ಸಿನಿಮಾ, ರಾಜಕೀಯದಲ್ಲಿ ಅಜಾತಶತ್ರುವಾಗಿದ್ದ ಅಂಬರೀಶ್

| Published : Nov 25 2024, 01:00 AM IST

ಸಾರಾಂಶ

ನಟನಾಗಿ ಸದಭಿರುಚಿಯ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದ ಅಂಬರೀಶ್, ರಾಜಕೀಯ ಪ್ರವೇಶಿಸಿ ಸಂಸದರ ನಿಧಿಯನ್ನು ಮೊದಲ ಬಾರಿಗೆ ಜನರಿಗೆ ತೋರಿಸಿಕೊಟ್ಟರು. ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ಅಂಬರೀಶ್ ಅಜಾತಶತ್ರುವಾಗಿದ್ದರು. ಸಂಸದರು, ಶಾಸಕರು, ಸಚಿವರಾಗಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದ ಅಂಬರೀಶ್ ಅವರು ಎಲ್ಲರ ಮನಸ್ಸಿನಲ್ಲೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ದಿವಂಗತ ಅಂಬರೀಷ್ ಅವರ ಆರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳು ಅಂಬರೀಷ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ನಟನಾಗಿ ಸದಭಿರುಚಿಯ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದ ಅಂಬರೀಶ್, ರಾಜಕೀಯ ಪ್ರವೇಶಿಸಿ ಸಂಸದರ ನಿಧಿಯನ್ನು ಮೊದಲ ಬಾರಿಗೆ ಜನರಿಗೆ ತೋರಿಸಿಕೊಟ್ಟರು. ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದರು ಎಂದರು.

ಅಂಬರೀಷ್ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಮಂಡ್ಯ ನಗರದ ಮಮತೆಯ ಮಡಿಲು ಮೂಲಕ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಅನ್ನಸಂತರ್ಪಣೆ, ಗಣಂಗೂರು ಗೇಟ್ ಬಳಿ ಕುಸ್ತಿ ಪಂದ್ಯಾವಳಿ, ದೊಡ್ಡರಸಿನಕೆರೆಯಲ್ಲಿ ಪೂಜಾ ಕಾರ್ಯಕ್ರಮ ಸೇರಿದಂತೆ ಜಿಲ್ಲೆಯಾದ್ಯಂತ ಅಭಿಮಾನಿಗಳು ವಿವಿಧ ಸಮಾಜಮುಖಿ ಕಾರ್ಯಕ್ರಮ ನೆಡೆಸುತ್ತಿದ್ದಾರೆ ಎಂದರು.

ಈ ವೇಳೆ ಮಮತೆಯ ಮಡಿಲು ಸಂಸ್ಥೆಯ ಎಂ.ಯೋಗೇಶ್, ಕೆ.ಪಿ.ಅರುಣ ಕುಮಾರಿ, ಅಂಬರೀಷ್ ಅಭಿಮಾನಿ ಹನಗನಹಳ್ಳಿ ರಾಜು, ಶ್ರೀಧರ್, ಹರೀಶ್ ಇತರರಿದ್ದರು.