ಸಾರಾಂಶ
ಗಣೇಶ್ ಕಾಮತ್
ಕನ್ನಡಪ್ರಭ ವಾರ್ತೆ ಮೂಡುಬಿದಿರೆವರ್ಷ 18 ಕಳೆದರೂ ಆ ಸುಂದರ ಸಂಜೆಯ ನೆನಪುಗಳಿನ್ನೂ ಕಲಾರಸಿಕರ ಹೃದಯದಲ್ಲಿ ಹಸಿರಾಗಿಯೇ ಉಳಿದಿದೆ. ತಬ್ಲಾ ಮಾಂತ್ರಿಕ ಪದ್ಮಭೂಷಣ ಉಸ್ತಾದ್ ಝಾಕಿರ್ ಹುಸೇನ್ 2007ರ ಆಳ್ವಾಸ್ ವಿರಾಸತ್‌ನಲ್ಲಿ ಪಾಲ್ಗೊಂಡು ವಿರಾಸತ್ ಪ್ರಶಸ್ತಿ ಸ್ವೀಕರಿಸಿದ್ದು, ಧನ್ಯತೆಯ ಮಾತುಗಳನ್ನಾಡಿದ್ದು ಇಂದಿಗೂ ಸಹಸ್ರಾರು ಕಲಾರಸಿಕರ ನೆನಪಿನಂಗಳದಲ್ಲಿ ಹಸಿರಾಗಿದೆ.
2007 ಜ.4ರಂದು ಮುಸ್ಸಂಜೆ ಮಿಜಾರಿನ ಶೋಭಾವನದಲ್ಲಿ ನಿಗದಿತ ಗೊಧೂಳಿಯ ಸಮಯಕ್ಕೆ ಸರಿಯಾಗಿ ವಿಶಾಲ ವೇದಿಕೆಗೆ ಗಣ್ಯ ಅತಿಥಿಗಳ ಸರಳ ಮೆರವಣಿಗೆ ಹೆಸರಾಂತ ಒಡಿಸ್ಸಿ ಕಲಾವಿದೆ ಸೋನಾಲ್ ಮಾನ್ ಸಿಂಗ್ ಆಳೆತ್ತರದ ದೀಪ ಬೆಳಗುತ್ತಿದ್ದಂತೆ ಜಿಲ್ಲೆಯ ಸಾಂಪ್ರದಾಯಿಕ ಕದನಿಯ ಸದ್ದು ಮೊಳಗುವ ಮೂಲಕ ಅಳ್ವಾಸ್ ವಿರಾಸತ್ 2007ಕ್ಕೆ ವರ್ಣರಂಜಿತ ಆರಂಭ.ನಾನು ಏನೂ ಅಲ್ಲ, ನಾನು ಏನೇನೂ ಅಲ್ಲ, ನಾನೇನೂ ಇದ್ದರೂ ಅದೆಲ್ಲಾ ನಿಮ್ಮಿಂದಾಗಿ. ನನ್ನ ಜನರಿಂದ, ಗೆಳೆಯರಿಂದ, ಕುಟುಂಬದಿಂದ, ಹೆತ್ತವರಿಂದ, ಪತ್ನಿಯಿಂದ, ಮಗಳಿಂದ...
ಹೀಗೆ ಭಾವುಕರಾಗಿ ನುಡಿದವರು ತಬಲಾ ಮಾಂತ್ರಿಕ ಝಾಕಿರ್ ಹುಸೇನ್. ಜನರೇ ನನ್ನನ್ನು ಹಚ್ಚಿಕೊಂಡಿದ್ದಾರೆ. ಅವರಿಂದಲೇ ಬೆಳೆಯುತ್ತಿದ್ದೇನೆ. ಡಾ. ಮೋಹನ್ ಆಳ್ವರ ಕಲಾಸೇವೆಯ ಕಾರ್ಯಕ್ರಮದಿಂದ ಇಲ್ಲಿಗೆ ಬಂದಿದ್ದೇನೆ. ಅಪರೂಪದಲ್ಲಿ ಅಪರೂಪಕ್ಕೆ ಸಿಗುವ ಜನರಲ್ಲೊಬ್ಬರಾದ ಮೋಹನ್ ಆಳ್ವರನ್ನು ಪ್ರೋತ್ಸಾಹಿಸಿ ಎಂದು ತಬಲಾ ವಾದಕ ಝಾಕಿರ್ ಹುಸೇನ್ ನುಡಿದಿದ್ದರು.ಸಕಲ ವೈಭವದ ಮೆರವಣಿಗೆಯಲ್ಲಿ ವಿಶಾಲ ವೇದಿಕೆಗೆ ಕರೆತಂದ ಝಾಕಿರ್ ಹುಸೇನ್ ಅವರನ್ನು ಅಭಿನಂದನೆಯ ಮಂಗಳಾರತಿ ಮಾಡಿ, ನಗದು ಸಹಿತ ಪ್ರತಿಷ್ಠಿತ ಆಳ್ವಾಸ್ ವಿರಾಸತ್ ಪ್ರಶಸ್ತಿ ಡಾ. ಮೋಹನ್ ಆಳ್ವ ಮತ್ತು ಅಧ್ಯಕ್ಷತೆ ವಹಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಉಪ ಕುಲಪತಿ ಡಾ.ಪಿ.ಎಸ್. ಪ್ರಭಾಕರನ್ ಪ್ರದಾನ ಮಾಡಿದ್ದರು.
ಉತ್ತರ- ದಕ್ಷಿಣ ಪ್ರಥಮ..!ಬಳಿಕ ದೇಶದಲ್ಲೇ ಪ್ರಥಮ ಬಾರಿ ಎಂಬಂತೆ ಉತ್ತರ ಮತ್ತು ದಕ್ಷಿಣ ಭಾರತೀಯ ವಾದ್ಯ ಸಂಗೀತದ ಅಪೂರ್ವ ಜುಗಲ್ಬಂದಿ ನಡೆಯಿತು. ಬಣ್ಣ ಬಣ್ಣದ ದೀಪಾಲಂಕೃತ ದಿಬ್ಬದ ಮೇಲಿನ ಸಭಾಂಗಣದಲ್ಲಿ ನಡೆದ ಈ ಅದ್ಭುತ ಜುಗಲ್ಬಂದಿಯಲ್ಲಿ ತಬ್ಲಾದಲ್ಲಿ ಝಾಕಿರ್ ಹುಸೇನ್, ಫ್ಲೂಟ್ ಮ್ಯಾಸ್ಕೊ ಶಶಾಂಕ್ ಕೊಳಲಿನಲ್ಲಿ, ಮೃದಂಗದಲ್ಲಿ ಸತೀಶ್ ಕುಮಾರ್, ಸಾರಂಗಿಯಲ್ಲಿ ಉಸ್ತಾದ್ ಸುಲ್ತಾನ್ ಖಾನ್ ಬದಲಿಗೆ ವೇದಿಕೆಗೆ ಅವಕಾಶ ಪಡೆದ ಕಾರ್ಕಳದ ಮಹಾಲಕ್ಷ್ಮೀ ಶೆಣೈ ತಾನ್‌ಪುರ್‌ನಲ್ಲಿ ಜನಮನಸೂರೆಗೊಂಡಿದ್ದರು.
