ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಎಸ್ಸಿ/ಎಸ್ಟಿ ನೌಕರರ ಹಿತ ಕಾಪಾಡುವ ಜತೆಗೆ ಹಲವು ದ್ಯೇಯೋದ್ದೇಶದಿಂದ ಪರಿಶಿಷ್ಟ ಜಾತಿ/ಪಂಗಡದ ನೌಕರರ ತಾಲೂಕು ಘಟಕದ ಅಧ್ಯಕ್ಷ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಹುದ್ದೆಗೆ ನ್ಯಾಯ ದೊರಕಿಸಿ ಸಮುದಾಯದ ಹಿತಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಾಲೂಕು ಎಸ್ಸಿ/ಎಸ್ಟಿ ನೌಕರರ ಸಂಘದ ನೂತನ ಅಧ್ಯಕ್ಷ ಚಂದ್ರಾನಾಯ್ಕ ತಿಳಿಸಿದರು.ಶನಿವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳಲ್ಲಿ ಹಲವು ಪರಿಶಿಷ್ಟ ಜಾತಿ ವರ್ಗದ ನೌಕರರು ಸೇವೆ ಸಲ್ಲಿಸುತ್ತಿದ್ದು, ಪ್ರತಿಯೊಬ್ಬರ ಹಿತ ಕಾಪಾಡುವ ಸಂಘದ ಮೂಲ ಉದ್ದೇಶಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಅವರು, ಪ.ಜಾತಿ ಪಂಗಡದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಲಾಗುವುದು, ಸಂಘಟನೆಗೆ ಸೇರ್ಪಡೆಗೊಳ್ಳದ ನೌಕರರನ್ನು ಗುರುತಿಸಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದು, ಆರ್ಥಿಕ ತೊಂದರೆಯಿಂದ ಬಳಲುತ್ತಿರುವ ಪ್ರತಿಭಾನ್ವಿತ ಮಕ್ಕಳಿಗೆ ನ್ಯಾಯ ದೊರಕಿಸಿ ಆಸಕ್ತ ವಿಷಯದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂದಿಸಿದ ತಜ್ಞರ ಮೂಲಕ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಸಮುದಾಯದ ನೌಕರರ ಸಹಿತ ಮಕ್ಕಳು ಅಹಿತಕರ ಘಟನೆಯಲ್ಲಿ ಅನ್ಯಾಯ ಅನುಭವಿಸುತ್ತಿದ್ದಲ್ಲಿ ನ್ಯಾಯ ದೊರಕಿಸಿಕೊಡಲು ಶ್ರಮಿಸುವುದಾಗಿ ತಿಳಿಸಿದ ಅವರು ಸಮುದಾಯದ ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸಿ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಾಗುವುದು. ತಾಂಡಾ, ಹಟ್ಟಿಗಳಲ್ಲಿ ಯುವಕರು ಉದ್ಯೋಗವಿಲ್ಲದೆ ತೊಂದರೆ ಪಡುತ್ತಿದ್ದು, ಸೂಕ್ತ ಮಾರ್ಗದರ್ಶನದ ಜತೆಗೆ ಸರ್ಕಾರದ ಸೌಲಭ್ಯ ಸದುಪಯೋಗಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.ಅಗತ್ಯವಿರುವವರಿಗೆ ಕಾನೂನು ಅರಿವು, ಮಕ್ಕಳಿಗೆ ಶೈಕ್ಷಣಿಕ ಅರಿವು ಕಾರ್ಯಾಗಾರ, ದಲಿತ ನೌಕರರ ಉತ್ಸವ ಆಯೋಜನೆ ಬಗ್ಗೆ ಹೆಚ್ಚಿನ ನಿಗಾವಹಿಸುವುದಾಗಿ ತಿಳಿಸಿದರು.
ಸಂಘದ ಗೌರವಾಧ್ಯಕ್ಷ, ನಿವೃತ್ತ ಮುಖ್ಯ ಶಿಕ್ಷಕ ಬಿ.ಪಾಪಯ್ಯ ಮಾತನಾಡಿ, ಎಲ್ಲ ಖಾಸಗಿ ಸರ್ಕಾರಿ ನೌಕರರ ಶ್ರೇಯೋಭಿವೃದ್ದಿಗಾಗಿ, ಯೋಗಕ್ಷೇಮಕ್ಕಾಗಿ ಸಂಘಟನೆ ಆರಂಭವಾಗಿದ್ದು, ವ್ಯಾಪ್ತಿಗೆ ಡಿ.ದರ್ಜೆ ನೌಕರರಿಂದ ಉನ್ನತ ದರ್ಜೆವರೆಗಿನ ಎಲ್ಲ ನೌಕರರು ಒಳಪಡುತ್ತಾರೆ ಎಂದು ತಿಳಿಸಿದರು.ನೌಕರರಿಗೆ ಇತರೆ ಸಮುದಾಯದಿಂದ ಆಗುವ ಅನ್ಯಾಯ, ಪ್ರತಿಭಟಿಸುವ, ಖಂಡಿಸುವ ಮೂಲಕ ನ್ಯಾಯ ದೊರಕಿಸುವ ಹಿನ್ನಲೆಯಲ್ಲಿ ಆರಂಭವಾದ ಸಂಘ ನೌಕರರ ಆತ್ಮಸ್ಥೈರ್ಯ ಹೆಚ್ಚಿಸಲು ಶ್ರಮಿಸಲಿದೆ ಎಂದ ಅವರು, ಕಳೆದ 2 ದಶಕದ ಹಿಂದೆ ಆರಂಭವಾದ ಸಂಘಕ್ಕೆ ದ್ಯಾಮಪ್ಪ, ಡಿ.ಕೆ ಮಂಜಪ್ಪ, ರಾಮಯ್ಯ ಸಹಿತ ನಾನು ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ಇದೀಗ ನಿವೃತ್ತಿಯಾಗಿದ್ದು ಎಲ್ಲ ನೌಕರರ ಒತ್ತಾಸೆ ಮೇರೆಗೆ ನೂತನ ಕಾರ್ಯಕಾರಿ ಸಮಿತಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸೂಕ್ತ ಸಲಹೆ ಮಾರ್ಗದರ್ಶನಕ್ಕಾಗಿ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.
ದಲಿತ ನೌಕರರ ಜತೆಗೆ ಅವರ ಮಕ್ಕಳ, ಕುಟುಂಬದ ಯೋಗಕ್ಷೇಮಕ್ಕಾಗಿ ಸಂಘ ಶ್ರಮಿಸಲಿದೆ. ಬೆಳೆದು ಬಂದ ತಾಂಡಾ, ಹಟ್ಟಿ, ಭೋವಿ ಕಾಲೋನಿಯ ಜನತೆಗೆ ಸರ್ಕಾರದ ಸೌಲಭ್ಯದ ಬಗ್ಗೆ ಮಾಹಿತಿ, ಕಾನೂನು ಅರಿವು ಜತೆಗೆ ಮಕ್ಕಳಿಗೆ ಭವಿಷ್ಯದ ಕೋರ್ಸ್ ಬಗ್ಗೆ ಮಾಹಿತಿ ನೀಡಿ ನಾವು ಹುಟ್ಟಿ ಬೆಳೆದು ಬಂದ ಕೇರಿಯ ಜನಾಂಗದ ಜನರ ಋಣ ತೀರಿಸುವ ಜವಾಬ್ದಾರಿ ನಿರ್ವಹಿಸಲಿದೆ ಎಂದರು.ಗೋಷ್ಠಿಯಲ್ಲಿ ಸಂಘದ ನೂತನ ಉಪಾಧ್ಯಕ್ಷ ಪರಮೇಶ್ವರಪ್ಪ, ಗದಿಗೇಶ್, ಪ್ರ.ಕಾ ಕೆ.ಎಚ್ ಪುಟ್ಟಪ್ಪ, ಖಜಾಂಚಿ ಸೋಮಶೇಖರಪ್ಪ, ಸಹ ಕಾರ್ಯದರ್ಶಿ ಎ.ಕೆ ಹಾಲಪ್ಪ, ಸಂ.ಕಾ ಬಂಗಾರಪ್ಪ, ಸತೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.