ದೇಶ ಸೇವೆಗೆ ಎಂದಿಗೂ ಸನ್ನದ್ಧರಾಗಿರಿ-ಅರುಣ ಕುಲಕರ್ಣಿ

| Published : Aug 04 2025, 12:15 AM IST

ಸಾರಾಂಶ

ನಮಗೆ ನಮ್ಮ ವೈಯಕ್ತಿಕ ಬದುಕು, ಕುಟುಂಬಕ್ಕಿಂತ ದೇಶ ಮುಖ್ಯ. ಆದ್ದರಿಂದ ದೇಶ ಸೇವೆಗೆ ನೀವುಗಳು ಎಂದಿಗೂ ಸನ್ನದ್ಧರಾಗಿರಿ ಎಂದು ನಿವೃತ್ತ ಮುಖ್ಯಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.

ನರೇಗಲ್ಲ: ನಮಗೆ ನಮ್ಮ ವೈಯಕ್ತಿಕ ಬದುಕು, ಕುಟುಂಬಕ್ಕಿಂತ ದೇಶ ಮುಖ್ಯ. ಆದ್ದರಿಂದ ದೇಶ ಸೇವೆಗೆ ನೀವುಗಳು ಎಂದಿಗೂ ಸನ್ನದ್ಧರಾಗಿರಿ ಎಂದು ನಿವೃತ್ತ ಮುಖ್ಯಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀ ಅಭಿನವ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಹಿರೆಅಳಗುಂಡಿಯ ಚನ್ನು ಪಾಟೀಲ ಫೌಂಡೇಷನ್‌ದವರು ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.ನಮ್ಮ ವೀರಯೋಧರು ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಿ ಭಾರತಕ್ಕೆ ಜಯ ತಂದು ಕೊಟ್ಟರು. ಆಪರೇಷನ್ ವಿಜಯ ಹೆಸರಿನಲ್ಲಿ ನಡೆದ ಈ ಯುದ್ಧದ ಮಾರ್ಗದರ್ಶನವನ್ನು ಅಂದಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿಯವರು ಸಮರ್ಥವಾಗಿ ನೆರವೇರಿಸಿದರು. ಅದಕ್ಕಾಗಿಯೆ ಪ್ರತಿ ವರ್ಷದ ಜುಲೈ ೨೬ನ್ನು ಕಾರ್ಗಿಲ್ ವಿಜಯೋತ್ಸವದ ದಿನ ಎಂದು ಆಚರಿಸಲಾಗುತ್ತಿದೆ. ಭಾರತ ತನಗೆ ಇಂತಹ ಆಘಾತಕಾರಿ ಪೆಟ್ಟನ್ನು ಎರಡು ಮೂರು ಬಾರಿ ನೀಡಿದರೂ ಬುದ್ಧಿ ಕಲಿಯದ ಪಾಕ್ ಮತ್ತೆಮತ್ತೆ ಕಾಲ್ಕೆರೆದು ಭಾರತದೊಂದಿಗೆ ದ್ವೇಷ ಸಾಧಿಸುತ್ತಿದೆ. ತೀರ ಇತ್ತೀಚೆಗೆ ನಡೆದ ಸಿಂಧೂರ ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಸಹ ಪಾಕ್ ನೆನಪಿಟ್ಟುಕೊಳ್ಳುವಂತಹ ಪೆಟ್ಟನ್ನೇ ನೀಡಿದರು. ಈ ಎಲ್ಲ ವಿಷಯಗಳನ್ನು ತಿಳಿದುಕೊಂಡು ನೀವುಗಳು ದೇಶ ಸೇವೆಗೆ ನಿಮ್ಮನ್ನು ಸಮರ್ಪಿಸಿಕೊಳ್ಳಲು ಸಿದ್ಧರಾಗಬೇಕೆಂದು ಕುಲಕರ್ಣಿ ಹೇಳಿದರು.ಫೌಂಡೇಷನ್‌ನ ಸಂಸ್ಥಾಪಕ ಕಾರ್ಯದರ್ಶಿ ಉಮೇಶ ಪಾಟೀಲ ಮಾತನಾಡಿ, ನಿಮ್ಮಲ್ಲಿ ದೇಶಾಭಿಮಾನವನ್ನು ಬೆಳೆಸಬೇಕೆಂದು ಈ ಕಾರ್ಯಕ್ರಮವನ್ನು ಇಲ್ಲಿ ಮಾಡಿದ್ದೇವೆ. ನಿಮಗೆ ನಮ್ಮ ಫೌಂಡೇಷನ್‌ದ ವತಿಯಿಂದ ದೇಶಭಕ್ತರ ಜೀವನ ಚರಿತ್ರೆಯ ಪುಸ್ತಕಗಳನ್ನು ನೀಡುತ್ತೇವೆ. ಅದನ್ನು ಓದಿ ನೀವುಗಳು ದೇಶಾಭಿಮಾನ ಹೊಂದಿರಿ ಎಂದರು. ಯುದ್ಧಕ್ಕೆ ಹೊರಡುವ ಸಮಯದಲ್ಲಿ ಆ ಯೋಧನ ಮನಸ್ಥಿತಿ ಹೇಗಿರುತ್ತದೆ ಎಂಬುದರ ಬಗ್ಗೆ ಯೋಧನೊಬ್ಬ ತನ್ನ ಮನೆಗೆ ಬರೆದ ಪತ್ರವೊಂದನ್ನು ಓದಿ ಹೇಳಿದರು.ನಿವೃತ್ತ ಸೈನಿಕ ಶಿವಪುತ್ರಪ್ಪ ಸಂಗನಾಳ ಅವರನ್ನು ಫೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು. ಸಂಗನಾಳ ಮಾತನಾಡಿ, ಯುದ್ಧಭೂಮಿಯ ಅನುಭವಗಳನ್ನು, ಸೈನ್ಯದ ಅನುಭಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳಿಗಾಗಿ ಕಾರ್ಗಿಲ್ ಯುದ್ಧ ಕುರಿತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜಯಕುಮಾರ ಪ್ರಥಮ, ಸಂಗೀತಾ ಪರವಣ್ಣವರ ದ್ವಿತೀಯ ಹಾಗೂ ನಾಜಮಿನ ಮುಗಳಿ ತೃತೀಯ ಸ್ಥಾನ ಪಡೆದು ಫೌಂಡೇಷನ್‌ದ ಬಹುಮಾನಗಳನ್ನು ಪಡೆದುಕೊಂಡರು.ಕಾಲೇಜಿನ ಪ್ರಾಚಾರ್ಯೆ ಅನಸೂಯಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಫೌಂಡೇಷನ್‌ನ ಸದಸ್ಯ ಶಿವಕುಮಾರ ದಡ್ಡೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಮೇಶ ಜಿ. ಪಾಟೀಲ, ಮಹೇಶ ಶಿವಶಿಂಪರ, ಕಳಕಪ್ಪ ಸರ್ವಿ, ರಮೇಶ ಮಾಸ್ತಿ, ಕಲ್ಲಪ್ಪ ಸರ್ವಿ, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.