ನಾಲೆಗೆ ನೀರು ಬಿಡುಗಡೆಗೆ ಸದಾ ಸಿದ್ಧ: ಚಲುವರಾಯಸ್ವಾಮಿ

| Published : Jul 01 2024, 01:46 AM IST

ಸಾರಾಂಶ

ನೀರು ಬಿಡುಗಡೆ ಮಾಡುವ ಸಂಬಂಧ ರೈತರು ಪ್ರತಿಭಟನೆ ಮಾಡುವ, ವಿಪಕ್ಷದವರು ಕೂಗಾಡುವ ಅವಶ್ಯಕತೆ ಇಲ್ಲ. ನಾಲಾ ಆಧುನೀಕರಣ ಕಾಮಗಾರಿ ನಡೆಸುತ್ತಿರುವವರಿಗೂ ಈಗಾಗಲೇ ಮುನ್ಸೂಚನೆ ನೀಡಿದ್ದೇವೆ. ನಾವು ಯಾವುದೇ ಸಂದರ್ಭದಲ್ಲೂ ನೀರು ಹರಿಸುವ ತೀರ್ಮಾನ ಮಾಡಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದಕ್ಕೆ ನಾವು ಯಾವುದೇ ಸಮಯದಲ್ಲೂ ಸಿದ್ಧರಿದ್ದೇವೆ, ಆದರೆ, ನೀರು ಹರಿಸುವ ವಿಚಾರವಾಗಿ ರೈತರಿಂದ ವಿಭಿನ್ನ ರೀತಿ ಮಾತುಗಳು ಕೇಳಿಬರುತ್ತಿರುವುದರಿಂದ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿರುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನೀರು ಬಿಡುಗಡೆ ಮಾಡುವ ಸಂಬಂಧ ರೈತರು ಪ್ರತಿಭಟನೆ ಮಾಡುವ, ವಿಪಕ್ಷದವರು ಕೂಗಾಡುವ ಅವಶ್ಯಕತೆ ಇಲ್ಲ. ನಾಲಾ ಆಧುನೀಕರಣ ಕಾಮಗಾರಿ ನಡೆಸುತ್ತಿರುವವರಿಗೂ ಈಗಾಗಲೇ ಮುನ್ಸೂಚನೆ ನೀಡಿದ್ದೇವೆ. ನಾವು ಯಾವುದೇ ಸಂದರ್ಭದಲ್ಲೂ ನೀರು ಹರಿಸುವ ತೀರ್ಮಾನ ಮಾಡಬಹುದು. ಆ ಸಮಯಕ್ಕೆ ನೀವೂ ಕಾಮಗಾರಿ ಸ್ಥಗಿತಗೊಳಿಸುವುದಕ್ಕೆ ರೆಡಿ ಇರಬೇಕೆಂದು ತಿಳಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ೯೪ ಅಡಿ ನೀರಿದೆ. ನಿನ್ನೆ ರಾತ್ರಿಯಿಂದ ಒಳಹರಿವು ಕಡಿಮೆಯಾಗಿದೆ. ಹಾಗಾಗಿ ಜಲಾಶಯದ ನೀರಿನ ಮಟ್ಟ ೧೧೦ ಅಡಿ ತಲುಪಿದಾಗ ನೀರು ಬಿಟ್ಟರೆ ಸೂಕ್ತ. ಏಕೆಂದರೆ, ಆ ಸಮಯದಲ್ಲಿ ರೈತರು ಭತ್ತದ ಸಸಿಮಡಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಹಿಂದೆಯೇ ನಾಟಿ ಕಾರ್ಯವನ್ನೂ ನಡೆಸುವುದಕ್ಕೆ ಅನುಕೂಲವಾಗಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಈಗ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಹೇಳುತ್ತಿದ್ದಾರೆ. ಈಗಲೇ ನೀರು ಹರಿಸಿದರೆ ರೈತರು ಭತ್ತದ ಸಸಿಮಡಿ ಮಾಡಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ ಎಂಬ ಮಾತುಗಳೂ ಇವೆ ಎಂದು ಸಚಿವರು ಹೇಳಿದರು.

ಈಗ ನೀರು ಬಿಡುವುದಾದರೆ ಅದನ್ನು ಕುಡಿಯುವ ನೀರಿನ ಉದ್ದೇಶಕ್ಕೆಂದು ಪರಿಗಣಿಸಲಾಗುತ್ತದೆ. ಬೆಳೆಗಳಿಗೆ ಎಂದು ಪರಿಗಣಿಸಲಾಗುವುದಿಲ್ಲ. ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ ಎರಡು ಅಥವಾ ಮೂರನೇ ವಾರದಿಂದ ನಾಲೆಗಳಿಗೆ ನೀರು ಹರಿಸುವುದು ವಾಡಿಕೆಯಾಗಿದೆ. ಹಾಗಾಗಿ ಶಾಸಕರು, ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಸ್ಥಿತಿಯನ್ನು ಅವಲೋಕನ ಮಾಡಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.