳೆಯ ಆರೋಗ್ಯವಂತ ದೇಶದ ಸತ್ಪ್ರಜೆಯನ್ನು ಪಡೆಯಲು ಸಾಧ್ಯ ಎಂದು ಡಾ.ಎ.ನಾಗರಾಜ್ ಹೇಳಿದರು. ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಡಾ.ಎಸ್.ಇ.ಬೋಸ್‌ರವರು ವಿದ್ಯಾಭ್ಯಾಸದೊಂದಿಗೆ ಕ್ರೀಡೆಗೂ ಮಕ್ಕಳು ಆದ್ಯತೆ ನೀಡಬೇಕು. ದೇಹದಂಡನೆ ಮಾಡುವುದರಿಂದ ದೇಹಕ್ಕೆ ಆರೋಗ್ಯ ಲಭಿಸಲಿದೆ. ಈ ಶಾಲೆಯ ಪ್ರಾಂಶುಪಾಲರಾಗಿರುವ ವಿಜಯಲಕ್ಷ್ಮಿಯವರು ಓರ್ವ ಕ್ರೀಡಾಪಟುವಾಗಿದ್ದಾರೆ. ಅವರು ರಾಜ್ಯ ಮತ್ತು ವಿಶ್ವವಿದ್ಯಾಲಯಗಳಲ್ಲಿ ಬಾಲ್ ಬ್ಯಾಡ್ಮಿಟನ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹಾಗಾಗಿ ಇಲ್ಲಿಯ ವಿದ್ಯಾರ್ಥಿಗಳಿಗೂ ಕ್ರೀಡೆಯಲ್ಲಿ ಪ್ರೋತ್ಸಾಹ ದೊರೆಯಲಿದೆ ಎಂದು ಹೇಳಿದರು. ವಾರ್ಷಿಕ ಕ್ರೀಡಾಕೂಟದಲ್ಲಿ ಜೆ.ಪಿ.ಆಂಗ್ಲಶಾಲೆಯ ಅಧ್ಯಕ್ಷರಾದ ಪ್ರಕಾಶ್ ಗುಪ್ತಾ, ವಿವಿವಿ ಶಾಲೆಯ ಪ್ರಾಂಶುಪಾಲೆ ಎಸ್.ವಿಜಯಲಕ್ಷ್ಮಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಂಗನಾಥ್, ವಿವಿವಿ ಶಾಲೆಯ ಅಧ್ಯಕ್ಷ ಹೆಚ್.ವಿ.ಪ್ರವೀಣ್ ಗೌಡ, ಶಾಲೆಯ ಆಡಳಿತಾಧಿಕಾರಿ ಪ್ರಶಾಂತ್ ರೆಡ್ಡಿ, ನವೀನ್, ಲಯನ್ಸ್ ಸುರೇಶ್, ದೈಹಿಕ ಶಿಕ್ಷಣ ಶಿಕ್ಷಕಿ ಹೇಮಲತಾ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಿತ್ಯಂತ್ ಕೆ.ದೊಡ್ಡಮನೆ ಎಂಬ ನಾಲ್ಕನೇ ತರಗತಿಯ ವಿದ್ಯಾರ್ಥಿಯನ್ನೂ ಸಹ ಗೌರವಿಸಲಾಯಿತು. ಮಕ್ಕಳಿಗೆ ವಿವಿಧ ಆಟಗಳನ್ನು ಏರ್ಪಡಿಸಲಾಗಿತ್ತು.