ಸಂಸ್ಕಾರ ಕೊರತೆಯಿಂದ ಲವ್‌ ಜಿಹಾದ್‌: ಭಾಗ್ವತ್‌

| Published : Nov 10 2025, 03:00 AM IST

ಸಾರಾಂಶ

ದೇಶದಲ್ಲಿ ಲವ್‌ ಜಿಹಾದ್‌ ಯಶಸ್ಸಿಗೆ ನಮ್ಮ ಹಿಂದೂ ಮಕ್ಕಳ ಸಂಸ್ಕಾರದ ಕೊರತೆಯೇ ಕಾರಣ’ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ.ಮೋಹನ್‌ ಭಾಗವತ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ದೇಶದಲ್ಲಿ ಲವ್‌ ಜಿಹಾದ್‌ ಯಶಸ್ಸಿಗೆ ನಮ್ಮ ಹಿಂದೂ ಮಕ್ಕಳ ಸಂಸ್ಕಾರದ ಕೊರತೆಯೇ ಕಾರಣ’ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ.ಮೋಹನ್‌ ಭಾಗವತ್‌ ಹೇಳಿದ್ದಾರೆ.

ಆರ್‌ಎಸ್‌ಎಸ್‌ ನೂರನೇ ವರ್ಷದ ಆಚರಣೆ ಪ್ರಯುಕ್ತ ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ‘ಸಂಘದ 100 ವರ್ಷ ಪಯಣ; ನವ ಕ್ಷಿತಿಜಗಳು’ ಶೀರ್ಷಿಕೆಯಡಿ ಆಯೋಜಿಸಿರುವ ಎರಡು ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಭಾನುವಾರ ಪ್ರಶ್ನೋತ್ತರದ ವೇಳೆ ಲವ್‌ ಜಿಹಾದ್‌ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಲವ್ ಜಿಹಾದ್‌ ಹೇಗೆ ಆಗುತ್ತದೆ? ನಮ್ಮ ರಕ್ತವನ್ನೇ ಹಂಚಿಕೊಂಡಿರುವ, ನಮ್ಮ ಹಿಂದೂ ಸಂಸ್ಕಾರದಲ್ಲೇ ಬೆಳೆದಿರುವ ಹುಡುಗ ಅಥವಾ ಹುಡುಗಿ ಯಾವುದೋ ಕ್ಷಣಿಕ ಆಕರ್ಷಣೆಗೆ ಒಳಗಾಗಿ ಹೊರಗಿನವರ ಜೊತೆ ಹೋಗಿಬಿಡುತ್ತಾರೆ. ಇದು ನಮಗಿರುವ ಕೊರತೆ. ನಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಮರ್ಯಾದೆಯ ಅರಿವು ಕೊಡುವುದು ನಮ್ಮ ಜವಾಬ್ದಾರಿ. ಅದರಲ್ಲಿ ವಿಫಲರಾಗಿದ್ದೇವೆ. ಅದರಿಂದಾಗಿ ಲವ್ ಜಿಹಾದ್ ಯಶಸ್ಸು ಪಡೆದಿದೆ ಎಂದು ಅಭಿಪ್ರಾಯಪಟ್ಟರು.

ಲವ್ ಜಿಹಾದ್ ಪ್ರಕರಣಗಳು ನಡೆದಾಗ ಎಲ್ಲ ಮುಸ್ಲಿಮರನ್ನೂ ಒಂದೇ ಚೌಕಟ್ಟಿಗೆ ತರಬಾರದು. ಜಿಹಾದಿ, ಗಜ್ವಾ, ಲವ್ ಜಿಹಾದ್ ಇತ್ಯಾದಿ ಮುಸ್ಲಿಮರಲ್ಲಿಯೂ ದೊಡ್ಡ ವರ್ಗ ಇದೆ. ಆದರೆ ಇದೆಲ್ಲವನ್ನೂ ತಿರಸ್ಕರಿಸುವ ಮುಸ್ಲಿಮರೂ ಇದ್ದಾರೆ. ಅವರನ್ನು ಅರಿಯಬೇಕು ಮತ್ತು ಸಂಪರ್ಕಿಸಬೇಕು. ಮುಸ್ಲಿಂ ಸಮುದಾಯವನ್ನು ನೋಡಿದರೆ ಅಲ್ಲಿನ ಒಂದು ವರ್ಗ ಇದೆಲ್ಲವನ್ನೂ ತಿರಸ್ಕರಿಸುತ್ತದೆ. ಮೂಲಭೂತವಾದಿಗಳ ಸಂಖ್ಯೆಯೂ ಗಣನೀಯವಾಗಿದೆ. ಹಾಗಾಗಿ ಇಡೀ ಮುಸ್ಲಿಂ ಸಮುದಾಯವನ್ನು ಒಂದು ಚೌಕಟ್ಟಿನಲ್ಲಿ ತರಬಾರದು. ತಂತ್ರವಾಗಿಯೂ ಇದು ಸರಿಯಲ್ಲ. ಏಕೆಂದರೆ, ಹೀಗೆ ಮಾಡುವುದರಿಂದ ಮೂಲಭೂತವಾದಿಗಳ ಸಂಖ್ಯೆ ಹೆಚ್ಚಳವಾಗುತ್ತದೆ ಎಂದರು.

