ಸಾರಾಂಶ
ಹಿರಿಯಡಕ ದೇವಾಡಿಗ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಂದಿನ ಆಧುನಿಕ ಯುಗದಲ್ಲಿ ನಮ್ಮ ಆರೋಗ್ಯದ ರಕ್ಷಣೆಯ ಜೊತೆಗೆ ಇನ್ನೊಬ್ಬರ ಆರೋಗ್ಯ ಕಾಳಜಿ ವಹಿಸುವುದು ಅಗತ್ಯವಿದೆ. ಆ ನಿಟ್ಟಿನಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯ ಉತ್ತಮ ಸಮಾಜ ಸೇವಾ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ, ಸುವರ್ಣ ಶ್ಲಾಘಿಸಿದರು.ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ಆಯೋಜನೆಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಲಯನ್ಸ್ ಕ್ಲಬ್ ಹಿರಿಯಡ್ಕ, ದೇವಾಡಿಗ ಸುಧಾರಕ ಸಂಘ ಮಂಗಳೂರು ಉಪಸಂಘ ಹಿರಿಯಡಕ ಇವರ ಸಹಭಾಗಿತ್ವದೊಂದಿಗೆ ಹಿರಿಯಡಕ ದೇವಾಡಿಗ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಉದ್ಯಮಿ ರವೀಂದ್ರ ಶ್ರೀಯಾನ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್‌ಕೆಪಿಯ ಉಡುಪಿ ವಲಯದ ಅಧ್ಯಕ್ಷ ಸುದೀರ್ ಎಂ. ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸ್ತೂರ್ಬಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ. ದೀಪ್ ಮಡ್ಕೆಕರ್, ಮೆಡಿಸಿನ್ ವಿಭಾಗದ ಡಾ. ನಿಖಿಲ್, ಹಿರಿಯಡಕ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧೀರ್ ಹೆಗ್ಡೆ, ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಭಾಗವಹಿಸಿದ್ದರು.ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಹಿರಿಯಡ್ಕ ಹಾಗೂ ಸುತ್ತಮುತ್ತಲ ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದರು ಮತ್ತು ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡಿದರು.