ಮರದ ಅಂಬಾರಿ ಹೊತ್ತ ಪ್ರಶಾಂತ ಮತ್ತು ಕಂಜನ್

| Published : Sep 25 2024, 12:46 AM IST

ಸಾರಾಂಶ

ಅರಮನೆಯಿಂದ ಹೊರಟಾಗ ಪ್ರಶಾಂತ ಆನೆ ಮೈಮೇಲೆ ಮರದ ಅಂಬಾರಿ ಹೊರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆಗೆ ಮರದ ಅಂಬಾರಿ ಹೊರಿಸುವ ತಾಲೀಮು ಮಂಗಳವಾರ ಸಹ ಮುಂದುವರೆಯಿತು. ಪ್ರಶಾಂತ ಮತ್ತು ಕಂಜನ್ ಆನೆಗಳ ಮೈಮೇಲೆ ಮರದ ಅಂಬಾರಿಯನ್ನು ಹೊರಿಸಿ ತಾಲೀಮು ನಡೆಸಲಾಯಿತು. ಅರಮನೆಯಿಂದ ಹೊರಟಾಗ ಪ್ರಶಾಂತ ಆನೆ ಮೈಮೇಲೆ ಮರದ ಅಂಬಾರಿ ಹೊರಿಸಲಾಯಿತು. ಬನ್ನಿಮಂಟಪದಿಂದ ವಾಪಸ್ ಬರುವಾಗ ಕಂಜನ್ ಆನೆಯ ಮೇಲೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು. ಮರದ ಅಂಬಾರಿ ಹೊತ್ತ ಪ್ರಶಾಂತ ಮತ್ತು ಕಂಜನ್ ಆನೆಯೊಂದಿಗೆ ಕುಮ್ಕಿ ಆನೆಗಳಾಗಿ ಲಕ್ಷ್ಮಿ ಮತ್ತು ಹಿರಣ್ಯಾ ಸಾಗಿದವು. ಜೊತೆಗೆ ಅಂಬಾರಿ ಆನೆ ಅಭಿಮನ್ಯು, ಧನಂಜಯ, ಮಹೇಂದ್ರ ಗೋಪಿ, ಭೀಮ, ರೋಹಿತ್, ಏಕಲವ್ಯ, ಸುಗ್ರೀವ ಮತ್ತು ದೊಡ್ಡಹರವೆ ಲಕ್ಷ್ಮಿ ಸಾಲಾನೆಗಳಾಗಿ ಸಾಗಿದವು. ವರಲಕ್ಷ್ಮಿ ಆನೆಯು ಬಿಡಾರದಲ್ಲಿ ಉಳಿದಿತ್ತು.

ಅರಮನೆ ಆವರಣದಿಂದ ಹೊರಟ ಗಜಪಡೆಯು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್ ಎಂಸಿ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪಕ್ಕೆ ತಲುಪಿದವು. ನಂತರ ಅದೇ ಮಾರ್ಗವಾಗಿ ವಾಪಸ್ ಅರಮನೆಗೆ ಬಂದು ಸೇರಿದವು. ಅರಮನೆ ಆವರಣದಲ್ಲೂ ಒಂದು ಸುತ್ತು ತಾಲೀಮು ನಡೆಸಲಾಯಿತು.