ಸಾರಾಂಶ
ಸಾವಿರಾರು ಭಕ್ತರ ಆರಾಧ್ಯ ದೇವ ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕಡೆ ಶುಕ್ರವಾರ ಮತ್ತು ಅಮಾವಾಸ್ಯೆ ಪ್ರಯುಕ್ತ ದೇವರ ಮೂರ್ತಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಮತ್ತು ವಿವಿಧ ಪೂಜೆ ಪುನಸ್ಕಾರ ನಡೆಸಿ ನಂತರ ಕಡಲೆ ಕಾಯಿಯಿಂದ ವಿಶೇಷವಾಗಿ ಶೃಂಗರಿಸಿ, ಮಹಾ ಮಂಗಳಾರತಿ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
ಕನ್ನಡಪ್ರಭ ವಾರ್ತೆ ಹಲಗೂರು
ಬಸವನ ಬೆಟ್ಟದ ಮೇಲೆ ನೆಲೆಸಿರುವ ಶ್ರೀಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.ಸಾವಿರಾರು ಭಕ್ತರ ಆರಾಧ್ಯ ದೇವ ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕಡೆ ಶುಕ್ರವಾರ ಮತ್ತು ಅಮಾವಾಸ್ಯೆ ಪ್ರಯುಕ್ತ ದೇವರ ಮೂರ್ತಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಮತ್ತು ವಿವಿಧ ಪೂಜೆ ಪುನಸ್ಕಾರಗಳನ್ನು ನಡೆಸಿ ನಂತರ ಕಡಲೆ ಕಾಯಿಯಿಂದ ವಿಶೇಷವಾಗಿ ಶೃಂಗರಿಸಿ, ಮಹಾ ಮಂಗಳಾರತಿ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
ಅರ್ಚಕರಾದ ಬಸವರಾಜು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಹಾಗೂ ಮಳವಳ್ಳಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ದೇವರುಗಳ ಜಾತ್ರೆ, ಹಬ್ಬ ಹರಿದಿನ, ಕೊಂಡೋತ್ಸವ, ಬಂಡಿ ಉತ್ಸವ ನಡೆಯಬೇಕಾದರೆ ಆ ಗ್ರಾಮದವರು ಇಲ್ಲಿ ಬಂದು ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಅಪ್ಪಣೆ ಪಡೆಯುತ್ತಾರೆ ಎಂದರು.ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಲು ಬೇಡಿಕೊಂಡು ಒಬ್ಬಟ್ಟಿನ ಊಟ ಅಥವಾ ಕಜ್ಜಾಯ ತುಪ್ಪದ ಊಟ ಬಡಿಸಿದರೆ ಅವರ ಹರಕೆ ಈಡೇರುತ್ತದೆ ಎಂಬ ಪ್ರತೀತಿಯಿದೆ ಎಂದರು.
ಹಲಗೂರಿನ ವಿನಾಯಕ ಯುವಕ ಮಿತ್ರ ಮಂಡಳಿ ಎಚ್.ಎಂ.ರಾಕೇಶ್ ಮಾತನಾಡಿ, ಕಳೆದ 12 ವರ್ಷಗಳಿಂದ ಕಡೆ ಕಾರ್ತಿಕ ಮಾಸದ ದಿನ ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆಸಿ ಅನ್ನಸಂತರ್ಪಣೆ ನಡೆಸಲಾಗುತ್ತಿದೆ. ಅಮಾವಾಸ್ಯೆ ಅಂಗವಾಗಿ ಹೆಬ್ಬೆಟ್ಟದ ಶಿವಲಿಂಗ ಮತ್ತು ಬಸವೇಶ್ವರ ಸ್ವಾಮಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗಿದೆ ಎಂದರು.ಕಡೆ ಕಾರ್ತಿಕ ಶುಕ್ರವಾರ ಮುಗಿದ ನಂತರ ಭಾನುವಾರ ಅಮಾವಾಸ್ಯೆಯ ಪ್ರಯುಕ್ತ ಹಲಗೂರಿನ ಅರ್ಚಕರಾದ ಪ್ರಸಾದ್ ಅವರ ನೇತೃತ್ವದಲ್ಲಿ ಕಡಲೆ ಕಾಯಿಯಿಂದ ಸ್ವಾಮಿಗೆ ಸಿಂಗರಿಸಿ ಪೂಜೆ ಪುನಸ್ಕಾರಗಳನ್ನು ಮಾಡಿ ಬಂದ ಭಕ್ತರಿಗೆ ಪ್ರಸಾದ ನೀಡುತ್ತಿದ್ದೇವೆ ಎಂದರು .
ಈ ವೇಳೆ ಅರ್ಚಕರಾದ ವಿದ್ವಾಂಸ ಪ್ರಸಾದ್, ಕುಮಾರ್, ಬಸವರಾಜು ಹಾಗೂ ಹಲಗೂರು ವಿನಾಯಕ ಮಿತ್ರ ಮಂಡಳಿಯ ಸರ್ವ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸ್ವಾಮಿಗೆ ಪೂಜೆ ಸಲ್ಲಿಸುವ ವೇಳೆ ಹಲಗೂರಿನ ಅಘೋರ ಭದ್ರಕಾಳಿ ಶಕ್ತಿ ಪೀಠದ ಬಸವ ಸಹ ದೇವರ ದರ್ಶನ ಪಡೆಯಿತು. ನಂತರ ಬಸವನಿಗೂ ಪೂಜೆ ಸಲ್ಲಿಸಲಾಯಿತು.