ಭಾರತ ಇಂದಿಗೂ ಹಿಂದೂಸ್ತಾನ:

ಕೇವಲ ಒಂದು ಶತಮಾನದಲ್ಲಿ ವಿಶ್ವದ ಮೂರು ಖಂಡಗಳು ಸಂಪೂರ್ಣ ಮತಾಂತರವಾದವು. ಆದರೆ ಭಾರತದಲ್ಲಿ ಮೂರು ಶತಮಾನಗಳು ಕಳೆದರೂ ಇನ್ನೂ ಮತಾಂತರವಾದವರು ನಗಣ್ಯ ಎನ್ನಿಸುವಷ್ಟು ಅಲ್ಪಸಂಖ್ಯಾತರಾಗಿದ್ದಾರೆ. ಮೆಕ್ಸಿಕೋ-ಸೈಬೀರಿಯಾವರೆಗೆ ಎಲ್ಲ ದೇಶಗಳೂ ಬದಲಾದವು. ರೋಮ್, ಈಜಿಪ್ಟ್ ಕೇವಲ ಹೆಸರಿಗಷ್ಟೇ ಇವೆ. ಆದರೆ ಭಾರತ ಇಂದಿಗೂ ಹಿಂದೂಸ್ತಾನವಾಗಿದೆ. ಹಾಗಾಗಿ ನಮ್ಮ ಈ ಏಕತೆ, ಸಾಮರ್ಥ್ಯವನ್ನು ಅರಿಯಬೇಕು. ಈ ಸಾಮರ್ಥ್ಯ ಹೆಚ್ಚಬೇಕು ಎನ್ನುವುದಷ್ಟೇ ಸಮಸ್ಯೆಗೆ ಪರಿಹಾರ ಎಂದು ಭಾಗವತ್ ಅವರು ಮತಾಂತರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಜಾತಿ ಎನ್ನುವುದು ಗೊಂದಲ:

ಪ್ರಸ್ತುತ ದೇಶದಲ್ಲಿ ಜಾತಿ ಎನ್ನುವುದು ವ್ಯವಸ್ಥೆಯಲ್ಲ, ಬದಲಾಗಿ ಅದೊಂದು ಗೊಂದಲವಾಗಿದೆ. ಸಾಂಪ್ರದಾಯಿಕವಾಗಿ ಜಾತಿಗೆ ಒಂದು ಉದ್ಯೋಗ ಇತ್ತು. ಬೇರೆಯವರು ಆ ಕೆಲಸವನ್ನು ಮಾಡಲು ಸಾಧ್ಯವಿರಲಿಲ್ಲ. ಆ ವ್ಯವಸ್ಥೆ ಈಗ ಇಲ್ಲ. ಯಾರು ಯಾವ ಕೆಲಸವನ್ನು ಬೇಕಾದರೂ ಮಾಡಬಹುದು ಎ೦ದಾದರೂ ಜಾತಿ ಮಾತ್ರ ಇದೆ. ರಿಯಾಯಿತಿ ಹಾಗೂ ಚುನಾವಣೆಗಾಗಿ ಜಾತಿ ಉಳಿದುಕೊಂಡಿದೆ. ಹಾಗಾಗಿ ಜಾತಿ ವಿನಾಶದ ಅವಶ್ಯಕತೆಯಿಲ್ಲ, ಜಾತಿಯ ಮರೆವು ಅಗತ್ಯವಿದೆ. ಸಂಘದಲ್ಲಿ ನಾವು ಜಾತಿಯನ್ನು ಹೇಳುವುದೇ ಇಲ್ಲ, ದೊಡ್ಡ ಗೆರೆಯನ್ನು ಎಳೆಯುವುದರ ಮೂಲಕ ಇಲ್ಲವಾಗಿಸುತ್ತೇವೆ. ಇದನ್ನೇ ಸಮಾಜದಲ್ಲಿ ಮಾಡಿದರೆ ಆಯಿತು ಎಂದು ಹೇಳಿದರು.

