ಸಾರಾಂಶ
ಕಾರವಾರ: ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ರೀತಿಯ ಪ್ರಾಕೃತಿಕ ವಿಕೋಪ ಸೇರಿದಂತೆ ಎಲ್ಲ ತುರ್ತು ಸಂದರ್ಭಗಳಲ್ಲಿ ಗಾಯಾಳು ಸಂತ್ರಸ್ತರಿಗೆ ವೈದ್ಯಕೀಯ ಸೇವೆ ನೀಡುವಲ್ಲಿ ಯಾವುದೇ ವಿಳಂಬವಾಗದಂತೆ ಸದಾ ಸನ್ನದ್ದ ಸ್ಥಿತಿಯಲ್ಲಿರುವಂತೆ ವೈದ್ಯಕೀಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಅವರು ಮಂಗಳವಾರ ಕ್ರಿಮ್ಸ್ ನಲ್ಲಿ ವಿಪತ್ತು ಸಂದರ್ಭದಲ್ಲಿ ತುರ್ತು ವೈದ್ಯಕಿಯ ನೆರವು ಒದಗಿಸುವ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಅನೇಕ ಸೂಕ್ಷ್ಮ ಸ್ಥಳಗಳಿದ್ದು, ಮಳೆಗಾಲ ಸಂದರ್ಭದಲ್ಲಿ ಗುಡ್ಡ ಕುಸಿತ ಸೇರಿದಂತೆ ಇತರೇ ಯಾವುದೇ ರೀತಿಯ ಪ್ರಾಕೃತಿಕ ವಿಕೋಪ ಮತ್ತು ಇನ್ನಿತರ ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಾಗುವ ಜಿಲ್ಲೆಯ ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಯಾವುದೇ ವಿಳಂಬವಾಗುವುದನ್ನು ತಡೆಯಲು ಇಲ್ಲಿರುವ ಮಾನವ ಸಂಪನ್ಮೂಲ ಸೂಕ್ತ ರೀತಿಯಲ್ಲಿ ಬಳಸಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ವೈದ್ಯಕೀಯ ನೆರವು ಒದಗಿಸಲು ಸಾಧ್ಯವಾಗಲಿದೆ ಎಂದರು.
ವಿಪತ್ತು ಸಂದರ್ಭದಲ್ಲಿ ಗಾಯಳುಗಳಿಗೆ ತುರ್ತು ಚಿಕಿತ್ಸೆ ನೀಡುವ ಕುರಿತು ತರಬೇತಿ ಪಡೆದ ಸಿಬ್ಬಂದಿ ಇದ್ದಲ್ಲಿ ಜೀವ ಹಾನಿಯಾಗುವುದನ್ನು ತಡೆಯಲು ಸಾಧ್ಯವಾಗಲಿದ್ದು, ಇಂತಹ ಸಂದರ್ಭಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೊದಲು ಗಾಯಾಳುಗಳ ಪರಿಸ್ಥಿತಿ ಗಮನಿಸಿ ಅವರನ್ನು ಸೂಕ್ತ ರೀತಿಯಲ್ಲಿ ವಿಂಗಡಿಸುವ ಮೂಲಕ ಆದ್ಯತೆಯಲ್ಲಿ ಎಲ್ಲರಿಗೂ ಅಗತ್ಯ ಚಿಕಿತ್ಸೆ ಒದಗಿಸಲು ಸಾಧ್ಯವಾಗಲಿದೆ ಎಂದರು.ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕ್ರಿಮ್ಸ್ ನ ಡೀನ್ ಡಾ. ಪೂರ್ಣಿಮಾ, ಕೆಎಂಸಿ ಮಣಿಪಾಲದ ತುರ್ತು ಚಿಕಿತ್ಸಾ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ಮಾಹೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಯೋಜಕ ಮತ್ತು ಕೆ.ಎಂ.ಸಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಡಾ.ಜಯರಾಜ್ ಬಾಲಕೃಷ್ಣನ್, ತೇಜಸ್ ವಿಪತ್ತು ನಿರ್ವಹಣೆ ಮತ್ತು ತಗ್ಗಿಸುವ ಕೇಂದ್ರದ ಸಂಯೋಜಕ ಸಂದೀಪ್ ಶಿವರಾಮ್, ಕ್ರಿಮ್ಸ್ ನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಪ್ರೊ.ಡಾ ಹೇಮಗಿರಿ ಕೆ ಮತ್ತಿತರರು ಇದ್ದರು.
ಕಾರ್ಯಾಗಾರದಲ್ಲಿ ಕ್ರಿಮ್ಸ್ ನ ವೈದ್ಯರು, ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು, ಶುಶ್ರೂಷಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಕೊಂಕಣ ರೈಲ್ವೆಯ ಸಿಬ್ಬಂದಿಗೆ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ತರಬೇತಿ ನೀಡಲಾಯಿತು.