ಸಾರಾಂಶ
ಈಗ ಎಲ್ಲಿ ನೋಡಿದರೂ ಅಣಬೆಗಳ ಸೀಜನ್
ಭೀಮಣ್ಣ ಗಜಾಪುರಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಈಗ ಅಣಬೆಗಳ ಸೀಜನ್. ನೈಸರ್ಗಿಕವಾಗಿ ನೂರಾರು ಜಾತಿಯ ಅಣಬೆಗಳು ಮಳೆಗಾಲದ ಈ ದಿನಗಳಲ್ಲಿ ತ್ಯಾಜ್ಯ ವಸ್ತುಗಳ ಮೇಲೆ ಕಾಣುತ್ತವೆ. ಆದರೆ ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಮಾತ್ರ ಸಿಗುವ ಅಪರೂಪದ ಶ್ವೇತ ವರ್ಣದ, ಒಂದು ಅಡಿಗಿಂತಲೂ ಹೆಚ್ಚು ಬೇರನ್ನು ಹೊಂದಿರುವ ಅಪರೂಪದ ಅಣಬೆಗಳು ಸಿಗುವುದು ಮಾತ್ರ ವಿರಳ. ಈ ಅಣಬೆಗಳ ಸಾಂಬಾರ ಮಾಡಿ ಊಟ ಮಾಡುವುದೆಂದರೆ ಈಗಲೂ ಗ್ರಾಮೀಣ ಭಾಗಗಳ ಜನತೆಗೆ ಅಚ್ಚುಮೆಚ್ಚು. ಅದರಲ್ಲೂ ಕಾಡಿನ ಅಣಬೆ ಹೆಚ್ಚು ರುಚಿಯಾಗಿರುತ್ತದೆ.ಅಣಬೆ ಸಸ್ಯಹಾರವಾಗಿದ್ದು, ಈಗಲೂ ದೂರದ ಕಾಡು, ಕಿಷ್ಕಿಂಧೆ ಪ್ರದೇಶದಲ್ಲಿ ಜನತೆ ಹುಡುಕಿ ತರುತ್ತಾರೆ. ನೈಸರ್ಗಿಕವಾಗಿ ಒಂದೇ ದಿನದಲ್ಲಿ ಪ್ರತ್ಯಕ್ಷವಾಗುವ ಅಣಬೆಗಳನ್ನು ಎರಡು ದಿನಗಳೊಳಗೆ ಕಿತ್ತು ಊಟ ಮಾಡದಿದ್ದಲ್ಲಿ ವ್ಯರ್ಥವಾಗುತ್ತವೆ. ಭೂಮಿಯಿಂದ ಹೊರಬಂದ ಅಣಬೆಗಳು ಮೊದಲು ಮಿಡಿಯಾಕಾರ (ಚಿಕ್ಕ ಗಾತ್ರ)ದಲ್ಲಿರುತ್ತವೆ. ಆಗಲೇ ಅದನ್ನು ಕೀಳದೇ ಹೋದರೆ ಮಾರನೇ ದಿನ ಛತ್ರಿಯ ಆಕಾರದಲ್ಲಿ ಅಂಗೈಯಗಲ ಹೂವಿನಂತೆ ಅರಳಿಕೊಳ್ಳುತ್ತವೆ. ಮನುಷ್ಯರ ಕಣ್ಣಿಗ ಬೀಳದಿದ್ದರೆ ಕಾಡಿಗೆ ಮೇಯಲು ಬಂದ ದನ ಕುರಿಗಳ ಪಾಲಾಗುತ್ತವೆ ಇಲ್ಲದಿದ್ದರೆ ಹುಳು, ಹುಪ್ಪಡಿಗಳ ಪಾಲಾಗುತ್ತವೆ.
ಊಟದ ಅಣಬೆ ಕಷ್ಟ:ಬೂಸ್ಟು, ಲೋಳೆ ಬೂಸ್ಟು ಎಂದು ವೈಜ್ಞಾನಿಕವಾಗಿ ಕರೆಯುವ ಈ ಅಣಬೆಗಳಲ್ಲಿ ನೂರಾರು ಪ್ರಬೇಧಗಳಿದ್ದು, ಇವುಗಳಲ್ಲಿ ಒಂದೆರಡು ಪ್ರಬೇಧ ಮಾತ್ರ ಊಟಕ್ಕೆ ಯೋಗ್ಯ. ಚರಂಡಿ, ಕೊಳಚೆ ಪ್ರದೇಶಗಳಲ್ಲಿ ಹುಟ್ಟುವ ಅಣಬೆಗಳು ವಿಷಪೂರಿತವಾಗಿದ್ದು, ಇವುಗಳು ಊಟಕ್ಕೆ ಯೋಗ್ಯವಲ್ಲ ಎಂದು ತಜ್ಞರು ಹೇಳುತ್ತಾರೆ.
ಒಂದೇ ಸ್ಥಳದಲ್ಲಿ ಗುಂಪುಗಟ್ಟಲೇ ನೈಸರ್ಗಿಕವಾಗಿಯೇ ಪ್ರತ್ಯಕ್ಷವಾಗುವ ಈ ಅಣಬೆಗಳು ತಲೆಯಾಕಾರದ ಅಣಬೆಯ ತಲೆ ಹಿಡಿದು ಗಟ್ಟಿಯಾಗಿ ಶಕ್ತಿಯಿಂದ ಕಿತ್ತರೇ ಅಡಿಗಟ್ಟಲೇ ಬೇರು ಬರುತ್ತದೆ. ಕೀಳುವಾಗ ಆ ಬೇರು ಸಲೀಸಾಗಿ ಅಣಬೆಯ ಜೊತೆಯಲ್ಲಿಯೇ ಬರುತ್ತದೆ, ಭೂಮಿ ಗಟ್ಟಿ ಆಗಿದ್ದರೆ ಬೇರು ಸ್ವಲ್ಪ ಕಟ್ ಆಗುತ್ತದೆ. ಇತರ ಅಣಬೆಗಳನ್ನು ಕೀಳುವಾಗ ಈ ರೀತಿಯ ಉದ್ದವಾದ ಬೇರು ಇರುವುದಿಲ್ಲ. ಶಕ್ತಿ ಉಪಯೋಗಿಸುವುದೇ ಬೇಡ, ಕೈ ತಾಗಿದರೆ ನೆಲಕ್ಕೆ ಉರಳುತ್ತವೆ ಇಂತಹ ಅಣಬೆಗಳು ವಿಷಪೂರಿತ ಎಂದೇ ತಿಳಿಯಬೇಕು.ಸಸ್ಯಹಾರಿಗಳ ಚಿಕನ್:
ಅಣಬೆಯಿಂದ ಸಾಂಬಾರ ಮಾಡಿ ಮುದ್ದೆ, ಅನ್ನದ ಜೊತೆಯಲ್ಲಿ ಊಟ ಮಾಡಿದವರಿಗೆ ಮಾತ್ರ ಗೊತ್ತು ಅದರ ರುಚಿ. ಚಿಕನ್, ಮಟನ್, ಮೀನಿನ ಸಾಂಬಾರಿನಲ್ಲಿ ಸಿಗುವುದಕ್ಕಿಂತಲೂ ಅಧಿಕ ವಿಟಮಿನ್, ಖನಿಜಾಂಶಗಳು ಈ ನೈಸರ್ಗಿಕ ಅಣಬೆಗಳಲ್ಲಿ ಸಿಗುತ್ತಿದ್ದು. ಇವುಗಳನ್ನು ಸಸ್ಯಹಾರಿಗಳ ಚಿಕನ್ ಎಂದರೆ ತಪ್ಪಾಗುವುದಿಲ್ಲ, ಅಣಬೆ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಗೆ ಪರಿಹಾರ, ದೇಹದ ಗಟ್ಟಿತನಕ್ಕೆ ಬೇಕಾದ ಅಂಶಗಳು ಸಿಗುತ್ತವೆ ಎನ್ನುತ್ತಾರೆ ವೈದ್ಯರು.ಅಣಬೆಗಳು ಸಿಗುವುದೇ ಅಪರೂಪ:ಮೊದಲೆಲ್ಲಾ ನಾವು ಅಣಬೆ ಹುಡುಕ್ಲಿಕ್ಕೇ ಅಡಿವಿಗೆ ಹೋಗ್ತಿದ್ವಿ. ಚೀಲಗಟ್ಟಲೇ ಅಣಬೆ ತರ್ತಿದ್ವಿ, ಆದ್ರೆ ಇತ್ತೀಚೆಗೆ ಯಾಕೋ ಅಣಬೆಗಳು ಅಷ್ಟೊಂದು ಸಿಗ್ತಿಲ್ಲ, ವರ್ಷದಿಂದ ವರ್ಷಕ್ಕೆ ಕಡಿಮೆಯಾಗ್ತಿವೆ. ಇತ್ತೀಚೆಗೆ ಜಮೀನುಗಳಲ್ಲಿ ಕೊಳವೆಬಾವಿ ನೀರಾವರಿ ಆಗಿ ಜಮೀನುಗಳಿಗೆ ರಾಸಾಯನಿಕ ಸುರಿಯುವುದರಿಂದ ಹೊಲಗಳಲ್ಲಿ ಅಣಬೆ ಸಿಗುವುದೇ ಅಪರೂಪವಾಗುತ್ತಿವೆ. ಅಡವಿಯಲ್ಲೂ ಅಷ್ಟಕ್ಕಷ್ಟೇ ಇವೆ, ಮಳೆನೂ ಅಷ್ಟಕ್ಕಷ್ಟೇ ಆಗುತ್ತೆ. ಹಾಗಾಗಿ ಅಣಬೆಗಳು ಸಿಗುವುದೇ ಅಪರೂಪ. ಇದಕ್ಕೆ ಪರಿಸರ ಹಾಳಾಗಿದ್ದೇ ಕಾರಣ ಎನ್ನುತ್ತಾರೆ ಗಜಾಪುರದ ರೈತ ಕೊಟ್ರೇಶ.