ಕೊನೆಗೂ ಕಲಬುರಗಿ ಜಿಲ್ಲೆಯ ಎಲ್ಲ 11 ತಾಲೂಕಗಳು 2 ಹಂತಗಳಲ್ಲಿ ನಡೆದ ಬರಗಾಲ ತಾಲೂಕು ಘೋಷಣೆಯ ಕಸರತ್ತಿನಲ್ಲಿ ಬರ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿವೆ.ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿರಂತರವಾಗಿ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಲಾಗುತ್ತಿದ್ದು,
ಕನ್ನಡಪ್ರಭ ವಾರ್ತೆ ಕಲಬುರಗಿಕೊನೆಗೂ ಕಲಬುರಗಿ ಜಿಲ್ಲೆಯ ಎಲ್ಲ 11 ತಾಲೂಕಗಳು 2 ಹಂತಗಳಲ್ಲಿ ನಡೆದ ಬರಗಾಲ ತಾಲೂಕು ಘೋಷಣೆಯ ಕಸರತ್ತಿನಲ್ಲಿ ಬರ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿವೆ.ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿರಂತರವಾಗಿ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಲಾಗುತ್ತಿದ್ದು, ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳುವ ಮೂಲಕ ಸರ್ಕಾರ ಮಂಗಳವಾರವೂ 53 ತಾಲೂಕುಗಳನ್ನು ಹೊಸತಾಗಿ ಬರ ಪಟ್ಟಿಗೆ ಸೇರಿಸಿದ್ದು, ಈ ಪಟ್ಟಿಯಲ್ಲಿ ಜಿಲ್ಲೆಯ ಕಲಬುರಗಿ ಜಿಲ್ಲೆಯ ಚಿಂಚೋಳಿ, ಜೇವರ್ಗಿ, ಕಾಳಗಿ, ಕಮಲಾಪುರ, ಸೇಡಂ ತೀವ್ರ ಬರಪೀಡಿತ ಪಟ್ಟಿಗೆ ಸೇರಿಕೊಂಡಿವೆ.2 ಹಂತಗಳಲ್ಲಿ ನಡೆದ ಕಸರತ್ತಿನಲ್ಲಿ ಜಿಲ್ಲೆಯ ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಲಬುರಗಿ, ಕಾಳಗಿ, ಕಮಲಾಪುರ, ಸೇಡಂ, ಶಹಾಬಾದ್ ಮತ್ತು ಯಡ್ರಾಮಿ ಸಹಿತ ಎಲ್ಲ 11 ತಾಲೂಕು ಬರ ಪೀಡಿತವೆಂದು ಸರ್ಕಾರದಿಂದ ಅಧಿಕೃತ ಘೋಷಣೆಯಾದಂತಾಗಿದೆ.ಬರಗಾಲ ಬವಣೆ ಜಿಲ್ಲಾದ್ಯಂತ ತಂಡವವಾಡುತ್ತಿದ್ದರೂ ಕೂಡಾ ಸರ್ಕಾರದ ಮೊದಲ ಪಟ್ಟಿಯಲ್ಲಿ ಕಲಬರಗಿಯ ಯಾವ ತಾಲೂಕು ಬರಗಾಲ ಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಇದನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಹೋರಾಟ ನಡೆಸಿದ್ದವು. ಬಿಜೆಪಿಯಂತೂ ತಾಲೂಕುವಾರು ಹೋರಾಟಗಳನ್ನು ಸಂಘಟಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಯತ್ನ ಮಾಡಿತ್ತು.ಇನ್ನು ರೈತ ಸಂಘಟನೆಗಳೂ ಕಲಬುರಗಿ ಬಂದ್ ಕರೆ ನೀಡಿದ್ದಲ್ಲದೆ ನಿರಂತರ ಹೋರಾಟಗಳನ್ನು ಮಾಡುತ್ತ ಬರಗಾಲ ಪಟ್ಟಿಯಲ್ಲಿ ಸೇರಿಸಲು ಮೀನಮೇಷ ಯಾಕೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದನ್ನು ಸ್ಮರಿಸಬಹುದಾಗಿದೆ. ಕೊನೆಗೂ ಜಿಲ್ಲೆಯ ಎಲ್ಲ 11 ತಾಲೂಕು ಬರಗಾಲ ಪೀಡಿತವೆಂದು ಘೋಷಣೆಯಂತೂ ಆಗಿದೆ. ಇದೀಗ ಪರಿಹಾರ ಕ್ರಮಗಳು, ಬೆಳೆಹಾನಿ, ಬಿತ್ತನೆ ಕುಂಠಿತ ಇತ್ಯಾದಿ ಬಗ್ಗೆ ಸಮೀಕ್ಷೆಗಳು ನಡೆದು ನೊಂದ ರೈತರ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ.ರೈತರ ಬೆಳೆ ಹಾನಿಗೆ ಪರಿಹಾರ ನೀಡಬೇಕು, ತಕ್ಷಣ ನೆರವಿನ ಹಸ್ತ ಚಾಚಬೇಕು ಎಂಬ ಕೂಗು ಇದೀಗ ಜಿಲ್ಲಾದ್ಯಂತ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳೂ ಕೂಡಾ ಹೆಚ್ಚುತ್ತಿದ್ದು, ಈ ಸಂದರ್ಭ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸರ್ಕಾರ ಪರಿಹಾರ ಬೇಗ ಪಾವತಿಸುವಂತಾಗಬೇಕೆಂಬ ಆಗ್ರಹಗಳು ಕೇಳಿ ಬರುತ್ತಿವೆ.ಸಾಲ ಬಾಧೆಯಿಂದ, ಮಳೆ ಬಾರದೆ ಬೆಳೆ ಹಾನಿಯಿಂದ ಕಂಗಾಲಾಗಿ ಇತ್ತೀಚೆಗೆ ಅಫಜಲಪುರ ತಾಲೂಕಿನ ಮಾತೊಳ್ಳಿ ಗ್ರಾಮದ ರೈತ ಸಿದ್ಧರಾಮ ನಂದಗಿರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಇಂತಹ ಘಟನೆಗಳು ಹೆಚ್ಚುತ್ತಿರುವುದರಿಂದ ರೈತರ ಮನೋಬಲ ಕುಂದುತ್ತಿದೆ. ಕಲಬುರಗಿ ಜಿಲ್ಲೆಯ ರೈತರ ತಾಳ್ಮೆ ಪರೀಕ್ಷೆ ಮಾಡುವುದು ಕೈ ಬಿಡಬೇಕು ಎಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.
ಮಳೆಯ ತೀವ್ರ ಕೊರತೆ: ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಕಾಡಿದೆ. ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಜೂ.1 ರಿಂದ ಸೆ. 17 ವರೆಗೂ ವಾಡಿಕೆಯಂತೆ 561. 5 ಮಿಮೀ ಮಳೆಯಾಗಬೇಕಿತ್ತು. ಆದರೆ 364 ಮಿಮೀ ಮಾತ್ರ ಮಳೆಯಾಗಿದ್ದು ಶೇ. 35 ರಷ್ಟು ಮಳೆಯ ಕೊರತೆ ಎದುರಾಗಿದೆ. ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿ ಕೇವಲ 60, 80, 90 ಮಿಮೀ ಮಳೆ ಸುರಿದಿದೆ. ಹೀಗಾಗಿ ಸಮಸ್ಯೆ ಉಲ್ಬಣಿಸಿದೆ.ಬಾವಿಗಳು ಬೊರವೆಲ್ ಗಳು ಬತ್ತಿ ಹೋಗಿವೆ , ಕಬ್ಬು ಹತ್ತಿ ತೊಗರಿ ಒಣಗುತ್ತಿದೆ, ರೈತ ಕಂಗಾಲಾಗಿದ್ದಾನೆ, ಕಲಬುರಗಿ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ತಕ್ಷಣವೇ ಸರ್ಕಾರ ರೈತರ ನೆರವಿಗೆ ಧಾವಿಸಲಿ, ರೈತರ ಸಾಲ ಮನ್ನಾ ಮಾಡಲಿ, ಅನಾವೃಷ್ಟಿ ಪರಿಹಾರ ನಿಡಲಿ ಮತ್ತು ಅನಾವೃಷ್ಟಿ ಬೆಳೆ ವಿಮೆ ಮಂಜೂರು ಮಾಡಲಿ ಎಂದು ಕಲಬುರಗಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಹೇಳಿದರು.