ಒಳಮೀಸಲು ಹೋರಾಟಗಾರನ ಕಾಳಜಿಗಳಿಗೆ ಪ್ರಶಸ್ತಿ ಗರಿಮೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒಳಮೀಸಲಾತಿಗಾಗಿ ಚಿತ್ರದುರ್ಗದಲ್ಲಿ ಮೊದಲ ಹೋರಾಟಗಾರರಾಗಿ ಗುರುತಿಸಿಕೊಂಡು ಬೀದಿಗಿಳಿದು ಹೋರಾಟ ಕಟ್ಟಿದ ಮೊದಲ ಪಂಕ್ತಿಯ ನಾಯಕರಲ್ಲಿ ಒಬ್ಬರಾದ ಹುಲ್ಲೂರು ಕುಮಾರಸ್ವಾಮಿ ಅವರು ಈ ಬಾರಿ ಚಿತ್ರದುರ್ಗ ಜಿಲ್ಲಾಡಳಿತ ನೀಡುವ ಅಂಬೇಡ್ಕರ್ ಪ್ರಶಸ್ತಿಗೆ ಬಾಜನರಾಗಿದ್ದಾರೆ.ಏ.5.1964ರಲ್ಲಿ ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ದುರುಗಪ್ಪ ದುರುಗಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರು ಪದವಿಯವರೆಗೂ ವಿದ್ಯಾಭ್ಯಾಸ ಮಾಡಿ, ಕಾಲೇಜು ದಿನಗಳಲ್ಲಿ ದಲಿತ ಚಳವಳಿಗೆ ಬಂದು ಸುಮಾರು ವರ್ಷಗಳ ಕಾಲ ದಲಿತ ಸಂಘರ್ಷ ಸಮಿತಿಯ ವಿವಿಧ ಹಂತದ ಹೋರಾಟಗಳಲ್ಲಿ ಹೆಜ್ಜೆ ಹಾಕಿದವರು.
1998ರಲ್ಲಿ ಮಾದಿಗ ದಂಡೋರದ ಮೂಲಕ ಒಳಮೀಸಲಾತಿ ಹೋರಾಟಕ್ಕೆ ಧುಮುಕಿದರು. ಸುಮಾರು ಮೂರುವರೆ ದಶಕಗಳ ಕಾಲ ಚಳುವಳಿಯಲ್ಲಿ ಸಕ್ರಿಯರಾಗಿರುವ ಇವರು ಅತ್ಯಂತ ಸರಳ ಜೀವನ ಶೈಲಿಯನ್ನು ರೂಢಿಸಿಕೊಂಡು ಇಂದಿಗೂ ಒಳಮೀಸಲಾತಿ ಹೋರಾಟದ ಮಂಚೂಣಿಯಲ್ಲಿದ್ದಾರೆ. ಹಲಗೆ ಹೊಡೆಯುತ್ತಲೇ ಹೋರಾಟದ ಹಾಡುಗಳಿಗೆ ದನಿಯಾಗುವ ಕುಮಾರಸ್ವಾಮಿ ಚಿತ್ರದುರ್ಗ ನೆಲದ ಅಪರೂಪದ ಹೋರಾಟಗಾರ.ಇಂತಹ ತಳಸಮುದಾಯಗಳ ವ್ಯಕ್ತಿಗೆ ಅಂಬೇಡ್ಕರ್ ಪ್ರಶಸ್ತಿ ಲಭಿಸಿರುವುದು ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟದ ಬದುಕಿನ ಮಾರ್ಗಕ್ಕೆ ಮಾದರಿಯಾಗಿದೆ.
ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇನ್ನೇನು ಜಾರಿ ಮಾಡಿಯೇ ಬಿಟ್ಟಿತು ಎಂಬ ಹೊತ್ತಿನಲ್ಲಿ ಉಪ ಚುನಾವಣೆಯ ನೀತಿ ಸಂಹಿತೆ ಎದುರಾಯಿತು. ಆದ್ದರಿಂದ ಒಳಮೀಸಲಾತಿ ನೆನೆಗುದಿಗೆ ಬಿದ್ದಿದೆ. ಜಿಲ್ಲಾ ಅಂಬೇಡ್ಕರ್ ಪ್ರಶಸ್ತಿಗೆ ಬಾಜನರಾಗಿರುವ ಹುಲ್ಲೂರು ಕುಮಾರಸ್ವಾಮಿ ಅವರನ್ನು ಕನ್ನಡಪ್ರಭ ಮಾತನಾಡಿಸಿದಾಗ ಜಿಲ್ಲಾಡಳಿತ ನೀಡಿರುವ ಅಂಬೇಡ್ಕರ್ ಪ್ರಶಸ್ತಿ ಲಭಿಸಿರುವುದು ಸಂತೋಷ ತಂದಿದೆ. ಇದು ನನ್ನೆಲ್ಲಾ ಹೋರಾಟದ ಸಂಗಾತಿಗಳಿಗೆ ಅರ್ಪಿಸುವೆ. ಉಪ ಚುನಾವಣೆ ಫಲಿತಾಂಶ ಬಂದ ನಂತರ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲವಾದರೆ ಮುಂದಿನ ಮೇ14ರ ಒಳಗಾಗಿ ಸರ್ಕಾರ ನಿರ್ಧಾರ ಕೈಗೊಳ್ಳದೇ ಹೋದರೆ ಪ್ರಶಸ್ತಿ ವಾಪಾಸು ಮಾಡುವುದಾಗಿ ಹೇಳಿದರು.