ನಿಯಮ ಮೀರಿದ ಖಾಸಗಿಗಳ ವಿರುದ್ಧವೂ ಕ್ರಮಕೈಗೊಳ್ಳಿ

| Published : Oct 11 2024, 11:51 PM IST

ಸಾರಾಂಶ

ಹಿರಿಯೂರು: ನಿಯಮ ಮೀರಿದ ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಧೈರ್ಯವಿಲ್ಲವೇ ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ನೇರವಾಗಿ ಪ್ರಶ್ನಿಸಿದರು.

ಹಿರಿಯೂರು: ನಿಯಮ ಮೀರಿದ ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಧೈರ್ಯವಿಲ್ಲವೇ ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ನೇರವಾಗಿ ಪ್ರಶ್ನಿಸಿದರು.

ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಸಮಸ್ಯೆ ಇದೆ. ಮಕ್ಕಳ ವೈದ್ಯರು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿಗಳು ರೋಗಿಯನ್ನು ನಿಲ್ಲಿಸಿಯೇ ಚುಚ್ಚುಮದ್ದು ನೀಡುತ್ತಾರೆ. ನಾರ್ಮಲ್ ಹೆರಿಗೆಗೆ ಇಷ್ಟು, ಸಿಜೇರಿಯನ್ ಹೆರಿಗೆಗೆ ಇಷ್ಟು ಎಂದು ಹಣ ವಸೂಲು ಮಾಡಲಾಗುತ್ತಿದೆ ಎಂದು ಸದಸ್ಯರಾದ ತಿಪ್ಪೇಸ್ವಾಮಿ, ಬಾಲಕೃಷ್ಣ, ಪಲ್ಲವ, ಮೊದಲ ಮರಿಯಾ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಟಿಹೆಚ್ ಓ ಡಾ.ವೆಂಕಟೇಶ್, ಪ್ರತಿಯೊಂದು ವಾರ್ಡ್‌ಗಳಲ್ಲೂ ಆರೋಗ್ಯ ಶಿಬಿರ ನಡೆಸಲು ಯೋಜಿಸಲಾಗಿದೆ. ಸದಸ್ಯರು ಹೇಳಿದಂತೆ ಇತ್ತೀಚಿಗೆ ಆಸ್ಪತ್ರೆಯಲ್ಲಿ ಆ ರೀತಿಯ ಸಮಸ್ಯೆಗಳಿಲ್ಲ. ಮಕ್ಕಳ ವೈದ್ಯರ ಕೊರತೆ ಇಲ್ಲ. ಪ್ರತಿ ತಿಂಗಳು 70 ರಿಂದ 80 ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ನಡೆಸುವ ಟಾರ್ಗೆಟ್ ನೀಡಿದ್ದೇವೆ. ಬಯೋ ಮೆಡಿಕಲ್ ವೇಸ್ಟ್ ಸಾಗಿಸಲು ಬೇರೆಯವರು ಇದ್ದು ಪೌರ ಕಾರ್ಮಿಕರು ಉಳಿದ ತ್ಯಾಜ್ಯ ಸಾಗಿಸುವರು ಎಂದು ತಿಳಿಸಿದರು.

ಟಿಹೆಚ್ಓ ಉತ್ತರಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಅಜಯ್ ಕುಮಾರ್, ಸರ್ಕಾರಿ ಆಸ್ಪತ್ರೆಯ ನಿರ್ವಹಣೆ ಜೊತೆಗೆ ಖಾಸಗಿ ಆಸ್ಪತ್ರೆಗಳತ್ತಲೂ ಗಮನಹರಿಸಿ. ದುಬಾರಿ ಶುಲ್ಕ, ಸ್ವಚ್ಛತೆ, ನಿಯಮ ಮೀರಿ ಬೆಡ್‌ಗಳ ಅಳವಡಿಕೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಿಮ್ಮ ಕೈಲಿ ಆಗದಿದ್ದರೆ ಹೇಳಿ, ನಗರಸಭೆಯಿಂದಲೇ ಖಾಸಗಿ ಆಸ್ಪತ್ರೆಗಳ ಬಗ್ಗೆ ಗಮನ ಹರಿಸುತ್ತೇವೆ ಎಂದರು.

ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾದ ಸ್ಲo ಬೋರ್ಡ್ ಇಂಜಿನಿಯರ್: ಸ್ಲo ಬೋರ್ಡ್ ನ ನಿಶಾಂತ್ ಸಭೆಗೆ ಮಾಹಿತಿ ನೀಡಿ, 477 ಮನೆಯಲ್ಲಿ 430 ಮನೆಗಳ ಕಾಮಗಾರಿ ಮುಗಿದಿದೆ. 900 ಮನೆಗಳಲ್ಲಿ 550 ಮನೆಗಳು ಶುರುವಾಗಿವೆ ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ವಿಠ್ಠಲ್ ಪಾಂಡುರಂಗ, ಸಣ್ಣಪ್ಪ, ಈ ಮಂಜುನಾಥ್, ಬಿ.ಎನ್.ಪ್ರಕಾಶ್ ಮುಂತಾದವರು ಸ್ಲo ಬೋರ್ಡ್ ನವರು ಮೂರು ವರ್ಷದಿಂದ ನಗರದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ನಗರವಾಸಿಗಳಿಗೆ ನಾವು ಮೂಲಭೂತ ಸೌಲಭ್ಯ ಒದಗಿಸುತ್ತಿದ್ದೇವೆ. ನೀವು ಶಾಶ್ವತವಾದ ಹಕ್ಕುಪತ್ರ ನೀಡಬೇಕು. ಬೋಗಸ್ ಬಿಲ್, ಬಿಲ್ಡಿಂಗ್, ಕಳಪೆ ಕಾಮಗಾರಿಯ ತನಿಖೆ ನಡೆಯಬೇಕು. ಮೆಟಿರಿಯಲ್ ಏನು ಕೊಡುತ್ತೀರಾ, ಎಷ್ಟು ಕೊಡುತ್ತೀರಾ ಎಂದು ಮೂರು ವರ್ಷದಿಂದ ಕೇಳಿದರು ಕೊಡುತ್ತಿಲ್ಲ. ದಾವಣಗೆರೆ ವಿಳಾಸದ ಹಕ್ಕುಪತ್ರ ನೀಡಿರುವ ದೂರುಗಳಿವೆ. ಎಲ್ಲದರ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಈ ವೇಳೆ ಸದಸ್ಯರ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾದ ಸ್ಲo ಬೋರ್ಡ್ ಇಂಜಿನಿಯರ್ ನಿರುತ್ತರರಾದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಎ.ವಾಸಿಂ, ಸಿಪಿಐ ರಾಘವೇಂದ್ರ ಕಾಂಡಿಕೆ, ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸದಸ್ಯರಾದ ಜಗದೀಶ್, ಶಿವರಂಜಿನಿ, ಪಲ್ಲವ, ಬಿ.ಎನ್.ಪ್ರಕಾಶ್, ಸಣ್ಣಪ್ಪ, ಈರಲಿಂಗೇಗೌಡ, ವಿಠ್ಠಲ್, ಶಂಷುನ್ನೀಸಾ, ಚಿತ್ರಜಿತ್ ಯಾದವ್, ಗೀತಾ ಗಂಗಾಧರ್, ಈ ಮಂಜುನಾಥ್, ನಾಮ ನಿರ್ದೇಶಿತ ಸದಸ್ಯರಾದ ಶಿವಣ್ಣ, ಗಿರೀಶ್, ಶಿವಕುಮಾರ್ ಸೇರಿದಂತೆ ನಗರಸಭೆ ಸಿಬ್ಬಂದಿ ಹಾಜರಿದ್ದರು.ದಸರಾ ಬಳಿಕ ರಸ್ತೆ ಅಗಲೀಕರಣಕ್ಕೆ ಕಟ್ಟಡ ತೆರವು ಕಾರ್ಯ ಶುರು

ನಗರದ ರಸ್ತೆ ಅಗಲೀಕರಣಕ್ಕೆ ಸಚಿವರು ಸಂಕಲ್ಪ ಮಾಡಿದ್ದು, ತುರ್ತಾಗಿ ಕಟ್ಟಡ ತೆರವು ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ರಸ್ತೆ ಮಧ್ಯದಿಂದ 50 ಅಡಿ ಜಾಗ ಗುರುತಿಸಲಾಗಿದೆ. ಮೂರ್ನಾಲ್ಕು ಕಟ್ಟಡ ಮಾಲೀಕರು ಸ್ವಯಂ ಕಟ್ಟಡ ತೆರವು ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ದಸರಾ ಹಬ್ಬದ ನಂತರ ನಿರಂತರವಾಗಿ ಕಟ್ಟಡ ತೆರವು ಕಾರ್ಯ ಶುರುವಾಗಲಿದೆ. ರಸ್ತೆ ಅಗಲೀಕರಣವಾಗಬೇಕೆಂಬ ಸಚಿವರ ಆದೇಶ ಪಾಲಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ತಿಳಿಸಿದರು.