ಆ.7 ಮತ್ತು 8 ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯುವ 16ನೇ ಆವೃತ್ತಿಯ ಆಳ್ವಾಸ್‌ ಪ್ರಗತಿ-2026 ಅತೀ ದೊಡ್ಡ ಉದ್ಯೋಗ ಮೇಳಕ್ಕೆ ಈಗಾಗಲೇ 326 ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, ಇದು 500ಕ್ಕೆ ತಲುಪುವ ನಿರೀಕ್ಷೆ ಇದ್ದು, 24 ಸಾವಿರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್‌ ಆಳ್ವ ತಿಳಿಸಿದ್ದಾರೆ.

ಮಂಗಳೂರು: ಆ.7 ಮತ್ತು 8 ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯುವ 16ನೇ ಆವೃತ್ತಿಯ ಆಳ್ವಾಸ್‌ ಪ್ರಗತಿ-2026 ಅತೀ ದೊಡ್ಡ ಉದ್ಯೋಗ ಮೇಳಕ್ಕೆ ಈಗಾಗಲೇ 326 ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, ಇದು 500ಕ್ಕೆ ತಲುಪುವ ನಿರೀಕ್ಷೆ ಇದ್ದು, 24 ಸಾವಿರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್‌ ಆಳ್ವ ತಿಳಿಸಿದ್ದಾರೆ.

ಈ ಉದ್ಯೋಗ ಮೇಳ ಅಭ್ಯರ್ಥಿಗಳು ಹಾಗೂ ಉದ್ಯೋಗದಾತರಿಗೆ ಸಂಪೂರ್ಣ ಉಚಿತ. ಗ್ರಾಮೀಣ ಭಾಗದ ಹಾಗೂ ಅವಕಾಶವಂಚಿತ ಪ್ರತಿಭಾವಂತ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಲ್ಲಿ ಈ ಮೇಳ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಆಳ್ವಾಸ್‌ ಆಯೋಜಿಸಿದ ಒಟ್ಟು 23 ಉದ್ಯೋಗ ಮೇಳಗಳ ಮೂಲಕ 40,848 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ದೊರಕಿದ್ದರೆ, 66,432 ಅಭ್ಯರ್ಥಿಗಳು ವಿವಿಧ ಕಂಪನಿಗಳಲ್ಲಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ ಎಂದರು.

ಸಂದರ್ಶನ ಸಿದ್ಧತೆಗೆ ತರಬೇತಿ:

