ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಕೃಷಿ ಇಲಾಖೆಯಿಂದ ಪೂರೈಕೆಯಾಗಿರುವ ಜಿಆರ್‌ಜಿ೧೫೨ ತಳಿ ತೊಗರಿ ಬೀಜ ಬಿತ್ತನೆ ಮಾಡಿ ತಾಲೂಕಿನ ಹತ್ತರಕಿಹಾಳ, ಉಕ್ಕಲಿ, ಮನಗೂಳಿ, ಯಂಬತ್ನಾಳ ಸೇರಿದಂತೆ ವಿವಿಧ ಗ್ರಾಮಗಳ ಹಲವು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತೊಗರಿ ಬೆಳೆಯೂ ಹುಲಸಾಗಿ ಬೆಳೆದಿದ್ದು, ಹೂ-ಕಾಯಿ ಇಲ್ಲದಂತಾಗಿ. ಇದರಿಂದಾಗಿ ರೈತ ಬಾಂಧವರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಬಸವರಾಜ ನಂದಿಹಾಳಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಕೃಷಿ ಇಲಾಖೆಯಿಂದ ಪೂರೈಕೆಯಾಗಿರುವ ಜಿಆರ್‌ಜಿ೧೫೨ ತಳಿ ತೊಗರಿ ಬೀಜ ಬಿತ್ತನೆ ಮಾಡಿ ತಾಲೂಕಿನ ಹತ್ತರಕಿಹಾಳ, ಉಕ್ಕಲಿ, ಮನಗೂಳಿ, ಯಂಬತ್ನಾಳ ಸೇರಿದಂತೆ ವಿವಿಧ ಗ್ರಾಮಗಳ ಹಲವು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತೊಗರಿ ಬೆಳೆಯೂ ಹುಲಸಾಗಿ ಬೆಳೆದಿದ್ದು, ಹೂ-ಕಾಯಿ ಇಲ್ಲದಂತಾಗಿ. ಇದರಿಂದಾಗಿ ರೈತ ಬಾಂಧವರು ತೀವ್ರ ಆತಂಕಕ್ಕೊಳಗಾಗಿದ್ದಾರೆ.ಈ ವರ್ಷ ಸಕಾಲಿಕವಾಗಿ ಉತ್ತಮ ಮಳೆಯಾಗಿರುವುದರಿಂದ ಬಿತ್ತನೆ ಕಾರ್ಯ ಉತ್ತಮವಾಗಿದೆ. ತಾಲೂಕಿನಲ್ಲಿ ರೈತ ಬಾಂಧವರು ತೊಗರಿ, ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ತಾಲೂಕಿನಲ್ಲಿ ಸುಮಾರು ೭೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬಿತ್ತನೆ ಮಾಡಿದ್ದು. ಈಗಾಗಲೇ ತೊಗರಿಗೆ ಕೀಟನಾಶಕ ಸಿಂಪರಣೆ ಮಾಡಿದ್ದರಿಂದ ಕಾಯಿಯಾಗಿವೆ. ಆದರೆ, ಪಿಂಕ್ ತಳಿ ಬೀಜದ ತೊಗರಿ ಕಾಯಿ ಒಣಗುವ ಹಂತದಲ್ಲಿವೆ. ಈ ಸನ್ನಿವೇಶದಲ್ಲಿ ಕೃಷಿ ಇಲಾಖೆಯಿಂದ ಪೂರೈಕೆಯಾಗಿರುವ ಜಿಆರ್‌ಜಿ೧೫೨ ತಳಿ ತೊಗರಿ ಬೀಜ ಬಿತ್ತನೆ ಮಾಡಿದ ರೈತರ ಜಮೀನುಗಳಲ್ಲಿ ತೊಗರಿ ಗಿಡಗಳು ಹುಲಸಾಗಿ ಬೆಳೆದರೂ ಅದರಲ್ಲಿ ಹೂ-ಕಾಯಿ ಮಾತ್ರ ಬಿಟ್ಟಿಲ್ಲ. ರೈತರು ಈ ಬೆಳೆಗೆ ಎರಡು-ಮೂರು ಸಲ ಕೀಟನಾಶಕ ಸಿಂಪಡಣೆ ಮಾಡಿದರೂ ಪ್ರಯೋಜನಕ್ಕೆ ಬರದಂತಾಗಿದೆ.