ಇಂದಿನಿಂದ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ

| Published : Jun 29 2024, 12:38 AM IST

ಇಂದಿನಿಂದ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಿಯ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಜೂ. 29ರಂದು ಸಂಜೆ 7 ಗಂಟೆಗೆ ಗೋಕರ್ಣ ಪರ್ತಗಾಳಿ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಆಗಮಿಸುವರು. ಶ್ರೀಗಳಿಂದ ಆಶೀರ್ವಚನ, ಪಾದಪೂಜೆ ನಡೆಯಲಿದೆ.

ಭಟ್ಕಳ: ತಾಲೂಕಿನ ಶಿರಾಲಿ ಅಳ್ವೆಕೋಡಿಯ ಅತಿ ಪುರಾತನವಾದ ಜಾಗೃತ ದೇವತೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ಜೂ. ೨೯ರಿಂದ ಜು. ೯ರ ತನಕ ವಿಜೃಂಭಣೆಯಿಂದ ನಡೆಯಲಿದೆ. ದೇವಿಯ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವವು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ನಡೆಯಲಿದೆ. ಜೂ. 29ರಂದು ಸಂಜೆ 7 ಗಂಟೆಗೆ ಗೋಕರ್ಣ ಪರ್ತಗಾಳಿ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಆಗಮಿಸುವರು. ಶ್ರೀಗಳಿಂದ ಆಶೀರ್ವಚನ, ಪಾದಪೂಜೆ ನಡೆಯಲಿದೆ.

ಜೂ. 30ರಂದು ಶ್ರೀಗಳ ಅಮೃತ ಹಸ್ತದಿಂದ ಶಿಖರ ಕಲಶ ಪ್ರತಿಷ್ಠಾಪನೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜು. 1ರಂದು ಶತಚಂಡಿಕಾ ಯಾಗ ಆರಂಭ, ಲಕ್ಷ ಕುಂಕುಮಾರ್ಚನೆ ನಡೆಯಲಿದೆ. ಜು. 7ರ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ನೂತನ ಯಜ್ಞಮಂಟಪ ಉದ್ಘಾಟನೆ, ಗೋಪುರಕ್ಕೆ ತಾಮ್ರದ ಹೊದಿಕೆ, ಶ್ರೀ ಸೂಕ್ತ ಹವನ, ಶ್ರೀ ಪಂಚದುರ್ಗಾ ಹವನ, ಶ್ರೀ ಲಕ್ಷ ಕಂಕುಮಾರ್ಚನೆ, ಶ್ರೀ ದುರ್ಗಾನಮಸ್ಕಾರ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಮಹಾ ಅನ್ನಸಂತರ್ಣಣೆ ನಡೆಯಲಿದೆ.

ಜು. ೭ ಮತ್ತು ೮ರಂದು ಸಂಜೆ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಗೌರವಾರ್ಪಣೆ ನಡೆಯಲಿದೆ. ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನ ಇತ್ತೀಚಿನ ವರ್ಷಗಳಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಿರುವ ದೇವಸ್ಥಾನವಾಗಿದೆ.

ಈ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತರಿದ್ದು, ದುರ್ಗಾಪರಮೇಶ್ವರಿ ದೇವಿ ನಂಬಿ ಪೂಜಿಸಿದರೆ ಕಷ್ಟ ಕಾರ್ಪಣ್ಯ ದೂರ ಮಾಡುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿಯೇ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಿ ಭಕ್ತರ ಪಾಲಿನ ಅಮ್ಮನಾಗಿದ್ದಾಳೆ. ಅಳ್ವೆಕೋಡಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೇವಸ್ಥಾನದ ಧರ್ಮದರ್ಶಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಉತ್ಸವಕ್ಕೆ ಸಕಲ ಸಿದ್ಧತೆ ನಡೆಸಿದ್ದು, ತಾಲೂಕು ಸೇರಿದಂತೆ ವಿವಿಧ ಭಾಗದ ಅಸಂಖ್ಯಾತ ಭಕ್ತರು ಪಾಲ್ಗೊಳ್ಳಲಿದ್ದಾರೆ.