ಐಟಿ, ಐಟಿಇಎಸ್‌, ಉತ್ಪಾದನೆ, ಆರೋಗ್ಯ ಮತ್ತು ಔಷಧ, ಬ್ಯಾಂಕಿಂಗ್‌ ಮತ್ತು ಹಣಕಾಸು, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಶಿಕ್ಷಣ, ಮಾಧ್ಯಮ, ಆತಿಥ್ಯ, ಎಲೆಕ್ಟ್ರಾನಿಕ್ಸ್‌ ಹಾಗೂ ದೂರಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ದೇಶ, ವಿದೇಶ ಕಂಪನಿಗಳ ಲಗ್ಗೆ: ಎಕ್ಸ್‌ಪರ್ಟೈಸ್‌ ಸಂಸ್ಥೆಯು ಡಿಪ್ಲೊಮಾ ಹಾಗೂ ಐಟಿಐ ಅಭ್ಯರ್ಥಿಗಳಿಗಾಗಿ ಗಲ್ಫ್‌ ರಾಷ್ಟ್ರಗಳ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಎಂಬಿಎ, ಎಂಎಚ್‌ಆರ್‌ಡಿ, ಎಂಎಸ್‌ಡಬ್ಲ್ಯು ಮತ್ತು ಬಿಎಸ್‌ಡಬ್ಲ್ಯು ಅಭ್ಯರ್ಥಿಗಳಿಗಾಗಿ 70ಕ್ಕೂ ಹೆಚ್ಚು ಮಾನವ ಸಂಪನ್ಮೂಲ ಹುದ್ದೆಗಳು ಲಭ್ಯವಿವೆ. ಉತ್ಪಾದನಾ ಕ್ಷೇತ್ರದಲ್ಲಿ 74 ಕಂಪನಿಗಳು ಭಾಗವಹಿಸುತ್ತಿದ್ದು, 5,877ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ. ಟಾಟಾ ಎಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್‌ ಸೊಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಕೋಲಾರ) ಮಹಿಳಾ ಅಭ್ಯರ್ಥಿಗಳಿಗಾಗಿ ವಿಶೇಷ ನೇಮಕಾತಿ ಅಭಿಯಾನ ನಡೆಸುತ್ತಿದೆ. ಐಟಿ/ಐಟಿಇಎಸ್‌ ಕ್ಷೇತ್ರದಲ್ಲಿ 35 ಕಂಪನಿಗಳಿಂದ 200ಕ್ಕೂ ಹೆಚ್ಚು ಕೋರ್‌ ಐಟಿ ಹಾಗೂ 3,500ಕ್ಕೂ ಹೆಚ್ಚು ನಾನ್‌-ಐಟಿ ಉದ್ಯೋಗಾವಕಾಶಗಳು ಲಭ್ಯವಿವೆ. . ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ 5 ಲಕ್ಷ ರು. ವರೆಗಿನ ವಾರ್ಷಿಕ ವೇತನದ ಉದ್ಯೋಗಾವಕಾಶಗಳು ಲಭ್ಯವಿವೆ. ಮಾರಾಟ ಕ್ಷೇತ್ರದಲ್ಲಿ ಕೋಡ್‌ಯಂಗ್‌ ಸಂಸ್ಥೆಯು ಪದವಿ ಹಾಗೂ ಸ್ನಾತಕೋತ್ತರ ಅಭ್ಯರ್ಥಿಗಳಿಗೆ 8 ಲಕ್ಷ ರು. ವರೆಗಿನ ವಾರ್ಷಿಕ ವೇತನದ ಉದ್ಯೋಗಾವಕಾಶಗಳನ್ನು ನೀಡುತ್ತಿದೆ ಎಂದು ವಿವೇಕ ಆಳ್ವ ಮಾಹಿತಿ ನೀಡಿದರು.

ವಲಯವಾರು ಕಂಪನಿಗಳು: ಉತ್ಪಾದನಾ ಕ್ಷೇತ್ರದ 74 ಪ್ರಮುಖ ಕಂಪನಿಗಳು ಆಳ್ವಾಸ್‌ ಪ್ರಗತಿ 2026ರಲ್ಲಿ ಭಾಗವಹಿಸುತ್ತಿವೆ. ಈ ಕ್ಷೇತ್ರದಲ್ಲಿ ವಿವಿಧ ವಿದ್ಯಾರ್ಹತೆಗಳಿಗೆ ಒಟ್ಟು 5,877 ಉದ್ಯೋಗಾವಕಾಶಗಳು ಲಭ್ಯವಿವೆ. ಐಟಿ / ಐಟಿಇಎಸ್‌ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಕೋರ್‌ ಐಟಿ ಹಾಗೂ 3,500ಕ್ಕೂ ಹೆಚ್ಚು ನಾನ್‌-ಐಟಿ ಉದ್ಯೋಗಾವಕಾಶಗಳು ಲಭ್ಯವಿವೆ.

ಬ್ಯಾಂಕಿಂಗ್‌, ಹಣಕಾಸು ಮತ್ತು ವಿಮಾ ಕ್ಷೇತ್ರದ 30 ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, 2,450ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಆರೋಗ್ಯ ವಲಯದ 25 ಪ್ರಮುಖ ಆಸ್ಪತ್ರೆಗಳು ಹಾಗೂ ಆರೋಗ್ಯ ಸಂಸ್ಥೆಗಳು ಭಾಗವಹಿಸುತ್ತಿದ್ದು, 1,700ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದೆ. ನಿರ್ಮಾಣ ವಲಯದ 13 ಪ್ರಮುಖ ಕಂಪನಿಗಳು ಭಾಗವಹಿಸುತ್ತಿವೆ ಎಂದರು.

