ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಕೋಲ್ಕತ್ತಾದ ಆರ್.ಜೆ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯನಿರತ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ನಡೆಸಿರುವುದು ಇಡೀ ವೈದ್ಯಕೀಯ ಲೋಕವನ್ನೇ ಬೆಚ್ಚಿ ಬೀಳಿಸುವ ಪ್ರಕರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆಲೂರು ತಾಲೂಕು ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸಿದರು.ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮಾರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇತ್ತೀಚೆಗೆ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ದೇಶದಲ್ಲೇ ತಲೆತಗ್ಗಿಸುವ ಪ್ರಕರಣವಾಗಿದೆ. ಇಡೀ ದೇಶದ ಜನತೆಯ ಆರೋಗ್ಯವನ್ನು ಕಾಪಾಡುವ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರು ನಿರ್ಭೀತಿಯಿಂದ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಿಡಿಗೇಡಿಗಳು ಆಸ್ಪತ್ರೆಗೆ ನುಗ್ಗಿ ಬೆಂಕಿ ಹಚ್ಚಿ ಪಿಠೋಪಕರಣಗಳನ್ನು ಒಡೆದು ಧ್ವಂಸ ಮಾಡಿದ್ದಾರೆ. ಈ ರೀತಿ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷವಾದರೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ರೋಗಿಗಳ ಹಿತದೃಷ್ಟಿಯಿಂದ ಹಗಲು ಇರುಳೆನ್ನದೆ ಶ್ರಮಿಸುವ ವೈದ್ಯರು ಹಾಗೂ ವೈದ್ಯ ಇಲಾಖೆಯ ಸಿಬ್ಬಂದಿಗೆ ರಕ್ಷಣೆ ಅತ್ಯಗತ್ಯವಾಗಿದೆ.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಜಯಪ್ರಕಾಶ್ ಮಾತನಾಡಿ, ಕೋಲ್ಕತ್ತಾದಲ್ಲಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಮೇಲೆ ನಡೆದ ಕ್ರೂರ ಅತ್ಯಾಚಾರ ಮತ್ತು ಹತ್ಯೆಯನ್ನು ಈ ಮೂಲಕ ತೀವ್ರವಾಗಿ ಖಂಡಿಸುತ್ತೇವೆ. ಈ ಭೀಕರ ಹಿಂಸಾಚಾರ ಇಡೀ ದೇಶ ಮತ್ತು ವಿಶ್ವವನ್ನು ಬೆಚ್ಚಿ ಬೀಳಿಸಿದೆ. ಹಾಗೆಯೇ ವೈದ್ಯ ವೃತ್ತಿಯಲ್ಲಿ ತೊಡಗುವ ಮೂಲಕ ಇತರರ ಸೇವೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಲ್ಪಟ್ಟಿರುವ ವೈದ್ಯರು ಎಂಥಹ ಸ್ಥಿತಿಯಲ್ಲಿ ಕೆಲಸ ಮಾಡಬೇಕಾಗಿದೆ. ಆದರೂ ಸಹ ಇಂಥ ಕೃತ್ಯಗಳು ನಡೆಯುತ್ತಿರುವುದು ಮಾನವ ಕುಲಕ್ಕೆ ಅಪಮಾನ. ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಬಂಧನ ಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದರು.ಡಾ. ರಂಗನಾಥ್ ಮಾತನಾಡಿ, ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಸಂಸ್ಥೆಯ ಯುವ ವೈದ್ಯೆ ಮೇಲೆ ಅತ್ಯಾಚಾರ ಹಾಗೂ ಕೊಲೆ ವೈದ್ಯ ವೃತ್ತಿಗೆ ಅವಮಾನ ತಂದಿದೆ. ಮನುಷ್ಯನ ಪ್ರಾಣ ಉಳಿಸುವ ವೈದ್ಯರುಗಳನ್ನು ಬಿಡುತ್ತಿಲ್ಲ. ಹೀಗಾಗಿ ಹಗಲು – ರಾತ್ರಿ ಕೆಲಸ ನಿರ್ವಹಿಸಲು ಭಯವಾಗುತ್ತಿದೆ. ನಾವು ತುರ್ತು ಸೇವೆಗಳನ್ನು ಬಿಟ್ಟು ಇತರೆ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ದೇಶದಾದ್ಯಂತ ಶನಿವಾರ ಹಾಗೂ ಭಾನುವಾರದವರೆಗೆ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜಯಪ್ರಕಾಶ್, ಡಾ. ರಂಗನಾಥ್, ಡಾ. ಸತ್ಯನಾರಾಯಣ, ಡಾ. ನವೀನ್, ಡಾ. ಶಿವಕುಮಾರ್, ಡಾ. ಆನಂದ ರಾಜ್, ಡಾ. ಆಯಿಷಾ ಮುಂತಾದವರು ಉಪಸ್ಥಿತರಿದ್ದರು.