ಸಾರಾಂಶ
ಭೀಮಶಿ ಭರಮಣ್ಣವರ
ಕನ್ನಡಪ್ರಭ ವಾರ್ತೆ ಗೋಕಾಕಉತ್ತರ ಕನ್ನಡ ಭಾಗದ ರೈತಾಪಿ ಜನರು ಹೊಲಗದ್ದೆಗಳಲ್ಲಿ ಹಚ್ಚ ಹಸಿರು ಬೆಳೆಗಳ ಮಧ್ಯೆ ಭೂಮಿ ತಾಯಿಯ ಪೂಜೆ, ಉಡಿ ತುಂಬಿ ಪ್ರಾರ್ಥಿಸಿ, ಚರಗ ಸಮರ್ಪಿಸುವ ಹಾಗೂ ಸಾಮೂಹಿಕ ಭೋಜನ ಸವಿಯುವ ಪರಂಪರೆಯ ಪ್ರತೀಕದ ಹಬ್ಬವೇ ಎಳ್ಳ ಅಮಾವಾಸ್ಯೆ ಹಾಗೂ ಶೀಗಿಹುಣ್ಣಿಮೆ. ಈ ದಿನಗಳೆರಡೂ ರೈತರಿಗೆ ಸಂಭ್ರಮದ ದಿನಗಳು.
ಅದರಲ್ಲೂ ಜಿಲ್ಲೆಯ ಗೋಕಾವಿ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಕೃಷಿಕರು. ರೈತರು ತಮ್ಮ ಹೊಲಗದ್ದೆಗಳಲ್ಲಿ ಈ ವರ್ಷದ ಡಿ.30ರಂದು ವಿಶೇಷವಾಗಿ ಎಳ್ಳ ಅಮಾವಾಸ್ಯೆ ದಿನದಂದು ಈ ಭಾಗದ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ಇರುತ್ತದೆ.ಮೃಷ್ಟಾನ್ನ ಭೂಜನ: ಈ ಭಾಗದ ಎಲ್ಲರ ಮನೆಯಲ್ಲಿ ಎಳ್ಳ ಅಮಾವಾಸ್ಯೆ ದಿನದಂದು ಮಾಡುವ ವಿಶೇಷ ಖಾದ್ಯಗಳಿಗೆ ಕೊನೆಯಿಲ್ಲ. ಬೆಳಗ್ಗೆ ತಮ್ಮ ಮನೆಗಳಲ್ಲಿ ಮನೆ ಶುಚಿಗೊಳಿಸಿ ಪೂಜೆ ಪುನಸ್ಕಾರದೊಂದಿಗೆ ಮನೆಗಳಲ್ಲಿ ಖಡಕ್ ರೊಟ್ಟಿ, ಶೇಂಗಾ ಚಟ್ಟಿ, ಗುರೆಳ್ಳೆ ಚಟ್ನಿ, ಹೋಳಿಗೆ, ಕಡಬು, ಖರ್ಚಿಕಾಯಿ, ಸೆಂಡಿಗೆ, ಸಜ್ಜೆ ರೊಟ್ಟಿ, ವಿವಿಧ ಹಿಂಡಿ, ಕಾಳು ಪಲ್ಲೆ ಹೀಗೆ ಹಲವಾರು ತರಹದ ರುಚಿಕಟ್ಟಾದ ಗಮಗಮಿಸುವ ವಿವಿಧ ಖಾದ್ಯಗಳ ಅಡುಗೆ ತಯಾರಿಸಿ, ಹೊಲಗದ್ದೆಗೆ ಹೋಗಿ ಹಸಿರು ಸೀರೆಯನ್ನುಟ್ಟ ಭೂತಾಯಿಗೆ ಉಡಿ ತುಂಬಿ, ಪೂಜಿಸಿ, ನಮಸ್ಕರಿಸಿ, ಎಲ್ಲರೂ ಒಂದೆಡೆ ಕುಳಿತು ಮೃಷ್ಠಾನ್ನ ಭೋಜನ ಸವಿಯುವ ರೈತ ಜೀವಗಳಿಗೆ ಈ ದಿನ ಬಹು ಅತ್ಯಮೂಲ್ಯವಾದದ್ದು. ಅಂದು ಬೆಳಗಿನ ಜಾವ ಎಲ್ಲರೂ ತಮ್ಮ ತಮ್ಮ ಹೊಲಗದ್ದೆಗಳಿಗೆ ಹೋಗಲು ಎತ್ತುಗಳನ್ನು ಶೃಂಗರಿಸಿ ಬಂಡಿ (ಎತ್ತಿನ ಗಾಡಿ) ಹೂಡಿಕೊಂಡು ಹೊಲಗಳಿಗೆ ಹೊರಟರೆ ಎತ್ತುಗಳ ಕೊರಳಲ್ಲಿ ಕಟ್ಟಿದ ಗೆಜ್ಜೆಯ ನಾದ, ಹಳ್ಳಿ ಸೊಗಡಿನ ಜಾನಪದ ಗೀತೆಗಳ ನಿನಾದ ಎಲ್ಲೆಡೆ ಕೇಳಿ ಬರುತ್ತಿರುತ್ತದೆ. ಇಂದಿಗೂ ಸಮೀಪದ ಹೊಲಗದ್ದೆಗಳಿಗೆ ಕಾಲ್ನಡಿಗೆಯಲ್ಲಿ, ಸೈಕಲ್ ಮೋಟಾರ್, ಎತ್ತಿನ ಗಾಡಿ(ಬಂಡಿ) ಹೊಡಿಕೊಂಡು ಹೋಗುತ್ತಾರೆ. ಶೀಗಿ ಹುಣ್ಣಿಮೆ ಬಂತೆಂದರೆ ತವರು ಮನೆಯ ಖರ್ಚಿಕಾಯಿ ಡಬ್ಬಿಯ (ತವರೂರಿನ) ದಾರಿ ನೋಡುವ ಗಂಡನ ಮನೆಯಲ್ಲಿರುವ ಮಹಿಳೆ ಯರಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಬೀಗರು-ಬಿಜ್ಜರ ಊರುಗಳಿಗೆ ಸಂಬಂಧಿಕರು ಖರ್ಚಿಕಾಯಿ ಒಟ್ಟು ಕೊಡುವ, ಮರಳಿ ತರುವ ಸಂಪ್ರದಾಯ ಈಗಲೂ ಈ ಕರದಂಟು ನಾಡಿನ ಜನರಲ್ಲಿದೆ.
ಭೂಮಿ ತಾಯಿಯ ಆರಾಧನೆ: ಹೊಲಕ್ಕೆ ತೆರಳಿದ ಮಹಿಳೆಯರು ಅಡುಗೆ ಬಿಚ್ಚಿಟ್ಟು ಹೊಲದಲ್ಲಿರುವ ಐದು ಜೋಳದ ದಂಟು, ಚಿಕ್ಕ ಐದು (ಪಂಚ ಪಾಂಡವರು) ಕಲ್ಲುಗಳನ್ನು ಹುಡುಕಿ ತಂದು ಪೂಜಿಸಿ, ಭೂತಾಯಿಗೆ ಪ್ರಾರ್ಥಿಸಿ, ಉಡಿತುಂಬಿ, ನೈವೇದ್ಯ ಅರ್ಪಿಸಿದ ಬಳಿಕ ಹೊಲದ ತುಂಬೆಲ್ಲ ನೈವೇದ್ಯವನ್ನು ಚರಗ ಚೆಲ್ಲುತ್ತಾರೆ. ಹೊಲಕ್ಕೆ ಹೋದ ಮನೆಮಂದಿ, ಬೀಗರು ಹಾಗೂ ಅಕ್ಕಪಕ್ಕದ ಮನೆಯವರು, ಸ್ನೇಹಿತರು ಒಟ್ಟಿಗೆ ಕುಳಿತು ಭೋಜನಸವಿಯುವುದೇ ಒಂದು ಸಂಭ್ರಮ.