ಮೋಡಿ ಮಾಡಿದ ಯಕ್ಷಗಾನ!ತನ್ನ ಬೆರಳುಗಳ ಮಾಂತ್ರಿಕ ಶಕ್ತಿಯಿಂದ ಜಗತ್ತನ್ನು ನಿಬ್ಬೆರಗುಗೊಳಿಸಿರುವ ಜಗತ್‌ಪ್ರಸಿದ್ಧ ತಬಲಾ ವಾದಕ ಉಸ್ತಾದ್ ಝಾಕೀರ್ ಹುಸೇನ್ ಅವರು ಇಲ್ಲಿ ಯಕ್ಷಗಾನ ಕುಣಿತಕ್ಕೆ ಮನಸೋತರು. ಉತ್ತರದ ಕೈಯ ಕರಾಮತ್ತಿಗೆ ದಕ್ಷಿಣದ ಕಾಲಿನ ಕುಣಿತ ಎಂಬಂತೆ ಬಡಗುತಿಟ್ಟಿನ ಮಂಡಿ ಕುಣಿತ, ತೆಂಕು ತಿಟ್ಟಿನ ಗಿರಿಕಿಯ ಮೋಡಿ ಕಿವಿಗಡಚಿಕ್ಕುವ ಚೆಂಡೆ ವಾದಕ್ಕೆ ಉಸ್ತಾದ್ ತಲೆದೂಗಿದರು. ಉತ್ತರ-ದಕ್ಷಿಣದ ಕಲಾ ಜುಗಲ್ ಬಂಧಿಯಲ್ಲಿ ಸೇರಿದ್ದ ಕಲಾಸಕ್ತರು ಅಖಂಡ ಭಾರತವನ್ನು ಕಂಡರು.
ಡಾ. ಆಳ್ವರ ಸಂಘಟನೆಗೆ ಬೆರಗಾಗಿದ್ದ ಝಾಕಿರ್ ಹುಸೇನ್ ಅಂದು ಆರಂಭದಲ್ಲಿ ‘ಐ ಆಮ್ ಸ್ಟನ್ಡ್ ಐ ಹ್ಯಾವ್ ನೋ ವರ್ಡ್ಸ್ ಟೂ ಎಕ್ಸ್‌ಪ್ರೆಸ್..’(ನಾನು ಮೂಕವಿಸ್ಮಿತನಾಗಿದ್ದೇನೆ... ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ) ಎಂದಿದ್ದರು. ಅಂದಿನ ಕಾರ್ಯಕ್ರಮದ ಕೊನೆಯಲ್ಲಿ ಪಾಲ್ಗೊಂಡ ಪ್ರತಿಯೋರ್ವ ಕಲಾಭಿಮಾನಿಗಳದ್ದೂ ಇದೇ ಅನಿಸಿಕೆಯಾಗಿತ್ತು ಎನ್ನುವುದು ಗಮನಾರ್ಹ.-----
ಝಾಕಿರ್ ಹುಸೇನ್ ಓರ್ವ ಅದ್ಭುತ ವ್ಯಕ್ತಿ, ಅತ್ಯಂತ ಸ್ನೇಹಮಯಿ ಸರಳತೆಯ ಕಲಾವಿದ. ಮೂರು ಬಾರಿ ಅವರು ನಮ್ಮ ವಿರಾಸತ್‌ನಲ್ಲಿ ಪಾಲ್ಗೊಂಡಿದ್ದರು. ಸಾಮಾನ್ಯರಂತೆ ನಮ್ಮೊಂದಿಗೆ ಬೆರೆತಿದ್ದ ಅವರಿಂದ ಇಂದಿನ ಯುವ ಕಲಾವಿದರು, ನಾವೆಲ್ಲರೂ ಕಲಿಯಬೇಕಾದದ್ದು ಬಹಳಷ್ಟಿದೆ.। ಡಾ. ಎಂ. ಮೋಹನ ಆಳ್ವ , ಅಧ್ಯಕ್ಷ,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ------------
1997ರಲ್ಲಿ ಕಾರ್ಕಳ ಶಾಸ್ತ್ರೀಯ ಸಭಾದ ಕಾರ್ಯಕ್ರಮಕ್ಕೆ ಬಂದಿದ್ದ ಅವರಿಗೆ ಆಹಾರದ ವೇಳೆ ಸಾಂಬ್ರಾಣಿ ಪಲ್ಯ ಇಷ್ಟವಾಗಿತ್ತು. 2007ರಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡಾಗಲೂ ಅದೆಲ್ಲವನ್ನೂ ನೆನಪಿಸಿಕೊಂಡು ಯಶಸ್ಸು ಹಾರೈಸಿದ್ದರು.। ಮಹಾಲಕ್ಷ್ಮೀ ಶೆಣೈ, ಕಾರ್ಕಳದ ಕಲಾವಿದೆ