ಸಾರಾಂಶ
ಹಳಿಯಾಳ: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಭಾರತಮಾತೆಯ ಹೆಮ್ಮೆಯ ಪುತ್ರರು, ಇವರ ತತ್ವ ಚಿಂತಣೆಗಳನ್ನು ನಾವು ವಿಶ್ವಕ್ಕೆ ಸಾರಬೇಕಾಗಿದೆ, ಇವರ ಬದುಕು ಹಾಗೂ ಬೋಧನೆಗಳು ನಮಗೆಲ್ಲರಿಗೆ ಪ್ರೇರಣೆಯಾಗಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿಯಿಂದ (ಭೀಮವಾದ) ಆಯೋಜಿಸಿದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ರಾಜ್ಯಮಟ್ಟದ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನದ ಬಲದಿಂದಲೇ ದೇಶದ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ. ಹಸಿರು ಕ್ರಾಂತಿಯ ಶಿಲ್ಪಿ ಬಾಬೂಜಿಯವರು ದೇಶಕ್ಕಾಗಿ ಮಾಡಿದ ಸೇವೆ ನೀಡಿದ ಕೊಡುಗೆಯನ್ನು ಸ್ಮರಿಸಲು ಹೆಮ್ಮೆಯೆನ್ನಿಸುತ್ತಿದೆ ಎಂದರು.ದೇಶ ಸ್ವಾತಂತ್ರ್ಯ ಗಳಿಸಿ ಏಳು ದಶಕಗಳಾಗುತ್ತಾ ಬಂದರೂ ಇನ್ನೂವರೆಗೆ ನಮಗೆ ಬಡತನ, ನಿರುದ್ಯೋಗ ಮತ್ತು ಅನಕ್ಷರತೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಆಗಲಿಲ್ಲ ಎಂದರು. ಆದಷ್ಟು ಚಿಕ್ಕದಾದ ಚೊಕ್ಕದಾದ ಕುಟುಂಬ ರಚನೆಗೆ ಆದ್ಯತೆ ನೀಡಿ, ಎರಡೇ ಮಕ್ಕಳಿರಲಿ. ಆದರೆ ಅವು ಬಂಗಾರದಂತಹ ಮಕ್ಕಳಿರಲಿ, ಕುಟುಂಬ ಚಿಕ್ಕದಿದ್ದರೆ ಮಕ್ಕಳ ಬೇಕು ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯ ಎಂದರು.
ಸಮೀಕ್ಷಾ ಕಾರ್ಯಕ್ಕೆ ಸಹಕರಿಸಿರಿ:ರಾಜ್ಯ ಸರ್ಕಾರವು ಆರಂಭಿಸಿರುವ ಪರಿಶಿಷ್ಟ ವರ್ಗದವರ ಸಮೀಕ್ಷಾ ಕಾರ್ಯದಲ್ಲಿ ಎಲ್ಲ ಪರಿಶಿಷ್ಟ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ನಿಮ್ಮ ಹೆಸರನ್ನು ದಾಖಲಿಸಿರಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು. ಸಮೀಕ್ಷೆಯ ಸಮಯದಲ್ಲಿ ಕೇಳುವ ಮಾಹಿತಿಗೆ ಸಮರ್ಪಕವಾಗಿ ಉತ್ತರಿಸಿ, ನೀವು ನೀಡಿದ ಮಾಹಿತಿಯ ಆದಾರದ ಮೇಲೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಸಾಧ್ಯವಾಗಲಿದೆ ಎಂದರು.
ನಿತ್ಯ ನಿರಂತರ ವಿಚಾರಧಾರೆ ಪಾಲನೆ:ವಿಪ ಸದಸ್ಯ ಶಾಂತಾರಾಮ ಸಿದ್ಧಿ ಮಾತನಾಡಿ, ದೇಶದ ಪ್ರಜಾವ್ಯವಸ್ಥೆಗೆ ಭದ್ರ ಬುನಾದಿಯನ್ನು ಕಲ್ಪಿಸುವಂತಹ ಸಂವಿಧಾನವನ್ನು ನೀಡಿರುವ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಬಗ್ಗೆ ಮಾತನಾಡಲು ಅವರ ವಿಚಾರಧಾರೆಯನ್ನು ಅವಲೋಕನ ಮಾಡಲು ನಮಗೆ ಹೆಮ್ಮೆ ಗೌರವ ಎನ್ನಿಸುತ್ತಿದೆ ಎಂದರು. ಅವರ ವಿಚಾರಧಾರೆಯ ಅವಲೋಕನ ಆಚರಣೆಯ ದಿನಕ್ಕಷ್ಟೇ ಸೀಮತವಾಗಿರಸದೇ ನಿತ್ಯವು ದೈನಂದಿನ ಬದುಕಿನಲ್ಲಿ ಪಾಲಿಸಿದರೆ ನಮ್ಮ ಜೀವನವು ಯಶಸ್ವಿಯಾಗುವುದು ಎಂದರು.
ಗುರುಮಾತಾ ನಂದಾತಾಯಿ ಕಾರ್ಯಕ್ರಮದ ಸಾನಿಧ್ಯ ವಹಿಸಿದರು. ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಚಂದ್ರಕಾಂತ ಕಲಬಾವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಸ್ಥಾಪಕ ಬಿ.ಎನ್.ವೆಂಕಟೇಶ್, ಹಾಗೂ ರಾಜ್ಯ ಕೋರ್ ಸಮಿತಿಯ ಅಧ್ಯಕ್ಷ ಸಿದ್ಧಾರ್ಥ ನಿಂಗೆ, ಚಿದಾನಂದ ಹರಿಜನ, ಹಳಿಯಾಳ ಪುರಸಭೆಯ ಅಧ್ಯಕ್ಷೆ ದ್ರೌಪದಿ ಅಗಸರ ಹಾಗೂ ಪುರಸಭೆಯ ಸದಸ್ಯ ಅಜರ್ ಬಸರಿಕಟ್ಟಿ, ಉದ್ಯಮಿ ಸುಭಾನಿ ಗೋರಿಖಾನ ಹಾಗೂ ಹಾಗೂ ದಲಿತ ಮುಖಂಡರು ಇದ್ದರು.
ಕನ್ನಡ ಉಪನ್ಯಾಸಕ ಶಿಕ್ಷಣ ಚಿಂತಕ ಶಾಂತಾರಾಮ ಚಿಬುಲಕರ ಕಾರ್ಯಕ್ರಮ ನಿರ್ವಹಿಸಿದರು.