ಸಾರಾಂಶ
ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಅಗಲಿದ ಹಿರಿಯ ಪ್ರಾಚಾರ್ಯರು, ಪ್ರಾಧ್ಯಾಪಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಿರಸಿ: ನಗರದ ಎಂಇಎಸ್ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ೧೯೬೪- ೬೫ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವಜ್ರಸಂಭ್ರಮ ಸ್ನೇಹಕೂಟಕ್ಕೆ ನೂರಾರು ಜನರು ಸಾಕ್ಷಿಯಾದರು.
ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಅಗಲಿದ ಹಿರಿಯ ಪ್ರಾಚಾರ್ಯರು, ಪ್ರಾಧ್ಯಾಪಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು.ಎಂಇಎಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಶೆಟ್ಟಿ ಮಾತನಾಡಿ, ಶಿಕ್ಷಣದ ಪರಿಸರ ಬದಲಾಗಿದ್ದು, ಮಾನವೀಯತೆಯಿಂದ ಕಲಿಸಿದ ಶಿಕ್ಷಕರು ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸ್ನೇಹಕೂಟವು ಒಂದು ಉತ್ತಮ ಕಾರ್ಯ. ಇದೊಂದು ಅಪೂರ್ವ ಸಮ್ಮಿಲನ. ಇಂತಹ ಕಾರ್ಯಕ್ರಮ ಉಳಿದವರಿಗೆ ಮಾದರಿಯಾಗಲಿ ಎಂದರು.
ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಮಾತನಾಡಿ, ನನ್ನ ಬದುಕಿನಲ್ಲಿ ಸಾಹಿತಿ, ಪತ್ರಕರ್ತನಾಗಲು ಅವಕಾಶ ಮಾಡಿಕೊಟ್ಟ ವಾತಾವರಣ ಈ ಕಾಲೇಜಿನದು. ಇಲ್ಲಿರುವ ಪ್ರತಿಯೊಂದು ಕ್ಷಣದಲ್ಲಿಯೂ ನನಗೆ ಹೊಸ ಹೊಸ ಕಲಿಕೆಯ ಅನುಭವವಾಗಿದೆ. ಇಂತಹ ಕಾರ್ಯಕ್ರಮವು ಎಲ್ಲ ಬ್ಯಾಚ್‌ಗಳ ವಿದ್ಯಾರ್ಥಿಗಳಿಂದ ಆಗಬೇಕು. ತಾನು ಕಲಿತ ಶಿಕ್ಷಣ ಸಂಸ್ಥೆಯ ಅರವತ್ತು ಪ್ರೊಫೆಸರ್ ಕುರಿತು ಚುಟುಕು, ಕವನ ರಚಿಸಿದ್ದೇನೆ ಎಂದರು.ಅಧ್ಯಕ್ಷತೆ ವಹಿಸಿದ್ದ ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ, ಬದುಕಿನಲ್ಲಿ ಹಿರಿಯರ ಅನುಭವಗಳು ಮುಖ್ಯ. ಇದು ಒಂದು ಮಾದರಿ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ಹೆಚ್ಚು ಆಗಬೇಕು. ಮಾರ್ಗದರ್ಶಿ ಯೋಜನೆಯೊಂದಿಗೆ ರೂಪುಗೊಂಡ ಕಾರ್ಯಕ್ರಮ ಇದಾಗಿದೆ ಎಂದರು.
ಮುಂಬೈನ ಎ.ಆರ್. ಶಾಸ್ತ್ರಿ, ಡಾ. ಪಿ.ಎಸ್. ಹೆಗಡೆ, ಡಾ. ಆರ್.ಕೆ. ಹೆಗಡೆ ಮಾತನಾಡಿದರು. ೧೦೦ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆರ್.ಎನ್. ಹೆಗಡೆ ಬಂಡಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಜ್ರ ಸಂಭ್ರಮ ಸಮಿತಿಯ ಅಧ್ಯಕ್ಷ ಡಿ.ಜಿ. ಹೆಗಡೆ ಭೈರಿ ಸ್ವಾಗತಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಗೀತ ವಿಭಾಗದ ಮುಖ್ಯಸ್ಥ ಡಾ. ಕೆ.ಜಿ. ಭಟ್ ಕಾರ್ಯಕ್ರಮ ನಿರೂಪಿಸಿದರು. ವಿ.ಪಿ. ಹೆಗಡೆ ವಂದಿಸಿದರು.