ರಾಜಕೀಯಕ್ಕೆ ಬಾರದ ಪ್ರಮೋದಾದೇವಿ ಒಡೆಯರ್

| Published : Mar 27 2024, 01:01 AM IST

ಸಾರಾಂಶ

ಪ್ರಮೋದಾದೇವಿ ಒಡೆಯರ್‌ ಅವರ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು 1984, 1989, 1996, 1999 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 1998 ರ ಲೋಕಸಭಾ ಚುನಾವಣೆಯಲ್ಲಿ ಅವರು ಅನಾರೋಗ್ಯ ನಿಮಿತ್ತ ಸ್ಪರ್ಧಿಸಿರಲಿಲ್ಲ. 2004 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಸ್ಪರ್ಧಿಸಿದ್ದರೂ ಮೂರನೇ ಸ್ಥಾನಕ್ಕೆ ಹೋಗಿ ಸೋತರು. 1991 ರಲ್ಲಿ ಒಡೆಯರ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು.

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರಿಗೆ ಕಳೆದ ಹದಿನಾರು ವರ್ಷಗಳಿಂದಲೂ ವಿವಿಧ ರಾಜಕೀಯ ಪಕ್ಷಗಳಿಂದ ರಾಜಕೀಯಕ್ಕೆ ಬರಬೇಕು ಎಂಬ ಒತ್ತಡವಿದ್ದರೂ ಒಪ್ಪಿಲ್ಲ.

ಪ್ರಮೋದಾದೇವಿ ಒಡೆಯರ್‌ ಅವರ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು 1984, 1989, 1996, 1999 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 1998 ರ ಲೋಕಸಭಾ ಚುನಾವಣೆಯಲ್ಲಿ ಅವರು ಅನಾರೋಗ್ಯ ನಿಮಿತ್ತ ಸ್ಪರ್ಧಿಸಿರಲಿಲ್ಲ. 2004 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಸ್ಪರ್ಧಿಸಿದ್ದರೂ ಮೂರನೇ ಸ್ಥಾನಕ್ಕೆ ಹೋಗಿ ಸೋತರು. 1991 ರಲ್ಲಿ ಒಡೆಯರ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು.

ನಾಲ್ಕು ಬಾರಿ ಗೆದ್ದರೂ ಮಂತ್ರಿಯಾಗಲಿಲ್ಲ

ಒಡೆಯರ್‌ ಅವರು ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದರೂ ಕೇಂದ್ರದಲ್ಲಿ ಮಂತ್ರಿಯಾಗಲು ಸಾಧ್ಯವಾಗಲಿಲ್ಲ. 1984 ರಲ್ಲಿ ಮೊದಲ ಬಾರಿ ಗೆದ್ದಾಗ ಕೇಂದ್ರದಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇತ್ತು. ಆದರೆ ಮೊದಲು ಬಾರಿ ಸಂಸದ ಎಂಬ ಕಾರಣಕ್ಕೆ ಮಂತ್ರಿ ಸ್ಥಾನ ಸಿಗಲಿಲ್ಲ. 1989 ರಲ್ಲಿ ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ವಿ.ಪಿ. ಸಿಂಗ್‌ ನೇತೃತ್ವದ ಜನತಾದಳ ಸರ್ಕಾರ ಇತ್ತು. 1991 ರಲ್ಲಿ ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್‌ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಆ ಚುನಾವಣೆಯಲ್ಲಿ ಒಡೆಯರ್‌ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದರು.

1996 ರಲ್ಲಿ ಒಡೆಯರ್‌ ಮೂರನೇ ಬಾರಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಗೆದ್ದಾಗ ಕೇಂದ್ರದಲ್ಲಿ ಒಂದು ವಾರ ಎ.ಬಿ. ವಾಜಪೇಯಿ ನೇತೃತ್ವದ ಬಿಜೆಪಿ, ನಂತರ ಎಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್‌ ನೇತೃತ್ವದ ಸಂಯುಕ್ತ ರಂಗ ಸರ್ಕಾರ ಅಧಿಕಾರ ನಡೆಸಿತು. ಇದರಿಂದ ಒಡೆಯರ್ ಮಂತ್ರಿಯಾಗಲು ಆಗಲಿಲ್ಲ. 1999 ರಲ್ಲಿ ಒಡೆಯರ್‌ ಕಾಂಗ್ರೆಸ್‌ ಟಿಕೆಟ್‌ ಮೇಲೆ ನಾಲ್ಕನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಇದರಿಂದ ಅವರು ಮಂತ್ರಿಯಾಗಲಿಲ್ಲ. 2004 ರಲ್ಲಿ ಕೇಂದ್ರದಲ್ಲಿ ಡಾ. ಮನಮೋಹನ ಸಿಂಗ್‌ ನೇತೃತ್ವದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಒಡೆಯರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತರು.

2006ರ ವೇಳೆಗೆ ಜನತಾ ಪರಿವಾರದಿಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನತ್ತ ಬಂದರು. ಇದರಿಂದಾಗಿ ಒಡೆಯರ್‌ ಸಂಪೂರ್ಣವಾಗಿ ರಾಜಕೀಯದಿಂದ ದೂರವಾಗಿ ಕೆಎಸ್ ಸಿಎ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿಯೇ ಹೆಚ್ಚಾಗಿ ಇರತೊಡಗಿದರು. ಇದರಿಂದ ಮುಖಂಡರು, ಕಾರ್ಯಕರ್ತರು ಅವರಿಂದ ದೂರವಾದರು.

