ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ವಿದ್ಯಾಗಿರಿಯ ಜಗಜ್ಯೋತಿ ಬಸವೇಶ್ವರ ವೃತ್ತದ ಜ್ಞಾನಯೋಗಿ ಸರ್ವಜ್ಞ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಕಾಲೇಜು ಸಂಕೀರ್ಣ ಹಾಗೂ ವಿದ್ಯಾರ್ಥಿನಿ ವಸತಿ ನಿಲಯದ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು.
ನೂತನ ಕಾಲೇಜು ಸಂಕೀರ್ಣ ‘ಜಗನ್ಮೋಹನ’ದ ಉದ್ಘಾಟನೆಯನ್ನು ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ, ಉದ್ಯಮಿ ಕೆ. ಶ್ರೀಪತಿ ಭಟ್ ನೆರವೇರಿಸಿದರು. ಡಾ.ಎಂ. ಮೋಹನ ಆಳ್ವರ ಪತ್ನಿ ದಿ. ಶೋಭಾ ಆಳ್ವರ ನೆನಪಿಗಾಗಿ ನೂತನ ವಸತಿ ನಿಲಯಕ್ಕೆ ‘ಶೋಭಾಯಮಾನ’ ಎಂದು ಹೆಸರಿಡಲಾಗಿದ್ದು, ಇದರ ಉದ್ಘಾಟನೆಯನ್ನು ಲಲಿತ ರಾಮಣ್ಣ ಶೆಟ್ಟಿ ಮತ್ತು ಜಯಶ್ರೀ ಅಮರನಾಥ್ ಶೆಟ್ಟಿ ನೇರವೇರಿಸಿದರು.‘ಜಗನ್ಮೋಹನ’ದ ವಿಶೇಷತೆಗಳು: ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ನೂತನ ಕಾಲೇಜು ಕಟ್ಟಡ ‘ಜಗನ್ಮೋಹನ’ದಲ್ಲಿ ೬೮ ತರಗತಿ ಕೊಠಡಿಗಳಿದ್ದು, ೩ ಭೌತಶಾಸ್ತ್ರ ಲ್ಯಾಬ್, ೩ ರಸಾಯಶಾಸ್ತ್ರ ಲ್ಯಾಬ್ ಹಾಗೂ ೨ ಜೀವಶಾಸ್ತ್ರದ ಲ್ಯಾಬ್ ಹಾಗೂ ಒಂದು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದೆ. ವಿಶಾಲವಾದ ಸ್ಟಡಿಹಾಲ್‌ನ್ನು ಹೊಂದಿರುವ ಈ ಕಟ್ಟಡ, ಪ್ರತಿಧ್ವನಿ ಮುಕ್ತ ವ್ಯವಸ್ಥೆಯನ್ನು ಹೊಂದಿದೆ. ಪ್ರಶಾಂತ ಪರಿಸರದ ನಡುವೆ, ವಿಶಾಲವಾದ ಹೂದೋಟ, ಸುಂದವಾದ ವಾಕಿಂಗ್ ಟ್ರ್ಯಾಕ್, ಕಟ್ಟಡದ ಒಳಭಾಗದಲ್ಲಿ ಅಮೃತಶಿಲೆಯಿಂದ ನಿರ್ಮಿಸಿದ ಭಗವಾನ್ ಮಹಾವೀರನ ಮೂರ್ತಿ ಮನಸ್ಸಿಗೆ ಆಹ್ಲಾದಕರ ವಾತವರಣವನ್ನು ಒದಗಿಸುತ್ತದೆ.
ಶೋಭಾಯಮಾನ ವಸತಿ ನಿಲಯ: ಶೋಭಾಯಮಾನ ವಸತಿ ನಿಲಯವು ಆಧುನಿಕ ಕಾಲದ ಎಲ್ಲ ವ್ಯವಸ್ಥೆಯನ್ನು ಒಳಗೊಂಡ ಸುಸಜ್ಜಿತ ವಸತಿ ಗೃಹವಾಗಿದೆ. ೬೦೦ ವಿದ್ಯಾರ್ಥಿನಿಯರಿಗೆ ವಸತಿಯನ್ನು ಒದಗಿಸಬಲ್ಲ ಈ ಹಾಸ್ಟೆಲ್, ಎಲ್ ಆಕಾರದಲ್ಲಿ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕನುಗುಣವಾಗಿ ಹಾಸ್ಟೆಲ್‌ನ ರೂಮ್‌ಗಳನ್ನು ನಿರ್ಮಿಸಲಾಗಿದ್ದು, ಪ್ರತಿ ರೂಮ್ ಅಟ್ಯಾಚೆಡ್ ಬಾತ್‌ರೂಮ್ ವ್ಯವಸ್ಥೆಯನ್ನು ಒಳಗೊಂಡಿದೆ. ಎರಡು ಅತ್ಯಾಕರ್ಷಕ ಡೈನಿಂಗ್ ಹಾಲ್‌ಗಳಿದ್ದು, ಒಂದೇ ಕಿಚನ್‌ನಿಂದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇಲ್ಲೂ ವಿಶಾಲವಾದ ಸ್ಟಡಿ ಹಾಲ್‌ನ್ನು ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಸದಾ ಕಾಲ ಈ ವ್ಯವಸ್ಥೆಯನ್ನು ಉಪಯೋಗಿಬಹುದಾಗಿದೆ. ೨೪ ಗಂಟೆಗಳ ಸಿಸಿಟಿವಿ ಕಣ್ಗಾವಲಿರುವ ಈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿರಿಗಳು, ವೈದ್ಯಕೀಯ ತಂಡ, ಆಪ್ತ ಸಲಹೆಗಾರರು, ವಾರ್ಡನ್‌ಗಳು ಸದಾ ಸೇವೆಯಲ್ಲಿ ನಿರತರಾಗಿರುತ್ತಾರೆ.ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಉದ್ಯಮಿ ಶ್ರೀಪತಿ ಭಟ್, ಮೀನಾಕ್ಷಿ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಶಿಕ್ಷಕೇತರ ವೃಂದದವರು ಪಾಲ್ಗೊಂಡರು.