‘ಇಸಂ’ನಿಂದ ವಿಭಜನೆ:

ಹಿಂದುತ್ವ ಮತ್ತು ಹಿಂದೂಯಿಸಂ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾಗವತ್, ಹಿಂದೂಯಿಸಂ ಎಲ್ಲರನ್ನೂ ಒಳಗೊಳ್ಳುತ್ತದೆ. ಆದರೆ ಹಿಂದುತ್ವ ಪ್ರತ್ಯೇಕಿಸುತ್ತದೆ ಎಂದು ಹೇಳುವವರು ಮೊದಲು ತಮ್ಮ ಮನಸ್ಸನ್ನು ವಸಾಹತು ಪ್ರಭಾವದಿಂದ ಮುಕ್ತಗೊಳಿಸಿಕೊಳ್ಳಬೇಕು. ಹಿಂದುತ್ವ ಎನ್ನುವುದು ಪ್ರತ್ಯೇಕಿಸುತ್ತದೆ ಎನ್ನುವುದು ತಪ್ಪು. ಇದನ್ನು ನಮ್ಮ ಮನಸ್ಸಿನಲ್ಲಿ ಬಿತ್ತಲಾಗಿದೆ. ‘ಇಸಂ’ ಎನ್ನುವುದು ಯಾವಾಗಲೂ ಒಳಗೊಳ್ಳುವುದಲ್ಲ, ಅದು ಪ್ರತ್ಯೇಕಿಸುವುದು ಎಂದು ವಿಶ್ಲೇಷಿಸಿದರು.

