ಅನೇಕ ಕ್ಷೇತ್ರಗಳಲ್ಲಿ ವೇಗವಾಗಿ ಜಾರಿಯಾಗಿ, ಬಳಕೆಯಾಗುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಕೆಲವೇ ವ್ಯಕ್ತಿಗಳ ಶಕ್ತಿಯಾಗಿ ನಿಯಂತ್ರಿಸಲ್ಪಡುತ್ತದೆ ಎಂದು ಎಐ ನೌ ಇನ್‌ಸ್ಟಿಟ್ಯೂಟ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಅಂಬಾ ಕಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅನೇಕ ಕ್ಷೇತ್ರಗಳಲ್ಲಿ ವೇಗವಾಗಿ ಜಾರಿಯಾಗಿ, ಬಳಕೆಯಾಗುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಕೆಲವೇ ವ್ಯಕ್ತಿಗಳ ಶಕ್ತಿಯಾಗಿ ನಿಯಂತ್ರಿಸಲ್ಪಡುತ್ತದೆ ಎಂದು ಎಐ ನೌ ಇನ್‌ಸ್ಟಿಟ್ಯೂಟ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಅಂಬಾ ಕಕ್ ಆತಂಕ ವ್ಯಕ್ತಪಡಿಸಿದ್ದಾರೆ.ನಗರದ ಕಂಬೀಪುರದಲ್ಲಿರುವ ಕ್ವೆಸ್ಟ್ ಲರ್ನಿಂಗ್ ಅಬ್ಸರ್ವೇಟರಿಯಲ್ಲಿ ಮಂಗಳವಾರದಿಂದ ಆರಂಭವಾಗಿರುವ ಎರಡು ದಿನಗಳ ‘ಕ್ವೆಸ್ಟ್ ಟು ಲರ್ನಿಂಗ್’ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯನ ಕೆಲಸಗಳನ್ನು ಎಐ ಕಬಳಿಸುವುದೋ, ಇಲ್ಲವೋ ಚರ್ಚೆಯ ವಿಷಯ. ಆದರೆ, ಎಐ ಬಳಕೆ ಮಾಡಬೇಕು ಎನ್ನುವುದಕ್ಕೆ ಸಮರ್ಥನೆಗಳಿವೆ. ಈ ಹಿಂದೆ ಹೇಗೆ ಕೆಲವರ ಬಳಿ ಅಧಿಕಾರ, ಶಕ್ತಿ ಕೇಂದ್ರೀಕೃತವಾಗಿತ್ತೋ, ಅದೇ ರೀತಿ ಎಐ ಶಕ್ತಿ ಕೂಡ ಕೆಲವರ ಬಳಿ ಕೇಂದ್ರೀಕೃತವಾಗಿರುತ್ತದೆ. ಅದರಿಂದ ಯಾರು ಲಾಭ ಪಡೆಯುತ್ತಾರೆ? ಯಾರು ಹಾಗೆಯೇ ಉಳಿದುಕೊಳ್ಳುತ್ತಾರೆ ಎನ್ನುವುದು ಇನ್ನೂ ಪ್ರಶ್ನಾರ್ಹ ಎಂದರು.
ದೊಡ್ಡ ಸಂಖ್ಯೆಯ ಜನರಿಗೆ ಅನುಕೂಲವಾಗುವಂತಹ ಎಐ ಟೂಲ್‌ಗಳನ್ನು ಅಭಿವೃದ್ಧಿಪಡಿಸಬೇಕು. ಈ ವಿಚಾರದಲ್ಲಿ ಅನ್ಯ ದೇಶಗಳೊಂದಿಗೆ ಭಾರತ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ನಮ್ಮ ಅಗತ್ಯತೆಗಳು ಏನಿದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಎಐ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಅಂಬಾ ಹೇಳಿದರು.ಇನ್ನೋವೇಟಿವ್ ಲರ್ನಿಂಗ್ ಫ್ಯೂಚರ್ಸ್‌ನ ನಿರ್ದೇಶಕ ಪುಣ್ಯ ಮಿಶ್ರಾ ಮಾತನಾಡಿ, ಭವಿಷ್ಯದ ಕುರಿತು ಗೊತ್ತು ಗುರಿ ಇಲ್ಲದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಸೀಮಿತ ಅವಕಾಶಗಳನ್ನು ಹೊಂದಿದೆ. ಭವಿಷ್ಯ ಹೀಗೆಯೇ ಇರುತ್ತದೆ, ಹೀಗೆಯೇ ಒದಿಕೊಳ್ಳಬೇಕು ಎನ್ನುವುದನ್ನು ಹಳೇ ಶಿಕ್ಷಣ ಪದ್ಧತಿ ಆಧರಿಸಿದೆ. ಆದರೆ, ಇಂದಿನ ಕಾಲಕ್ಕೆ ಅದು ಅಪ್ರಸ್ತುತ. ಈಗ ಬೇಕಿರುವುದು ಕ್ರಿಯಾಶೀಲತೆ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ, ಪ್ರಯೋಗಶೀಲತೆ ಎಂದರು.
ಸಮ್ಮೇಳನದ ಮೊದಲ ದಿನ ಯುವ ಜನರು ರಚಿಸಿರುವ ‘ಯುತ್ ಎಐ ಚಾರ್ಟರ್’ ಅನ್ನು ಮಂಡಿಸಲಾಯಿತು. ಡೆಟಾ ಹಕ್ಕುಗಳು, ಮಾಲೀಕತ್ವ ಮತ್ತು ಎಐ ವಲಯದಲ್ಲಿ ಯುವ ಸಮುದಾಯದ ಪಾತ್ರದ ಕುರಿತು ಚರ್ಚಿಸಲಾಯಿತು. ಸಮ್ಮೇಳನದಲ್ಲಿ ಕ್ವೆಸ್ಟ್ ಅಲಯನ್ಸ್ ಸಿಇಒ ಆಕಾಶ ಸೇಠಿ ಮತ್ತಿತರರು ಉಪಸ್ಥಿತರಿದ್ದರು.