ಹೊನ್ನೆಕಟ್ಟಾದ ಮೀನು ಸಾಕಾಣಿಕಾ ಕೇಂದ್ರಕ್ಕೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಡನೆ ತೆರಳಿ, ಕೇಂದ್ರ ವೀಕ್ಷಿಸಿ, ಮಾಹಿತಿ ಪಡೆದು ಯಶಸ್ವಿ ಮಹಿಳಾ ಉದ್ಯಮಿಯನ್ನು ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ಶಿರಸಿ
ಕೇಂದ್ರ ಸರ್ಕಾರದ ಅತೀ ನಿರೀಕ್ಷಿತ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಮೀನು ಸಾಕಾಣಿಕಾ ಕೇಂದ್ರ ನಿರ್ಮಿಸಿ, ಅದರಿಂದ ಆದಾಯವನ್ನು ಪಡೆದು ಅಡಕೆ ಕೃಷಿಯ ಮೇಲೆ ಜತೆಗೆ ಇದೀಗ ಮೀನು ಸಾಕಾಣಿಕೆಯ ಆದಾಯದ ಮೂಲಕ ಜೀವನಕ್ಕೆ ಆಧಾರವನ್ನಾಗಿಸಿಕೊಂಡಿರುವ ತಾಲೂಕಿನ ಹೆಗಡೆಕಟ್ಟಾ ಸಮೀಪದ ಹೊನ್ನೆಕಟ್ಟಾದ ಕುಸುಮಾ ಹೆಗಡೆ ಹಾಗೂ ಅವರ ಮಕ್ಕಳಾದ ಅಜಯ ಹಾಗೂ ಅಕ್ಷಯ ಹೆಗಡೆ ಸಾಧನೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ಲಾಘಿಸಿದರು.ಹೊನ್ನೆಕಟ್ಟಾದ ಮೀನು ಸಾಕಾಣಿಕಾ ಕೇಂದ್ರಕ್ಕೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಡನೆ ತೆರಳಿ, ಕೇಂದ್ರ ವೀಕ್ಷಿಸಿ, ಮಾಹಿತಿ ಪಡೆದು ಯಶಸ್ವಿ ಮಹಿಳಾ ಉದ್ಯಮಿಯನ್ನು ಶ್ಲಾಘಿಸಿ ಮಾತನಾಡಿದರು. ನಮ್ಮ ಮಲೆನಾಡು ಭಾಗದಲ್ಲಿ ಇತ್ತೀಚಿಗೆ ಕೇವಲ ಅಡಕೆ ಕೃಷಿಯನ್ನೇ ನಂಬಿಕೊಂಡು ಬದುಕುವ ಬದಲು, ಅಡಕೆಯ ಜೊತೆಗೆ ಈ ರೀತಿಯಲ್ಲಿ ಪರ್ಯಾಯ ಉದ್ಯಮ, ಕೃಷಿ ಮಾಡುವುದು ಯೋಗ್ಯವಾಗಿದೆ. ಅದರಲ್ಲಿಯೂ ಯುವಕರು ಕೆಲಸಕ್ಕಾಗಿ ಹೊರ ಪ್ರದೇಶಕ್ಕೆ ತೆರಳುವ ಬದಲು ನಾವಿರುವ ಪ್ರದೇಶದಲ್ಲಿಯೇ ಈ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುವುದು ನಿಜಕ್ಕೂ ಮಾದರಿ ನಡೆ. ಈ ನಿಟ್ಟಿನಲ್ಲಿ ಇವರು ಅಭಿನಂದನೆಗೆ ಅರ್ಹರು ಎಂದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವೈಭವ ಜಿ.ಎಸ್. ಮಾತನಾಡಿ, ಕುಸುಮಾ ಹೆಗಡೆ ಇವರಿಗೆ ನಮ್ಮ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಅನುಕೂಲ ದೊರೆತಿದೆ. ಇನ್ನಷ್ಟು ಜನರು ಈ ರೀತಿಯಾಗಿ ತೊಡಗಿಕೊಳ್ಳಲಿ ಎಂದರು.ಮೀನು ಸಾಕಾಣಿಕಾ ಕೇಂದ್ರದ ಅಜಯ್ ಹೆಗಡೆ ಮಾತನಾಡಿದರು. ಪ್ರಮುಖರಾದ ಆರ್.ಡಿ. ಹೆಗಡೆ ಜಾನ್ಮನೆ, ಪಿವಿ ಹೆಗಡೆ ಹೆಗಡೆಕಟ್ಟಾ, ಮಂಜುನಾಥ ಹೆಗಡೆ, ಹೆಗಡೆಕಟ್ಟಾ ಸೊಸೈಟಿ ಅಧ್ಯಕ್ಷ ಎಂ.ಆರ್. ಹೆಗಡೆ, ಕಾನಗೋಡು ಸೊಸೈಟಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೆಕೇರಿ, ಪ್ರಸನ್ನ ಹೆಗಡೆಕಟ್ಟಾ, ಪ್ರಸಾದ ಶರ್ಮಾ ಸಾಲ್ಕಣಿ ಸೇರಿದಂತೆ ಪ್ರಮುಖರು ಇದ್ದರು.