2009ರ ಲೋಕಸಭಾ ಚುನಾವಣೆ ವೇಳೆಗೆ ಮೈಸೂರು ಲೋಕಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಯಿತು. ಸದಾ ಒಡೆಯರ್‌ ಅವರನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸುತ್ತಿದ್ದ ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರ ಪಕ್ಕದ ಚಾಮರಾಜನಗರಕ್ಕೂ, ಕೆ.ಆರ್‌. ನಗರದ ವಿಧಾನಸಭಾ ಕ್ಷೇತ್ರ ಮಂಡ್ಯಕ್ಕೂ ಸೇರ್ಪಡೆಯಾಯಿತು. ಕೊಡಗಿನ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಮೈಸೂರಿಗೆ ಸೇರಿದವು.--- ಪ್ರಮೋದಾದೇವಿ ಹೆಸರು ಪ್ರಸ್ತಾಪ--

2008ರ ವಿಧಾನಸಭಾ ಚುನಾವಣೆ ಬಂದಾಗ ನಗರದ ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರದಿಂದ ಪ್ರಮೋದಾದೇವಿ ಒಡೆಯರ್‌ ಅವರು ಹೆಸರು ಬಿಜೆಪಿಯಲ್ಲಿ ಕೇಳಿ ಬಂದಿತ್ತು. 2014ರ ಲೋಕಸಭಾ ಚುನಾವಣೆ ಬಂದಾಗ ಜೆಡಿಎಸ್‌ ಅವರನ್ನು ರಾಜಕಾರಣಕ್ಕೆ ಕರೆತರುವ ಪ್ರಸ್ತಾಪ ಮಾಡಿತ್ತು. ಆದರೆ 2013ರ ಡಿ.10 ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಹಠಾತ್‌ ಆಗಿ ನಿಧನರಾದರು. ಇದರಿಂದ ಅವರು ರಾಜಕಾರಣಕ್ಕೆ ಬರುವ ಪ್ರಸ್ತಾಪ ಅಲ್ಲಿಗೆ ನಿಂತು ಹೋಯಿತು.

ನಂತರ ಪ್ರಮೋದಾದೇವಿ ಒಡೆಯರ್‌ ಅವರು ರಾಜಪರಂಪರೆಯನ್ನು ಮುಂದುವರಿಸುವ ಸಲುವಾಗಿ ಯದುವೀರ್‌ ಅವರನ್ನು ದತ್ತು ಪಡೆದು, ಪಟ್ಟಾಭಿಷೇಕ ನೆರವೇರಿಸಿದರು. ರಾಜಸ್ಥಾನದ ಡಂಗರ್‌ಪುರ್‌ ರಾಜವಂಶಸ್ಥರಾದ ಹರ್ಷವರ್ಧನ್‌ ಸಿಂಗ್‌ ಅವರ ಪುತ್ರಿ ತ್ರಿಷಿಕಾಕುಮಾರಿ ಅವರೊಂದಿಗೆ ಯದುವೀರ್‌ ಅವರ ವಿವಾಹ ನೆರವೇರಿತು. ಯದುವೀರ್- ತ್ರಿಷಿಕಾ ಅವರ ಪುತ್ರ ಆದ್ಯವೀರ್‌ ನರಸಿಂಹರಾಜ ಒಡೆಯರ್. ತ್ರಿಷಿಕಾ ಅವರ ತಂದೆ ಹರ್ಷವರ್ಧನ್‌ ಸಿಂಗ್‌ ಅವರು ಕಳೆದ ಅವಧಿಯಲ್ಲಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದರು.

-- ಮೋದಿ ಭೇಟಿಯ ನಂತರ ಮತ್ತೆ ಚಿಗುರು--

ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಅರಮನೆಗೆ ಬಂದಾಗ ಪ್ರಮೋದಾದೇವಿ ಒಡೆಯರ್‌, ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ತ್ರಿಷಿಕಾಕುಮಾರಿ, ಆದ್ಯವೀರ್‌ ನರಸಿಂಹರಾಜ ಒಡೆಯರ್‌ ಅವರನ್ನು ಭೇಟಿಯಾಗಿದ್ದರು. ಆಗಲೇ ರಾಜವಂಶಸ್ಥರು ರಾಜಕೀಯಕ್ಕೆ ಬರಬಹುದು ಎಂಬ ಲೆಕ್ಕಾಚಾರ ನಡೆದಿತ್ತು. ಅಳಿಯ ಯದುವೀರ್‌ ಅವರ ಪರವಾಗಿ ಹರ್ಷವರ್ಧನ್‌ ಸಿಂಗ್‌ ಅವರ ಲಾಬಿ ಮಾಡಿ, ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೊಡಿಸಿದ್ದಾರೆ. ಹೀಗಾಗಿ ಎರಡು ದಶಕಗಳ ನಂತರ ಮೈಸೂರು ರಾಜವಂಶಸ್ಥರು ಮತ್ತೆ ರಾಜಕೀಯ ರಂಗಕ್ಕೆ ಧುಮುಕಿ, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.