ಸಾರಾಂಶ
ಹಾವೇರಿ:ಚುನಾವಣಾ ಕಾರ್ಯಗಳ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೆ ನಿಗಾವಹಿಸಿ. ಕೊಳವೆಬಾವಿಗಳ ನೀರಿನ ಪ್ರಮಾಣದ ಬಗ್ಗೆ ವಾರಕ್ಕೊಮ್ಮೆ ಪರಿಶೀಲನೆ ನಡೆಸಿ, ಕೊಳವೆಬಾವಿಗಳು ಇಳುವರಿ ಪೂರ್ಣ ಕಡಿಮೆಯಾದಲ್ಲಿ ಜನರಿಗೆ ಕುಡಿಯುವ ನೀರು ಒದಗಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಆರ್. ವಿಶಾಲ್ ಸೂಚನೆ ನೀಡಿದರು.
ಬೇಸಿಗೆ ಕುಡಿಯುವ ನೀರಿನ ಪೂರೈಕೆ ಕುರಿತಂತೆ ಬೆಂಗಳೂರಿನಿಂದ ಸೋಮವಾರ ವಿಡಿಯೋ ಸಂವಾದದ ಮೂಲಕ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಕುಡಿಯುವ ನೀರಿನ ಮೂಲಗಳ ವಸ್ತುಸ್ಥಿತಿ, ಕುಡಿಯುವ ನೀರಿನ ಪೂರೈಕೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಂಡಿರುವ ಸಿದ್ಧತಾ ಕ್ರಮಗಳು, ಬಹುಗ್ರಾಮ ಹಾಗೂ ಜಲಜೀವನ್ ಮಿಷನ್ ಯೋಜನೆಗಳ ಸ್ಥಿತಿಗತಿಗಳ ಕುರಿತಂತೆ ಮಾಹಿತಿ ಪಡೆದುಕೊಂಡರು.ಪೂರ್ಣ ಬತ್ತಿಹೋದ ನಿರುಪಯುಕ್ತ ಕೊಳವೆಬಾವಿಗಳ ಆರ್.ಆರ್. ನಂಬರ್ ಹಾಗೂ ಮೋಟರ್‌ಗಳನ್ನು ಸ್ಥಳಾಂತರಿಸಿ, ಹೊಸ ಕೊಳವೆಬಾವಿಗಳಿಗೆ ವರ್ಗಾಯಿಸಿಕೊಳ್ಳಿ. ಇದರಿಂದ ಡೆಡ್ ಆದ ಕೊಳವೆಬಾವಿಗಳಿಗೆ ನಿಗದಿತ ವಿದ್ಯುತ್ ಬಿಲ್ ಪಾವತಿಸುವುದು ತಪ್ಪುತ್ತದೆ. ಅಲ್ಲದೆ ಆರ್.ಆರ್.ನಂಬರ್ ಹಾಗೂ ಮೋಟರ್‌ಗಳನ್ನು ತ್ವರಿತವಾಗಿ ಸ್ಥಳಾಂತರಿಸಿದರೆ ಅನಾವಶ್ಯಕ ವೆಚ್ಚವನ್ನು ಕಡಿತಗೊಳಿಸುವ ಜೊತೆಗೆ ಹೊಸ ಕೊಳವೆಬಾವಿಗಳಿಗೆ ತ್ವರಿತವಾಗಿ ಸಂಪರ್ಕ ಕಲ್ಪಿಸಿ ವಿಳಂಬವಿಲ್ಲದೆ ಜನರಿಗೆ ನೀರು ಪೂರೈಸಬಹುದು ಎಂದು ಸಲಹೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಆದ್ಯತೆಯ ಮೇರೆಗೆ ಕುಡಿಯುವ ನೀರು ಪೂರೈಕೆ ಮಾಡಲು ಬಳಸಿಕೊಳ್ಳಲು ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಶ್ರೀಮತಿ ಮಮತಾ ಅವರಿಗೆ ನಿರ್ದೇಶನ ನೀಡಿದರು.ಗೋಶಾಲೆ: ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಮೇವಿನ ದಾಸ್ತಾನು ಕುರಿತಂತೆ ಮಾಹಿತಿ ಪಡೆದುಕೊಂಡ ಅವರು, ಗೋಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಹೆಚ್ಚುವರಿ ವ್ಯಾಕ್ಸಿನ್ ವ್ಯವಸ್ಥೆ ಮಾಡಿಕೊಳ್ಳಿ. ಮೇವಿನ ದಾಸ್ತಾನು ಕುರಿತಂತೆ ಮೂರನೇ ಸಂಸ್ಥೆಯಿಂದ ನಡೆಸಿದ ಸರ್ವೇ ಅನುಸಾರ ಅಗತ್ಯವಿದ್ದರೆ ಮೇವಿನ ಬ್ಯಾಂಕ್ ಆರಂಭಿಸಲು ಸೂಕ್ತ ಸ್ಥಳವಕಾಶ ಹಾಗೂ ವಿತರಣೆ ವ್ಯವಸ್ಥೆಗಳ ಬಗ್ಗೆ ಗಮನಹರಿಸಲು ಸೂಚನೆ ನೀಡಿದರು.ಭದ್ರಾ ನೀರು: ಜಿಲ್ಲೆಯ ಕುಡಿಯುವ ನೀರಿನ ವಾಸ್ತವ ಕುರಿತಾಗಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮಾಹಿತಿ ನೀಡಿದರು. ತುಂಗಭದ್ರಾ ನದಿಯಲ್ಲಿ ನೀರು ಖಾಲಿಯಾಗಿದೆ. ಉನ್ನತ ಮಟ್ಟದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಇದೇ ೨೮ರಂದು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕುಡಿಯುವ ನೀರು ಪೂರೈಕೆಗಾಗಿ ನೀರು ಬಿಡುಗಡೆಮಾಡಬಹುದು. ಒಂದು ವಾರದೊಳಗೆ ನೀರು ಬರುವ ನಿರೀಕ್ಷೆ ಇದೆ ಎಂದರು.