ಆಳ್ವಾಸ್‌ ಸ್ವಾಯತ್ತ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಪ್ಲೇಸ್‌ಮೆಂಟ್‌ ವಿಭಾಗ ಮುಖ್ಯಸ್ಥೆ ರಂಜಿತಾ ಆಚಾರ್ಯ ಇದ್ದರು.

ಉದ್ಯೋಗ ಶಿಫಾರಸು ಮಾಡುವ ಎಐ ಚಾಟ್‌ಬಾಟ್‌!

ಉದ್ಯೋಗ ಮೇಳದಲ್ಲಿ ವಿಶೇಷ ಎಐ ಆಧಾರಿತ ಚಾಟ್‌ಬಾಟ್‌ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು ಅಪ್‌ಲೋಡ್‌ ಮಾಡಿದ ತಕ್ಷಣ ಅವರ ವಿದ್ಯಾರ್ಹತೆ ಹಾಗೂ ಅರ್ಹತೆಗೆ ಅನುಗುಣವಾದ ಕಂಪನಿಗಳು ಮತ್ತು ಉದ್ಯೋಗಾವಕಾಶಗಳನ್ನು ಗುರುತಿಸಿ ಶಿಫಾರಸು ಮಾಡುವ ವ್ಯವಸ್ಥೆ ಇರಲಿದೆ ಎಂದು ವಿವರಿಸಿದರು.ಇವರಿಗೆಲ್ಲ ಉದ್ಯೋಗಾವಕಾಶ...

ಮೆಡಿಕಲ್‌, ಪ್ಯಾರಾಮೆಡಿಕಲ್‌, ಎಂಜಿನಿಯರಿಂಗ್‌, ಕಲಾ ವಿಭಾಗ, ಕಾಮರ್ಸ್‌, ಮ್ಯಾನೇಜ್ಮೆಂಟ್‌, ಬೇಸಿಕ್‌ ಸೈನ್ಸ್‌, ನಸಿಂರ್ಗ್‌, ಐಟಿಐ, ಡಿಪ್ಲೊಮಾ ಸೇರಿದಂತೆ ವಿವಿಧ ವಿಭಾಗಗಳ ಪದವಿ ಹಾಗೂ ಸ್ನಾತಕೋತ್ತರ ಅಭ್ಯರ್ಥಿಗಳ ಜೊತೆಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಇತರ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೂ ವ್ಯಾಪಕ ಉದ್ಯೋಗಾವಕಾಶಗಳಿವೆ. ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೊಮಾ, ನಸಿಂರ್ಗ್‌, ವೈದ್ಯಕೀಯ, ಅರೆವೈದ್ಯಕೀಯ, ಬಿ.ಟೆಕ್‌ ಅಥವಾ ಇತರೆ ಯಾವುದೇ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವ ಅಥವಾ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಈ ಹಿಂದೆ ಪೂರ್ಣಗೊಳಿಸಿದ ಅಭ್ಯರ್ಥಿಗಳು ಭಾಗವಹಿಸಬಹುದು. ಆನ್‌ಲೈನ್‌ ನೋಂದಣಿ ಕಡ್ಡಾಯ

ಆಳ್ವಾಸ್‌ ಪ್ರಗತಿ-2026ರ ಸಂಪೂರ್ಣ ಮಾಹಿತಿಗಾಗಿ www.alvaspragati.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಲ್ಲದೆ ಅಭ್ಯರ್ಥಿಗಳು ಆನ್‌ಲೈನ್‌ (https://alvaspragati.com/candidate-registration) ಮೂಲಕ ನೋಂದಣಿ ಮಾಡುವುದು ಕಡ್ಡಾಯವಾಗಿದೆ.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗಾಗಿ ಆಗಸ್ಟ್‌ 6ರಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೌಲಭ್ಯ ಒದಗಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ 9611750531 / 9741440490 ಸಂಪರ್ಕಿಸಬಹುದು.