ಸಾರಾಂಶ
ದೋಣಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಅಳ್ವೆಕೋಡಿ-ತೆಂಗಿನಗುಂಡಿ ಸಮುದ್ರದಲ್ಲಿ ಮುಗುಚಿ ದುರಂತಕ್ಕೀಡಾಗಿದ್ದು, ನಾಲ್ವರು ಕಣ್ಮರೆಯಾಗಿದ್ದರು.
ಭಟ್ಕಳ: ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮುದ್ರದಲ್ಲಿ ದೋಣಿ ದುರಂತದಿಂದ ನೀರುಪಾಲಾಗಿದ್ದ ನಾಲ್ವರ ಪೈಕಿ ಒಬ್ಬ ಮೀನುಗಾರನ ಮೃತ ದೇಹ ಮಾತ್ರ ಪತ್ತೆಯಾಗಿದ್ದು, ಇನ್ನುಳಿದ ಮೂವರ ಪತ್ತೆ ಶುಕ್ರವಾರ ಸಂಜೆವರೆಗೆ ಆಗಿಲ್ಲ.
ಜಾಲಿಯ ಸಮುದ್ರದಿಂದ ಮಂಗಳವಾರ ಪಾತಿ ದೋಣಿ ಮೂಲಕ ಜಾಲಿಕೋಡಿಯ ರಾಮಕೃಷ್ಣ ಮೊಗೇರ, ಅಳ್ವೆಕೋಡಿಯ ಮುಂಗ್ರಿಮನೆ ನಿವಾಸಿ ಗಣೇಶ ಮಂಜುನಾಥ ಮೊಗೇರ, ಅಳ್ವೆಕೋಡಿ ಸಣ್ಭಾವಿ ನಿವಾಸಿ ಸತೀಶ ತಿಮ್ಮಪ್ಪ ಮೊಗೇರ, ಮುರುಡೇಶ್ವರ ಕನ್ನಡ ಶಾಲೆ ಸನಿಹದ ನಿವಾಸಿ ನಿಶ್ಚಯ ಮೊಗೇರ ಹಾಗೂ ಇನ್ನಿಬ್ಬರು ಸೇರಿದಂತೆ ಒಟ್ಟು 6 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಇವರಿದ್ದ ದೋಣಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಅಳ್ವೆಕೋಡಿ-ತೆಂಗಿನಗುಂಡಿ ಸಮುದ್ರದಲ್ಲಿ ಮುಗುಚಿ ದುರಂತಕ್ಕೀಡಾಗಿದ್ದು, ನಾಲ್ವರು ಕಣ್ಮರೆಯಾಗಿದ್ದರು. ಉಳಿದ ಇಬ್ಬರು ಈಜಿ ದಡ ಸೇರಿದ್ದರು. ಗುರುವಾರ ಮಧ್ಯಾಹ್ನ ರಾಮಕೃಷ್ಣ ಮೊಗೇರ ಮೃತದೇಹ ಹೆಬಳೆಯ ಹೊನ್ನೆಗದ್ದೆ ಕಡಲತೀರದಲ್ಲಿ ಪತ್ತೆಯಾಗಿತ್ತು. ಉಳಿದಂತೆ ಗಣೇಶ ಮೊಗೇರ, ಸತೀಶ ಮೊಗೇರ, ನಿಶ್ಚಿತ ಮೊಗೇರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಇವರಿಗಾಗಿ ಸ್ಥಳೀಯ ಮೀನುಗಾರರು, ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಕೋಸ್ಟಲ್ ಗಾರ್ಡನವರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ. ಸಹಾಯಕ ಆಯುಕ್ತೆ ಕಾವ್ಯರಾಣಿ ಮತ್ತು ತಹಸೀಲ್ದಾರ ನಾಗೇಂದ್ರ ಶೆಟ್ಟಿ ಮತ್ತಿತರ ಅಧಿಕಾರಿಗಳು ಅಳ್ವೆಕೋಡಿ ಬಂದರಿಗೆ ಭೇಟಿ ನೀಡಿ ದುರಂತದ ಬಗ್ಗೆ ಮಾಹಿತಿ ಪಡೆದರು.ಕಣ್ಮರೆಯಾದ ಮೀನುಗಾರರು ಶುಕ್ರವಾರ ಸಂಜೆ ವರೆಗೂ ಪತ್ತೆಯಾಗದೇ ಇರುವುದರಿಂದ ಮೀನುಗಾರರಲ್ಲಿ ಬೇಸರಕ್ಕೆ ಕಾರಣವಾಗಿದೆ. ಇತ್ತೀಚಿನ ಗಂಗೊಳ್ಳಿಯ ದೋಣಿ ದುರಂತದ ನೆನಪು ಮಾಸುವ ಮುನ್ನವೇ ಅಳ್ವೆಕೋಡಿಯಲ್ಲಿ ನಡೆದ ದೋಣಿ ದುರಂತ ಮೀನುಗಾರರಲ್ಲಿ ಮತ್ತಷ್ಟು ನೋವಿಗೆ ಕಾರಣವಾಗಿದೆ.