ಯಾವುದೇ ಒಂದು ಪೂಜಾ ಪದ್ಧತಿಯನ್ನು ಹಿಂದೂ ಎನ್ನಲಾಗುತ್ತದೆಯೇ? ಈಶ್ವರನನ್ನು ಒಪ್ಪದಿದ್ದರೂ ಒಂದೇ ಪೂಜಾ ವಿಧಾನವನ್ನು ಒಪ್ಪುವವರು, ದೇವರನ್ನೇ ನಂಬದವರೂ ಹಿಂದೂಗಳೇ ಅಲ್ಲವೇ? ಎಲ್ಲ ರೀತಿಯ ವೈವಿಧ್ಯತೆಯನ್ನೂ ಗೌರವಿಸುವ, ಸ್ವೀಕರಿಸುವ ಮೂಲಕ ಏಕತೆಯನ್ನು ಸಾಧಿಸುವ ಸ್ವಭಾವದ ಹೆಸರೇ ಹಿಂದೂ. ಅದನ್ನು ನೀವು ಪ್ರತ್ಯೇಕತೆ ಎನ್ನುತ್ತೀರಾ? ಇಡೀ ಪ್ರಪಂಚದಲ್ಲಿ ವಿಭಜನೆ ಉಂಟುಮಾಡಿದ ‘ಇಸಂ’ ಅನ್ನು ಒಳಗೊಳ್ಳುವಿಕೆ ಎನ್ನುತ್ತೀರಾ ? ಮತ್ತೊಮ್ಮೆ ಆಲೋಚಿಸಿ ಎಂದರು.ಹಿಂದುಗಳಾಗಿದ್ದಕ್ಕೆ ಭಾರತ ಸೆಕ್ಯುಲ‌ರ್:ಪಶ್ಚಿಮದಲ್ಲಿ ರಾಜ ಹಾಗೂ ಪೋಪ್ ನಡುವೆ ಉಂಟಾದ ಸಂಘರ್ಷಕ್ಕೆ ಪರಿಹಾರವಾಗಿ ಸೆಕ್ಯುಲರಿಸಂ ಹುಟ್ಟುಕೊಂಡಿತು. ಹಿಂದೂ ಎನ್ನುವುದು ಎಲ್ಲರನ್ನೂ ಒಳಗೊಳ್ಳುವ ಒಂದು ನಡವಳಿಕೆ. ಆ ನಡವಳಿಕೆಯಿಂದ ಯಾರೇ ಸರ್ಕಾರ ನಡೆಸಿದರೂ ಆ ಸರ್ಕಾರವೂ ಸೆಕ್ಯುಲರ್ ಆಗಿರುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶಗಳು ಸೆಕ್ಯುಲರ್ ಆಗಿವೆಯೇ? ಭಾರತ ಮಾತ್ರ ಏಕೆ ಸೆಕ್ಯುಲರ್ ಆಯಿತು? ಏಕೆಂದರೆ ನಮ್ಮ ಸಂವಿಧಾನದ ಕರ್ತೃಗಳು ಹಿಂದೂಗಳೇ ಆಗಿದ್ದರು. ಹೀಗಾಗಿ ನೈಜ ಹಿಂದೂಗಳನ್ನು ಸರಿಪಡಿಸಬೇಕಾದ ಅಗತ್ಯವಿಲ್ಲ. ಹಿಂದೂಗಳು ಎಂದಿಗೂ ಸೆಕ್ಯುಲರ್ ಅಡಳಿತಕ್ಕೇ ಮುಂದಾಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಮೋಹನ್‌ ಭಾಗವತ್‌ ಉತ್ತರಿಸಿದರು.ಹಿಂದೂರಾಷ್ಟ್ರ ಸಾಕಾರ ಸಾಧ್ಯ:ಭೂಮಿಯಿಂದ ಚಂದ್ರನನ್ನು ಸಂಪರ್ಕಿಸಲು ಎಷ್ಟು ಮೀನುಗಳು ಬೇಕು ಎಂದು ವಿಜ್ಞಾನಿಯೊಬ್ಬರನ್ನು ಪ್ರಶ್ನಿಸಿದಾಗ, ಸಾಕಷ್ಟು ಉದ್ದವಿದ್ದರೆ ಒಂದೇ ಮೀನು ಸಾಕು ಎಂದು ಉತ್ತರಿಸಿದರಂತೆ. ಹಾಗೆಯೇ, 142 ಕೋಟಿ ಜನರು ಮನಸ್ಸಿಟ್ಟು ದೇಶದ ಕೆಲಸವನ್ನು ಮಾಡಲು ಮುಂದಾದರೆ ನಾಳೆ ಬೆಳಗ್ಗೆಯೇ ಹಿಂದೂ ರಾಷ್ಟ್ರ ಸಾಕಾರವಾಗುತ್ತದೆ. ಹಾಗೆ ಮಾಡದೇ ಇದ್ದರೆ, ಎಷ್ಟು ಸಮಯ ಬೇಕಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಅದು ಸಾಧ್ಯವಾಗುತ್ತದೆ ಎಂಬ ನಂಬಿಕೆ ನಮಗಿದೆ, ಅದು ಪೂರ್ಣವಾಗುವವರೆಗೂ ಮುಂದುವರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಸಸ್ಯಾಹಾರ-ಮಾಂಸಾಹಾರ:ಭಾರತದಿಂದ ರಫ್ತು ಮಾಡುವ ಬೀಫ್‌ನಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸುತ್ತದೆ. ಆದರೆ ಮಾಂಸವನ್ನಾದರೂ ಏಕೆ ರಫ್ತು ಮಾಡಬೇಕು ಎಂಬ ಪ್ರಶ್ನೆಯಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಸಸ್ಯಾಹಾರವನ್ನು ಪ್ರೋತ್ಸಾಹಿಸಬೇಕು ಎಂದರೆ ಬಹಳಷ್ಟು ಪ್ರಕ್ರಿಯೆ ನಡೆಯಬೇಕಾಗುತ್ತದೆ. ಏಕೆಂದರೆ ನಮ್ಮ ಹಿಂದೂ ಸಮಾಜದಲ್ಲಿ ಶೇ.72 ಜನರು ಮಾಂಸಾಹಾರ ಸೇವಿಸುತ್ತಾರೆ. ಬಂಗಾಳ, ಅಸ್ಸಾಂ, ಒಡಿಶಾದಲ್ಲಿ ಮೀನನ್ನು ಮಾಂಸಾಹಾರ ಎಂದು ಹೇಳುವುದಿಲ್ಲ. ಅದು ನೀರಿನ ಫಲ ಎನ್ನುತ್ತಾರೆ ಎಂದು ಮೋಹನ್‌ ಭಾಗವತ್‌ ಹೇಳಿದರು.ನ್ಯಾಯಾಂಗ ಸುಧಾರಣೆ:ದೇಶದ ನ್ಯಾಯಾಂಗದಲ್ಲಿ ಸುಧಾರಣೆ ಆಗಬೇಕು ಎಂದು ಸ್ವತಃ ಮುಖ್ಯ ನ್ಯಾಯಮೂರ್ತಿಗಳೇ ಹೇಳಿದ್ದಾರೆ. ಅನೇಕರೂ ಈ ಬಗ್ಗೆ ಧ್ವನಿಯೆತ್ತಿದ್ದಾರೆ. ಗಂಭೀರವಾದ ಪರಿವರ್ತನೆಗಳೇ ಆಗಬೇಕಿದೆ. ಆದರೆ ಅದಕ್ಕಾಗಿ ಬಹಳ ಅರ್ಥಪೂರ್ಣವಾದ ಚಟುವಟಿಕೆ ಕಾಣಿಸುತ್ತಿಲ್ಲ. ಇದಕ್ಕಾಗಿ ಹೊರಗಿನ ಬೆಂಬಲ ಬೇಕೆಂದು ನನಗನ್ನಿಸುವುದಿಲ್ಲ. ನ್ಯಾಯಾಂಗವು ಸಂವಿಧಾನದ ಒಂದು ಅಂಗವಾಗಿ ತಾನೇ ಮುಕ್ತವಾಗಿ ಆಲೋಚಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಭಾಗವತ್‌ ಪ್ರತಿಕ್ರಿಯಿಸಿದರು.ದೇಶ ಕಟ್ಟುವ ಕೆಲಸವನ್ನು ಯಾರಿಗೂ ಗುತ್ತಿಗೆ ನೀಡಬೇಡಿ. ಸಂಘಕ್ಕೂ ಯಾವುದನ್ನೂ ಗುತ್ತಿಗೆ ನೀಡಬೇಡಿ. ಯಾವುದೇ ದೇವರು, ಅವತಾರ, ವಿಚಾರ, ಮಹಾಪುರುಷ, ಪಕ್ಷ, ಸಂಘಟನೆಯು ಈ ದೇಶವನ್ನು ಉದ್ಧಾರ ಮಾಡುವುದಿಲ್ಲ. ಸಮಾಜವೇ ಈ ಕಾರ್ಯವನ್ನು ಕೈಗೆತ್ತಿಕೊಂಡರೆ ಎಲ್ಲ ವಿಚಾರಗಳೂ ಸಹಕಾರಕ್ಕೆ ಬರುತ್ತವೆ. ಸಮಾಜ ಮಲಗಿದರೆ ಇವೆಲ್ಲವೂ ವಿಫಲವಾಗುತ್ತದೆ ಎಂದರು.ಪೋಷಕರು ತಮ್ಮ ನಡವಳಿಕೆಯಿಂದ ಮಕ್ಕಳಿಗೆ ಕಲಿಸಬೇಕು:ತಂತ್ರಜ್ಞಾನವು ತಾನೇತಾನಾಗಿ ಹಾಳು ಮಾಡಲು ಹೋಗುವುದಿಲ್ಲ. ಎಲ್ಲವೂ ನಮ್ಮ ಮೇಲೆ ಅವಲಂಬಿತವಾಗಿದೆ. ಮೊಬೈಲಿನಿಂದ ಸಾಕಷ್ಟು ಉಪಯೋಗವಿದೆ, ಅಪಾಯವೂ ಇದೆ. ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ. ಮೊಬೈಲನ್ನು ಉಪಕಾರಿಯಾಗಿಯೂ ಬಳಸಬಹುದು. ಪೋಷಕರು ತಮ್ಮ ನಡವಳಿಕೆಯಿಂದ ಮಕ್ಕಳಿಗೆ ಕಲಿಸಬೇಕು. ಮಕ್ಕಳು ನಮ್ಮೆದುರು ತೆರೆದುಕೊಳ್ಳಬೇಕೆ ವಿನಃ ಹೆದರಿ ಮುದುಡಿಕೊಳ್ಳಬಾರದು. ನಮ್ಮನ್ನು ಅವರು ಗೌರವಿಸಬೇಕು ಸರಿ, ಅದಕ್ಕಿಂತಲೂ ಹೆಚ್ಚಾಗಿ ಪ್ರೀತಿಸಬೇಕು. ಈ ರೀತಿ ಮಕ್ಕಳನ್ನು ತರಬೇತಿ ನೀಡಿದರೆ ತಂತ್ರಜ್ಞಾನ ಬಳಕೆಯ ಶಿಸ್ತನ್ನೂ ಕಲಿಸಬಹುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.