ಆಲ್ಜೈಮರ್ಸ್ ಕಾಯಿಲೆಗೆ ಪ್ರಾರಂಭದಲ್ಲೆ ಸೂಕ್ತ ಚಿಕಿತ್ಸೆ ಅಗತ್ಯ: ಡಿಎಚ್‌ಒ ಡಾ.ಕೆ.ಮೋಹನ್

| Published : Sep 23 2024, 01:25 AM IST

ಆಲ್ಜೈಮರ್ಸ್ ಕಾಯಿಲೆಗೆ ಪ್ರಾರಂಭದಲ್ಲೆ ಸೂಕ್ತ ಚಿಕಿತ್ಸೆ ಅಗತ್ಯ: ಡಿಎಚ್‌ಒ ಡಾ.ಕೆ.ಮೋಹನ್
Share this Article
  • FB
  • TW
  • Linkdin
  • Email

ಸಾರಾಂಶ

ವಯಸ್ಸಾದವರಲ್ಲಿ ಚರ್ಮ ಸುಕ್ಕು ಗಟ್ಟುವಿಕೆ, ತೊದಲು ಮಾತು, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಸ್ವಚ್ಛತೆ ಬಗ್ಗೆ ನಿರ್ಲಕ್ಷ ವಹಿಸುವುದು, ಮರೆಯುವಿಕೆ, ನಡೆಯುವಾಗ ದಾರಿ ತಪ್ಪುವುದು, ಉಡುಪುಗಳನ್ನು ಧರಿಸುವುದು ಗೊತ್ತಾಗದೆ ಇರುವುದು, ಮಾನಸಿಕವಾಗಿ ಕುಗ್ಗುವಿಕೆ ಇತ್ಯಾದಿ ಸಮಸ್ಯೆಗಳು ಈ ಕಾಯಿಲೆ ಲಕ್ಷಣಗಳಾಗಿವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಆಲ್ಜೈಮರ್ಸ್ ಸಂಪೂರ್ಣ ಗುಣವಾಗದ ಕಾಯಿಲೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್ ಹೇಳಿದರು.

ತಾಲೂಕಿನ ಅರಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಆಲ್ಜೈಮರ್ಸ್ ದಿನ ಅರಿವು ಕಾರ್ಯಕ್ರಮ ಹಾಗೂ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ಆಹಾರ ಪದ್ಧತಿ, ಚಟುವಟಿಕೆ ರಹಿತ ಜೀವನ, ಮಾನಸಿಕ ಒತ್ತಡ, ನೆಮ್ಮದಿ ರಹಿತ ಜೀವನ ಇತ್ಯಾದಿ ಕಾರಣಗಳಿಂದ ಸುಮಾರು 60 -70 ವರ್ಷದೊಳಗಿನ ವಯೋವೃದ್ಧರಲ್ಲಿ ಮರೆವು ಕಾಯಿಲೆ ಕಂಡು ಬರುತ್ತದೆ. ವಯಸ್ಸಾದವರಲ್ಲಿ ಚರ್ಮ ಸುಕ್ಕು ಗಟ್ಟುವಿಕೆ, ತೊದಲು ಮಾತು, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಸ್ವಚ್ಛತೆ ಬಗ್ಗೆ ನಿರ್ಲಕ್ಷ ವಹಿಸುವುದು, ಮರೆಯುವಿಕೆ, ನಡೆಯುವಾಗ ದಾರಿ ತಪ್ಪುವುದು, ಉಡುಪುಗಳನ್ನು ಧರಿಸುವುದು ಗೊತ್ತಾಗದೆ ಇರುವುದು, ಮಾನಸಿಕವಾಗಿ ಕುಗ್ಗುವಿಕೆ ಇತ್ಯಾದಿ ಸಮಸ್ಯೆಗಳು ಈ ಕಾಯಿಲೆ ಲಕ್ಷಣಗಳಾಗಿವೆ ಎಂದರು.

ದಿನನಿತ್ಯ ಚಟುವಟಿಕೆಯಿಂದ ಇರಲು ಮನೆಯಲ್ಲಿ ಅವಕಾಶ ನೀಡುವುದು, ಸರಳ ವ್ಯಾಯಾಮ, ಔಷಧಿ ಸೇವನೆ, ಉತ್ತಮ ಪರಿಸರ ಹಾಗೂ ಮನೆಯಲ್ಲಿ ಆರೈಕೆ ದಾರರ ಪ್ರೀತಿಯಿಂದ ಬೆಂಬಲ ನೀಡಿ ಆರೋಗ್ಯ ಕಾಪಾಡುವುದರಿಂದ ಕಾಯಿಲೆ ನಿಯಂತ್ರಿಸಬಹುದು ಎಂದರು.

ಸುಮಾರು 100ಕ್ಕೂ ಹೆಚ್ಚು ವಯೋವೃದ್ಧರಿಗೆ ಆಲ್ಜೈಮರ್ಸ್ ಆರೋಗ್ಯ ಸಮಸ್ಯೆ ಕುರಿತು ಸಂವಾದ ನಡೆಸಿ ಆರೋಗ್ಯ ತಪಾಸಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಜಿಲ್ಲಾ ವಿಬಿಡಿ ನಿಯಂತ್ರಣಾಧಿಕಾರಿ ಡಾ.ಎನ್.ಕಾಂತರಾಜು, ತಾಲೂಕು ಪ್ರಭಾರಿ ಆರೋಗ್ಯಾಧಿಕಾರಿ ಡಾ.ಡಿ.ಟಿ.ಮಂಜುನಾಥ್, ಪ್ರಸೂತಿ ರೋಗ ತಜ್ಞೆ ಡಾ.ಸವಿತಾ, ಬ್ರೇನ್ ಹೆಲ್ತ್ ಕ್ಲಿನಿಕ್ ವೈದ್ಯಾಧಿಕಾರಿ ಡಾ.ರವಿಕುಮಾರ್ ಹಾಗೂ ತಂಡ, ಕ್ಲಿನಿಕಲ್ ಸೈಕಾಲಾಜಿಸ್ಟ್ ಮೊಹಮ್ಮದ್ ಸುಹೇಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ವೇತಲತಾ ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.