ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಸಮಸ್ತ ಜೈನ ಬಾಂಧವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವನ್ನು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಭಾನುವಾರ ನಡೆಯಿತು.ಸಂಜೆ ೪ಕ್ಕೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮೊದಲಿಗೆ ಆಳ್ವಾಸ್ ವಿದ್ಯಾರ್ಥಿಗಳಿಂದ ಜಿನಭಜನೆ ನಡೆಯಿತು. ಕೊಂಬು ವಾದ್ಯ, ನಾದಸ್ವರ, ಪೂರ್ಣಕುಂಭದೊಂದಿಗೆ ಮಹಾವೀರ ಸ್ವಾಮಿ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು. ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗಾಯನ ನಡೆಯಿತು.ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ಗೈದ ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಕರಾವಳಿಯ ಜೈನರನ್ನು ಆಹ್ವಾನಿಸಿ ಅಭೂತಪೂರ್ವ ಮಹೋತ್ಸವ ಹಮ್ಮಿಕೊಂಡ ಡಾ. ಎಂ. ಮೋಹನ್ ಆಳ್ವ ಓರ್ವ ಧರ್ಮಸಹಿಷ್ಣುತೆ ಹೊಂದಿರುವ ವ್ಯಕ್ತಿ ಎಂದು ಸಂತಸ ವ್ಯಕ್ತ ಪಡಿಸಿದರು.
ಸ್ವಾಭಾವಿಕ ವಿಚಾರಗಳನ್ನು ಮಾತ್ರವೇ ಮಹಾವೀರ ಸ್ವಾಮಿ ಸಂದೇಶ ನೀಡಿದ್ದಾರೆ. ಜಗತ್ತಿನ ಪ್ರತಿಯೊಂದು ಧರ್ಮಗಳಲ್ಲಿ ಒಂದು ಧ್ಯೇಯ ಇದೆ. ಆ ಗುರಿಯನ್ನು ತಲುಪಬೇಕಾದರೆ ಬಂಧನಗಳಿಂದ ಮುಕ್ತಗೊಳ್ಳಬೇಕು. ಜಗತ್ತಿನ ಎಲ್ಲಾ ಜೀವಿಗಳು ಮೋಕ್ಷ ಪಡೆಯಬೇಕು ಎನ್ನುವುದು ಜೈನ ಧರ್ಮದ ಸಂದೇಶ. ವರ್ತನೆಗಳನ್ನು ಬದಲಿಸಿಕೊಂಡು ದೈವಿಕ ಗುಣಗಳನ್ನು ಬೆಳೆಸಿಕೊಂಡಾಗ ಶ್ರೇಷ್ಠರಾಗಬಹುದು. ಇಂದ್ರಿಯ ಗೆದ್ದವನು ಜಿನ, ಗೆಲ್ಲುವ ಪ್ರಯತ್ನ ಮಾಡುವವನು ಜೈನ ಎಂದರು.ಧರ್ಮಸ್ಥಳದ ಹರ್ಷೆಂದ್ರ ಕುಮಾರ್ ಹಾಗೂ ಸಹಕಾರಿ ಕ್ಷೇತ್ರದ ಸಾಧಕ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರಕುಮಾರ್, ವ್ಯವಸ್ಥೆಗಳನ್ನು ಹುಟ್ಟುಹಾಕುವುದು ದೊಡ್ಡದಲ್ಲ, ಟೀಕೆಗಳನ್ನು ಮೀರಿ ನಡೆಸುವುದು ಬೆಳೆಸುವುದು ಬಹಳ ಕಷ್ಟ, ಅಂತಹ ಸಾಧನೆ ಮಾಡುವಲ್ಲಿ ಮೋಹನ್ ಆಳ್ವರು ಮಾದರಿ ಎಂದರು. ರಾಜೇಂದ್ರ ಕುಮಾರ್ ಮಾತನಾಡಿ, ಜಗತ್ತಿನಾದ್ಯಂತ ಹಿಂಸೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ, ಎಲ್ಲಾ ಧರ್ಮವನ್ನು ಪ್ರೀತಿಸಿ ಸರ್ವರೂ ಶಾಂತಿಯಿಂದ ಬಾಳಬೇಕು ಎಂದರು. ಸುತ್ತಲಿನ ವಾತವರಣ ಧಾರ್ಮಿಕ ವೈಭವವನ್ನು ಹೆಚ್ಚಿಸಲು ಮಾದರಿಯಂತೆ ೨೪ ತೀರ್ಥಂಕರರ ವಿಗ್ರಹಗಳ ಕೆತ್ತನೆ, ಹೂವಿನಿಂದ ಮಾಡಲ್ಪಟ್ಟ ಆನೆಯ ಆಕೃತಿ, ವಿವಿಧ ಪ್ರಾಣಿ ಪ್ರಕ್ಷಿಗಳ ಆಕೃತಿ, ಸಭಾಂಗಣದ ಎರಡು ಕಡೆಗಳಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಲೋಗೊದ ಆಕೃತಿಯನ್ನು ಹೂವಿನಿಂದ ನಿರ್ಮಿಸಲಾಗಿತ್ತು. ಜೈನ ಸಂಪ್ರದಾಯದಂತೆ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.
ಬೃಹತ್ ಆಕಾರದ ೧೪ ವಿದ್ಯುತ್ ದೀಪಗಳು ಸಭಾಂಗಣದ ಮೆರಗನ್ನು ಹೆಚ್ಚಿಸಿದವು. ವೇದಿಕೆಯ ಮುಂಭಾಗದಲ್ಲಿ ಇರಿಸಲಾಗಿದ್ದ ೧೦೮ ತುಪ್ಪದ ದೀಪಗಳನ್ನು ಬೆಳಗಲಾಗಿತ್ತು. ಜಲಾಭಿಷೇಕ, ಏಳನೀರು, ಇಕ್ಷ ರಸ, ಕ್ಷೀರ, ಕಷಾಯ, ಕಾಶ್ಮೀರಿ ಕೇಸರಿ, ಕಲ್ಕ ಚೂರ್ಣ, ಅರಸಿನ, ಚತುಷ್ಕೋನ ಕಳಶ, ಚಂದನ, ಅಷ್ಟಗಂಧ, ಕನಕ ಪುಷ್ಟವೃಷ್ಟಿಯ ದ್ರವ್ಯಗಳ ಅಭಿಷೇಕದ ನಂತರ, ಶಾಂತಿ ಮಂತ್ರದೊಂದಿಗೆ ಪೂರ್ಣಕುಂಭ, ಮಹಾಮಂಗಳಾರತಿ ನಡೆಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ, ಪಟ್ಟಣಶೆಟ್ಟಿ ಸುದೇಶ್ ಕುಮಾರ್, ಚೌಟರ ಅರಮನೆಯ ಆದರ್ಶ್ ಜೈನ್, ರತ್ನಾಕರ್ ಜೈನ್, ಜೈನ್ ಮಿಲನ್ ರಾಜ್ಯಾಧ್ಯಕ್ಷ ಯುವರಾಜ್, ಪಡುಬಿದ್ರಿ ಅರಮನೆಯ ಅರಸರು, ಕೂಳೂರಿನ ಆಶಿಕ್‌ಕುಮಾರ್, ಪಡ್ಯಾರ್‌ಬೆಟ್ಟಿನ ಜೀವಂಧರ ಕುಮಾರ್, ಉದ್ಯಮಿ ಶ್ರೀಪತಿ ಭಟ್ ಇದ್ದರು.ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಹಾಗೂ ಉಪನ್ಯಾಸಕ ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.