ಸದ್ಯದ ಸ್ಥಿತಿಯಲ್ಲಿ ತುಂಗಭದ್ರಾ ನದಿ ಆಶ್ರಿತ ರಾಣಿಬೆನ್ನೂರು ಹಾಗೂ ಬ್ಯಾಡಗಿಯಲ್ಲಿ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಸ್ಥಗಿತವಾಗಿದೆ. ವರದಾ ನದಿ ಬತ್ತಿದ ಕಾರಣ ಬಂಕಾಪುರ, ಶಿಗ್ಗಾಂವ ಒಳಗೊಂಡಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆಮಾಡಲಾಗುತ್ತಿದ್ದು, ಸದ್ಯ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಮಾಡಲಾಗುತ್ತಿದೆ. ತುಂಗಭದ್ರಾ ಆಶ್ರಿತ ಹಾವೇರಿ ನಗರದಲ್ಲಿ ಬಳಕೆಗಾಗಿ ಹೆಗ್ಗೇರಿ ಕೆರೆ ನೀರನ್ನು ಪೂರೈಸಲಾಗುತ್ತಿದೆ. ಕುಡಿಯುವ ನೀರಿಗಾಗಿ ಬೋರವೆಲ್ ನೀರು ಬಳಸಲಾಗುತ್ತಿದೆ. ಹಾನಗಲ್ ಪಟ್ಟಣಕ್ಕೆ ಧರ್ಮಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಮತ್ತೊಮ್ಮೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆಯಾದರೆ ಹಾವೇರಿ, ಗುತ್ತಲ, ರಾಣಿಬೆನ್ನೂರು, ಬ್ಯಾಡಗಿ ಪಟ್ಟಣಕ್ಕೆ ನೀರಿನ ಪೂರೈಕೆಗೆ ನೆರವಾಗಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ೨೩೮ ವಾರ್ಡ್‌ಗಳ ಪೈಕಿ ೧೦೪ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದೆಂದು ಈಗಾಗಲೇ ಅಂದಾಜಿಸಲಾಗಿದೆ. ೧೭೦ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಕೆಯ ನಿರ್ವಹಣೆ ಮಾಡಲಾಗುತ್ತಿದೆ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಮಾಹಿತಿ ನೀಡಿ, ಜಿಲ್ಲೆಯ ೧೬೧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩೨೫ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಅಂದಾಜಿಸಿ, ಈ ಭಾಗದಲ್ಲಿ ೪೫೮ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ ೯೮ ಗ್ರಾಮಗಳಿಗೆ ೧೫೮ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಯಾವುದೇ ಗ್ರಾಮಗಳಿಗೆ ಈವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಅವಶ್ಯಕತೆ ಸದ್ಯ ಕಂಡುಬಂದಿಲ್ಲ. ಕೊಳವೆಬಾವಿಗಳ ರೀ ಡ್ರಿಲ್ಲಿಂಗ್, ಫ್ಲಸ್ಸಿಂಗ್, ಡೀಪ್‌ನಿಂಗ್‌ಗೆ ಕ್ರಮವಹಿಸಲಾಗಿದೆ ಎಂದರು.
ಕೊಳವೆಬಾವಿಗಳ ಇಳುವರಿ ಪ್ರಮಾಣದ ಬಗ್ಗೆ ನಿಗಾವಹಿಸಿದೆ. ನಿಷ್ಕ್ರೀಯ ಕೊಳವೆಬಾವಿಗಳ ಆರ್.ಆರ್. ನಂಬರ್, ಮೋಟರ್ ವರ್ಗಾವಣೆಗೆ ಕ್ರಮಕೈಗೊಳ್ಳಲಾಗುವುದು. ವರದಾ, ತುಂಗಭದ್ರಾ ನದಿ ಆಶ್ರಿತ ಬಹುಗ್ರಾಮಗಳ ಕುಡಿಯುವ ನೀರಿನ ೧೭ ಯೋಜನೆಗಳ ಪೈಕಿ ಒಂಭತ್ತು ಯೋಜನೆಗಳು ಸ್ಥಗಿತಗೊಂಡಿವೆ. ಉಳಿದ ಎಂಟು ಯೋಜನೆಗಳಲ್ಲಿ ಮೇ ಕೊನೆಯ ವಾರದಲ್ಲಿ ಬಂದ ಆಗಬಹುದು. ತುಂಗಭದ್ರಾ ನದಿಯಲ್ಲಿ ನೀರು ಹರಿಸಿದರೆ ಇವುಗಳಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶ್ರೀಮತಿ ಮಮತಾ ಹಿರೇಗೌಡ್ರ ಅವರು ನಗರ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರಿನ ಪೂರೈಕೆಯ ಸ್ಥಿತಿಗತಿ, ಕೊಳವೆಬಾವಿಗಳ ಮಾಹಿತಿ, ನೀರಿನ ಇಳುವರಿ ಪ್ರಮಾಣ ಕುರಿತಂತೆ ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.