ಮುಂಡರಗಿ: ತಾಲೂಕಿನ ಕೊನೆಯ ಗ್ರಾಮವಾಗಿರುವ ಬಿದರಹಳ್ಳಿ ನವ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಆದ್ಯತೆ ಮೇರೆಗೆ ಒಂದೊಂದಾಗಿ ಪರಿಹರಿಸುವ ಕಾರ್ಯ ಮಾಡೋಣ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ತಾಲೂಕಿನ ಬಿದರಹಳ್ಳಿ ನವ ಗ್ರಾಮದಲ್ಲಿ ಗದಗ ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಂಜಿನಿಯರಿಂಗ್ ಉಪ ವಿಭಾಗ ಧಾರವಾಡ ವತಿಯಿಂದ ಸುಮಾರು ₹61 ಲಕ್ಷ ಅನುದಾನದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಭೂಮಿಪೂಜೆಯನ್ನು ಶನಿವಾರ ನೆರವೇರಿಸಿ ಅವರು ಮಾತನಾಡಿದರು.ಈಚಗೆ ಕ್ಷೇತ್ರದಲ್ಲಿನ ಆರೋಗ್ಯ ಇಲಾಖೆ ಸಮಸ್ಯೆಗಳ ಕುರಿತು ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿತ್ತು. ಆ ಸಂದರ್ಭದಲ್ಲಿ ಸಚಿವರು ಇಡೀ ಜಿಲ್ಲೆಯ ಲೆಕ್ಕಾಚಾರ ಹಾಕಿ ನೂತನ ಕಟ್ಟಡಗಳ ಬಗ್ಗೆ ಹೇಳಿದ್ದರು. ಆದರೆ ಕ್ಷೇತ್ರವಾರು ಪ್ರತ್ಯೇಕವಾಗಿ ಮಾಹಿತಿ ಪಡೆದು ಅಲ್ಲಿನ ಕಟ್ಟಡಗಳ ಅವಶ್ಯಕತೆಗಳನ್ನು ಅರಿತು ನೀಡಬೇಕು ಎಂದು ಕೋರಿದ್ದೆ. ಹೀಗಾಗಿ ಸರ್ಕಾರ ಇದೀಗ ಈ ಕಟ್ಟಡ ನಿರ್ಮಾಣಕ್ಕೆ ಹಣ ನೀಡಿದೆ ಎಂದ ಶಾಸಕರು ಹೇಳಿದರು.
ಸಿಂಗಟಾಲೂರು ಏತ ನೀರಾವರಿ ಇಲಾಖೆ ಅಧಿಕಾರಿಗಳು ಬಿದರಹಳ್ಳಿ ನವಗ್ರಾಮವನ್ನು ಈ ಕೂಡಲೇ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು. ಈ ಗ್ರಾಮ ಇನ್ನೂ ಇಲಾಖೆಯ ಅಧೀನದಲ್ಲಿರುವುದರಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಅನುಕೂಲವಾಗುವುದಿಲ್ಲ. ಇಲ್ಲೊಂದು ನೀರು ಸಂಗ್ರಹ ಜಲಾಗಾರ ಬೇಕೆನ್ನುವುದು ಬಹುದಿನಗಳ ಬೇಡಿಕೆಯಾಗಿದ್ದು, ಶೀಘ್ರದಲ್ಲಿ ಮಂಜೂರು ಮಾಡಿಸಲಾಗುವುದು. ಈ ನವ ಗ್ರಾಮದಲ್ಲಿ ರುದ್ರಭೂಮಿಯ ಅವಶ್ಯಕತೆ ಇದ್ದು, ಈ ಕುರಿತು ಗ್ರಾಮಸ್ಥರೆಲ್ಲರೂ ಚರ್ಚಿಸಿ ನಿರ್ಧರಿಸಬೇಕು. ಶೀಘ್ರದಲ್ಲಿಯೇ ಬಿದರಳ್ಳೆಮ್ಮನ ದೇವಸ್ಥಾನದ ತಡೆಗೋಡೆ ಕುರಿತು ಸರ್ಕಾರದ ಹಂತದಲ್ಲಿ ಬೇಡಿಕೆ ಸಲ್ಲಿಸಲಾಗುವುದು ಎಂದರು.ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ ಎಂದರು.
ಬಿದರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತಗೌಡ ಪಾಟೀಲ ಮಾತನಾಡಿ, ಶಾಸಕರು ನಮಗ್ರಾಮದಲ್ಲಿನ ನಿವಾಸಿಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಬೇಕು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ಸುನೀತಾ ಹಾರೇಗೇರಿ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷ ಪವಿತ್ರಾ ಕಲ್ಲಕುಟಗರ್, ಮಲ್ಲಣ್ಣ ಹಣಜಿ, ಪ್ರಶಾಂತ ಗುಡದಪ್ಪನವರ, ಬಸವರಾಜ ಬಿಳಿಮಗ್ಗದ, ಮಹಾಂತೇಶ ಜೋಶಿ, ಸತ್ಯಪ್ಪ ಕುರಗೋಡಿ, ಮಹಾಂತಯ್ಯ ಹೊಸಮಠ, ರಾಜಣ್ಣ ಹಾವೇರಿ, ನೀಲಪ್ಪ ನಂದಗಾವಿ, ಮೈಲಾರಪ್ಪ ಕಲಕೇರಿ, ಡಾ. ರಮೇಶ ಪಾಟೀಲ, ಪರಸಪ್ಪ ಹಾಣಪ್ಪನವರ, ಗೋಣೆಪ್ಪ ಚೌಡಾಳ, ಜ್ಯೋತಿ ಹಾನಗಲ್, ಶೀಲಾ ಬೂದಿಹಾಳ, ಅರುಣಾ ಪಾಟೀಲ ಉಪಸ್ಥಿತರಿದ್ದರು.