ಸಾರಾಂಶ
ಕೊಡಗು ಜಿಲ್ಲಾಡಳಿತ, ಕರ್ನಾಟಕ ವಸತಿ ಮತ್ತು ಶಿಕ್ಷಣ ಸಂಸ್ಥೆ ಮತ್ತು ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಅರಿವು ಜಾಥಾ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿಗೆ ಸಮೀಪದ ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ವತಿಯಿಂದ ಮಂಗಳವಾರ ಸಂವಿಧಾನ ಅರಿವು ಜನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.ಕೊಡಗು ಜಿಲ್ಲಾಡಳಿತ, ಕರ್ನಾಟಕ ವಸತಿ ಮತ್ತು ಶಿಕ್ಷಣ ಸಂಸ್ಥೆ ಮತ್ತು ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಅರಿವು ಜಾಥಾ ಆಯೋಜಿಸಲಾಗಿತ್ತು.
ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಆಲೂರುಸಿದ್ದಾಪುರಕ್ಕೆ ಆಗಮಿಸಿದ ಸಂವಿಧಾನ ಜಾಥಾ ರಥವನ್ನು ಆಲೂರುಸಿದ್ದಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿ ಸ್ವಾಗತಿಸಿದರು,ನಂತರ ಪ್ರಮುಖರು ರಥದಲ್ಲಿ ಅಳವಡಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರಮುಖರು ವಾದ್ಯಗೋಷ್ಠಿ ಮೆರವಣಿಗೆಯು ಮುಖ್ಯರಸ್ತೆ ಮೂಲಕ ಸಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಗಮಿಸಿತು.
ವಸತಿ ಶಾಲಾ ಸಭಾಂಗಣದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇಣು ಸಂವಿಧಾನ ಜಾಥಾ ಕಾರ್ಯಕ್ರಮದ ಉದ್ದೇಶದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ಸಂವಿಧಾನ ಅರಿವು ಜಾಥಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಮತ್ತು ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಕೆ.ಆರ್.ಭಾರತಿ ಸಂವಿಧಾನದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ, ಮಾಜಿ ಉಪಾಧ್ಯಕ್ಷೆ ದಮಯಂತಿ, ಸದಸ್ಯ ಸತೀಶ್‍ಕುಮಾರ್, ಶಾಲಾ ಸಮಿತಿ ಪ್ರಮುಖರಾದ ಪ್ರಭು, ರೇಖ, ನಾಗರತ್ನ, ಜಗದೀಶ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ವಸತಿ ಶಾಲಾ ಶಿಕ್ಷಕರು, ಪೋಷಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.