ಭರತನಾಟ್ಯ ಕಲೆಯು ಪ್ರಾಚೀನವಾಗಿದ್ದು, ಭರತನ ನಾಟ್ಯಶಾಸ್ತ್ರ ಗ್ರಂಥವು ಮೂಲತಃ ನಾಟಕಕ್ಕೆ ಸಂಬಂಧಿಸಿದ ಕೃತಿಯಾಗಿದ್ದರೂ ಅದರಲ್ಲಿ ನೃತ್ಯ ಮತ್ತು ಸಂಗೀತಕ್ಕೆ ಬೇಕಾದ ಮೌಲಿಕ ಮತ್ತು ಅತೀ ಪ್ರಾಮುಖ್ಯ ಮಾಹಿತಿಯನ್ನೊಳಗೊಂಡ ಆಧಾರ ಗ್ರಂಥವಾಗಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಭರತನಾಟ್ಯ ಕಲೆಯು ಪ್ರಾಚೀನವಾಗಿದ್ದು, ಭರತನ ನಾಟ್ಯಶಾಸ್ತ್ರ ಗ್ರಂಥವು ಮೂಲತಃ ನಾಟಕಕ್ಕೆ ಸಂಬಂಧಿಸಿದ ಕೃತಿಯಾಗಿದ್ದರೂ ಅದರಲ್ಲಿ ನೃತ್ಯ ಮತ್ತು ಸಂಗೀತಕ್ಕೆ ಬೇಕಾದ ಮೌಲಿಕ ಮತ್ತು ಅತೀ ಪ್ರಾಮುಖ್ಯ ಮಾಹಿತಿಯನ್ನೊಳಗೊಂಡ ಆಧಾರ ಗ್ರಂಥವಾಗಿದೆ ಎಂದು ಕವಿವಿ ಲಲಿತಕಲಾ ಹಾಗೂ ಸಂಗೀತ ಕಾಲೇಜು ನಿವೃತ್ತ ಪ್ರಾಚಾರ್ಯ ಡಾ. ಶಾಂತಾರಾಮ ಹೆಗಡೆ ಹೇಳಿದರು.

ನಗರದ ಡಾ.ದ.ರಾ.ಬೇಂದ್ರೆ ಭವನದಲ್ಲಿ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಏರ್ಪಡಿಸಿದ್ದ ಕೃಷ್ಣ ಜನ್ಮಾಷ್ಟಮಿ ನೃತ್ಯೋತ್ಸವ ಉದ್ಘಾಟಿಸಿದ ಅವರು, ಭಾರತೀಯ ಕಲಾ ಸಂಸ್ಕೃತಿ ಅವಲೋಕಿಸಿದಾಗ ಪ್ರಾದೇಶಿಕವಾರು ವೈವಿಧ್ಯಮಯ ನೃತ್ಯ ಕಲಾ ಪ್ರಕಾರಗಳು ಕಂಡು ಬರುತ್ತವೆ. ಇದರಲ್ಲಿ ಕೆಲವು ಲೋಕ ಸಂಗೀತ-ನೃತ್ಯ ಪ್ರಕಾರಗಳಿದ್ದರೆ, ಹಲವು ಶಾಸ್ತ್ರೀಯ ಪ್ರಕಾರಗಳು. ಭರತನಾಟ್ಯ ಕಲೆಯು ತನ್ನ ನೃತ್ಯ ಭಂಗಿ, ಭಾವಾಭಿವ್ಯಕ್ತತೆ, ಸುಂದರ ಪೋಷಾಕಿನಿಂದಾಗಿ ಹೆಚ್ಚು ಜನಪ್ರಿಯವಾಗಿದೆ ಎಂದರು.

ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಹಿಂದಿ ಸಲಹಾ ಸಮಿತಿ ಸದಸ್ಯ ಡಾ. ಪ್ರತೀಕ್ ಮಾಳಿ ಮಾನತಾಡಿ, ಡಾನ್ಸ್ ಎಂದಾಗ ಮನದಲ್ಲಿ ಬರುವ ಕಲ್ಪನೆಯೇ ಬೇರೆ. ಶಾಸ್ತ್ರೀಯ ನೃತ್ಯ ಎಂದಾಗ ನಮಗೆ ಪಾವಿತ್ರ್ಯತೆಯ ಭಾವ ಉಂಟಾಗುತ್ತದೆ. ಅದೇ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಕಾರ ಭಾರತಿ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಮಾತನಾಡಿ, ಕೃಷ್ಣಾಷ್ಟಮಿ ಕೇವಲ ಆಚರಣೆ ಅಲ್ಲ, ಅದು ನಮ್ಮ ಜೀವನಾಡಿ. ಕೃಷ್ಣಂ ವಂದೇ ಜಗದ್ಗುರುಂ ಎಂದು ಇಡೀ ವಿಶ್ವ ಶ್ರೀಕೃಷ್ಣನನ್ನು ಗುರು ಎಂದು ಭಾವಿಸಿದೆ. ಬಹುತೇಕ ಎಂಟು ನೃತ್ಯಗಳಲ್ಲಿ ಮುಖ್ಯವಾಗಿ ಬರುವಂತಹದು ಶಿವ ಮತ್ತು ಕೃಷ್ಣನೇ ಆಗಿದ್ದಾನೆ. ನಾವು ನೃತ್ಯೋತ್ಸವದ ಮೂಲಕ ಕೃಷ್ಣ, ರಾಧೆ, ಶಿವ, ಅರ್ಜುನ, ಧರ್ಮರಾಯರು ಎಂಬ ಅರ್ಥವನ್ನು ಮಕ್ಕಳಲ್ಲಿ ಹಾಕಿದಾಗ ಮಾತ್ರ ಮುಂದೆ ಮಕ್ಕಳಿಗೆ ಸಂಸ್ಕಾರವಾಗುತ್ತದೆ ಎಂದರು.

ಭರತ ನೃತ್ಯ ಅಕಾಡೆಮಿ ಅಧ್ಯಕ್ಷ ವಿದ್ವಾನ್ ರಾಜೇಂದ್ರ ಟೊಣಪಿ ಮಾತನಾಡಿದರು. ಭರತ ನೃತ್ಯ ಅಕಾಡೆಮಿಯ ಯುವ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು, ಸಂಯೋಜಕ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಸಂಚಾಲಕ ಡಾ.ಗುರುಬಸವ ಮಹಾಮನೆ ವಂದಿಸಿದರು.