ಆಳ್ವಾಸ್ ಕಾಲೇಜು ಗಣಕ ವಿಜ್ಞಾನ ವಿಭಾಗ: 2 ದಿನಗಳ ಟೆಕ್ ಉತ್ಸವ್ - 2025

| Published : Mar 15 2025, 01:02 AM IST

ಸಾರಾಂಶ

ಮೂಡುಬಿದಿರೆ ಆಳ್ವಾಸ್ ಸ್ವಾಯತ್ತ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ನಡೆಯಲಿರುವ 2 ದಿನಗಳ ಟೆಕ್ ಉತ್ಸವ್ - 2025, ಅಂತರಕಾಲೇಜು ತಂತ್ರಜ್ಞಾನ ಸಂಬಂಧಿ ಸ್ಪರ್ಧೆಗಳಿಗೆ ವಿದ್ಯಾಗಿರಿಯ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಆಳ್ವಾಸ್ ಸ್ವಾಯತ್ತ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ನಡೆಯಲಿರುವ 2 ದಿನಗಳ ಟೆಕ್ ಉತ್ಸವ್ - 2025, ಅಂತರಕಾಲೇಜು ತಂತ್ರಜ್ಞಾನ ಸಂಬಂಧಿ ಸ್ಪರ್ಧೆಗಳಿಗೆ ವಿದ್ಯಾಗಿರಿಯ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿ, ಜ್ಯುಗೊ ಸ್ಟುಡಿಯೋ ಪ್ರೈ. ಲಿ. ನ ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ ಮಾತನಾಡಿ, ತಂತ್ರಜ್ಞಾನ ಮುಂದುವರಿದಂತೆ ಅವುಗಳ ಬಳಕೆಗೆ ಅಗತ್ಯವಿರುವ ಪರಿಣತಿ ಪಡೆದುಕೊಳ್ಳುವುದು ಬಹಳ ಅವಶ್ಯ. ಬದಲಾಗುತ್ತಿರುವ ತಂತ್ರಜ್ಞಾನದ ಅವಶ್ಯಕತೆ ಹಾಗೂ ಅವುಗಳ ಬಳಕೆ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಕಳೆದ 15 ವರ್ಷಗಳ ತಾಂತ್ರಿಕ ಬದಲಾವಣೆ ಗಣನೀಯವಾಗಿದ್ದು, ಮುಂದಿನ 2 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯು ಇನ್ನಷ್ಟು ಪ್ರಗತಿ ಹೊಂದಲಿದೆ. ಟೆಕ್ಕಿಗಳು, ಇಂಜಿನಿಯರ್ ಗಳು ತಂತ್ರಜ್ಞಾನವನ್ನು ಬಳಸುವ ವಿಧಾನದ ಮೇಲೆ ಒಟ್ಟು ಸಮಾಜದ ರೀತಿ ಅವಲಂಬಿತವಾಗಿರುತ್ತದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಫೆಸ್ಟ್‌ಗಳಿಗೆ ಯಾವ ರೀತಿಯ ಹೆಚ್ಚು ಮಹತ್ವ ನೀಡುತ್ತಾರೋ ಅದೇ ರೀತಿ ತಮ್ಮ ಜೀವನದ ಕೌಶಲ್ಯಗಳ ವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು. ಸರ್ಟಿಫಿಕೇಟ್ ಪಡೆಯುವುದಕ್ಕಾಗಿ ಕಲಿಕೆಯನ್ನ ಸೀಮಿತಗೊಳಿಸದೆ ಕಲಿತ ಪಾಠ ಅಳವಡಿಸಿಕೊಳ್ಳುವ ಪ್ರಯತ್ನವಿರಬೇಕು. ಆಗ ಮಾತ್ರ ಬದುಕಿನಲ್ಲಿ ಒಂದು ಉನ್ನತಿಯೆಡೆಗಿನ ಪಯಣ ಸಾಧ್ಯ. ಐಟಿ ಯುಗದಲ್ಲಿರುವ ನಾವುಗಳು ನೂತನ ತಂತ್ರಜ್ಞಾನಗಳ ಮಾಹಿತಿಯನ್ನು ತಿಳಿಯುವುದು ಹಾಗೂ ಅವುಗಳನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದರು.

ಉದ್ಘಾಟನೆಯ ಬಳಿಕ ಐಟಿ ಕ್ವಿಜ್ , ಕಲ್ಚರಲ್ ಡಾನ್ಸ್, ಐಟಿ ಮ್ಯಾನೇಜರ್, ವೆಬ್ ಡಿಸೈನಿಂಗ್, ಕೊಡಿಂಗ್, ವೀಡಿಯೊಗ್ರಾಫಿ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಎರಡು ದಿನಗಳ ಟೆಕ್ ಉತ್ಸವ್‌ದಲ್ಲಿ ವಿವಿಧ ಭಾಗಗಳಿಂದ 400 ಅಧಿಕ ವಿದ್ಯಾರ್ಥಿಗಳು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್, ವಿಭಾಗದ ಮುಖ್ಯಸ್ಥೆ ವನಿತಾ ಪ್ರಭು, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿದ್ಯಾರ್ಥಿ ಸಂಯೋಜಕಿ ಸಮೀಕ್ಷಾ ಎಸ್ ಹಾಗೂ ಶಿಶಿರ್ ಎಸ್ ಉಪಸ್ಥಿತರಿದ್ದರು. ಶ್ರೀಶ್ ಕೋಟೆಗಾರ ಕಾರ್ಯಕ್ರಮ ನಿರೂಪಿಸಿದರು.