ಜಿಆರ್‌ಜಿ೧೫೨ ತಳಿ ತೊಗರಿ ಬೀಜವು ದೀರ್ಘಾವಧಿ ತಳಿಯಾಗಿದೆ. ತೊಗರಿಯಲ್ಲಿ ಪಿಂಕ್, ಗುಳ್ಳಾಳ, ಜಿಆರ್‌ಜಿ೧೫೨ ಸೇರಿದಂತೆ ವಿವಿಧ ತರಹದ ಬೀಜಗಳಿವೆ. ತಾಲೂಕಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಪಿಂಕ್ ತಳಿ ತೊಗರಿ ಬೀಜವನ್ನು ಬಿತ್ತನೆ ಮಾಡಿದ್ದಾರೆ. ಸುಮಾರು ೩-೪ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಜಿಆರ್‌ಜಿ೧೫೨ ತಳಿ ತೊಗರಿ ಬೀಜ ಬಿತ್ತನೆ ಮಾಡಲಾಗಿದೆ. ಕೆಲ ಪ್ರದೇಶದಲ್ಲಿ ಈ ಬೆಳೆ ಮಂಜಿಗೆ ಸಿಕ್ಕು ಹೂ-ಕಾಯಿ ಆಗಿಲ್ಲ. ಉಳಿದೆಡೆ ಇದೇ ತಳಿ ತೊಗರಿ ಚೆನ್ನಾಗಿದೆ. ಜಿಆರ್‌ಜಿ೧೫೨ ತೊಗರಿ ಬೆಳೆ ಹೂ ಬಿಡುವ ಸಂದರ್ಭದಲ್ಲಿ ಮಂಜು ಇರಬಾರದು. ಇದನ್ನು ಸಾಲಿನಿಂದ ಸಾಲಿಗೆ, ಗಿಡದಿಂದ ಗಿಡಕ್ಕೆ ಅಂತರ ಕಾಯ್ದು ಬಿತ್ತನೆ ಮಾಡಬೇಕು. ಅಂದಾಗ ಈ ಬೆಳೆ ಉತ್ತಮವಾಗಿ ಬರುತ್ತದೆ. ಹತ್ತರಕಿಹಾಳ, ಉಕ್ಕಲಿ ಸೇರಿದಂತೆ ಕೆಲವೆಡೆ ಬಿತ್ತನೆ ಮಾಡಿರುವ ಜಿಆರ್‌ಜಿ೧೫೨ ತಳಿ ತೊಗರಿ ಬೆಳೆ ಹೂ ಬಿಡುವ ಕಾಲದಲ್ಲಿ ತೇವಾಂಶ ಕೊರತೆ, ವಾತಾವರಣದ ವೈಪರೀತ್ಯ ಉಂಟಾಗಿರಬಹುದು. ಅದರಿಂದಲೇ ಹೀಗಾಗಿರಬಹುದು ಎಂದು ಕೃಷಿ ವಿಜ್ಞಾನಿಗಳ ಅಭಿಪ್ರಾಯ. ಈಗಾಗಲೇ ಕೃಷಿ ವಿಜ್ಞಾನಿಗಳ ತಂಡ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದು, ಈ ಬೆಳೆಯ ಕುರಿತು ವರದಿ ನೀಡಲಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಹೇಳಿದರು.ತಾಲೂಕಿನ ಮನಗೂಳಿ, ಹತ್ತರಕಿಹಾಳ ಗ್ರಾಮದ ಕೆಲ ರೈತರ ಜಮೀನಿನಲ್ಲಿ ಬೆಳೆದಿರುವ ಜಿಆರ್‌ಜಿ ೧೫೨ ತೊಗರಿ ಬೆಳೆಯನ್ನು ಕೃಷಿ ವಿಜ್ಞಾನಿಗಳು ಮಂಗಳವಾರ ವೀಕ್ಷಿಸಿದರು. ಈ ತಂಡದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ, ವಿಜಯಪುರದ ಕೃಷಿ ಉಪನಿರ್ದೇಶಕ ಪ್ರಕಾಶ, ಬಸವನಬಾಗೇವಾಡಿ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ, ಮನಗೂಳಿ ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಬಿ.ಬಿ.ಸಕ್ರಿ, ಖಾದ್ರಿ, ಸಾಗರ ಬಾಗೇವಾಡಿ, ಕೃಷಿ ವಿಜ್ಞಾನಿಗಳು ಇದ್ದರು.ಕೋಟ್
ನಾವು ಕೃಷಿ ಇಲಾಖೆಯಿಂದ ಜಿಆರ್‌ಜಿ೧೫೨ ತಳಿ ತೊಗರಿ ಬೀಜ ಪಡೆದು ಬಿತ್ತನೆ ಮಾಡಿದ್ದೇವೆ. ಕೀಟನಾಶಕ ಸಿಂಪಡಣೆ ಸೇರಿ ಸಾವಿವಾರು ರೂಪಾಯಿ ಖರ್ಚು ಮಾಡಿದ್ದೇವೆ. ಆದರೆ, ಗಿಡ ಹುಲುಸಾಗಿ ಬೆಳೆದರೂ ಹೂ, ಕಾಯಿ ಬಿಟ್ಟಿಲ್ಲ. ಕಳಪೆ ಬೀಜ ನೀಡಲಾಗಿದೆ. ಕಟಾವು ಮಾಡಿದರೂ ಖರ್ಚು ಮಾಡಿದ ಹಣವು ಬರುವುದಿಲ್ಲ. ನಾವು ಬೆಳೆ ವಿಮೆ ತುಂಬಿದ್ದು, ಸರ್ಕಾರ ಬೆಳೆ ಸಮೀಕ್ಷೆ ಮಾಡಿಸಿ ಪರಿಹಾರ ನೀಡಬೇಕು.ಈರಣ್ಣು, ಶ್ರೀಶೈಲ, ಹತ್ತರಕಿಹಾಳ ರೈತರು.