ಅಂಬೇಡ್ಕರ್‌, ಬಸವಣ್ಣರ ತತ್ವದಿಂದ ಸಂವಿಧಾನ ರಚನೆ

| Published : Feb 22 2024, 01:47 AM IST

ಸಾರಾಂಶ

ಡಾ.ಬಿ.ಆರ್ ಅಂಬೇಡ್ಕರ್, ಬುದ್ದ ,ಬಸವಣ್ಣರ ತತ್ವ, ಸಿದ್ಧಾಂತಗಳನ್ನಾಧರಿಸಿ ದೇಶದ ಸಂವಿಧಾನ ರಚನೆ ಮಾಡಿರುತ್ತಾರೆ ಎಂದು ಅರಸೀಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬೈರಪ್ಪ ಹೇಳಿದರು. ಅರಸೀಕೆರೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಕಾಲೇಜಿನ ಉಪನ್ಯಾಸಕ ಬೈರಪ್ಪ । ರಾಂಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಅರಸೀಕೆರೆ

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಂವಿಧಾನವೂ ಎಲ್ಲರಿಗೂ ಒಳಿತನ್ನು ಉಂಟು ಮಾಡಿದೆ. ಡಾ.ಬಿ.ಆರ್ ಅಂಬೇಡ್ಕರ್, ಬುದ್ದ ,ಬಸವಣ್ಣರ ತತ್ವ, ಸಿದ್ಧಾಂತಗಳನ್ನಾಧರಿಸಿ ದೇಶದ ಸಂವಿಧಾನ ರಚನೆ ಮಾಡಿರುತ್ತಾರೆ ಎಂದು ಅರಸೀಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬೈರಪ್ಪ ಹೇಳಿದರು

ತಾಲೂಕಿನ ರಾಂಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಕಟ್ಟಕಡೆಯ ಪ್ರಜೆಗೂ ಸಮಾನ ನ್ಯಾಯ ದೊರಕಿಸುತ್ತದೆ. ೧೯೪೯ ನೆಯ ಇಸವಿ ನವೆಂಬರ್ ತಿಂಗಳ ೨೬ನೆಯ ತಾರೀಖಿನಂದು ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ. ಯಾವುದೇ ವ್ಯಕ್ತಿಯಾಗಲೀ ಕಾನೂನು ಒಳಗೊಂಡಂತೆ ಎಲ್ಲಾ ತರಹದ ವ್ಯವಹಾರವನ್ನು ಮಾಡಬೇಕು. ಕಾನೂನಿಗೆ ಬದ್ಧತೆ ಇರಬೇಕು. ಬಡವ, ಶ್ರೀಮಂತರಿಗೆ ಒಂದೇ ಕಾನೂನು, ಅಧಿಕಾರ ಹಸ್ತಾಂತರದಲ್ಲೂ ಪ್ರಜಾಪ್ರಭುತ್ವದಲ್ಲಿ ಬಹಳ ಸುಲಭವಾಗಿ ಹಸ್ತಾಂತರ ಆಗುತ್ತದೆ. ಯಾವುದೇ ಜನಾಂಗದವರೂ ಬಡವ ಶ್ರೀಮಂತನೂ ಕೂಡ ಕಾನೂನು ಬದ್ಧತೆಯಿಂದ ಅಧಿಕಾರ ನಡೆಸಬಹುದು ಎಂದರು.

ಕಾನೂನಿಗೆ ಧಕ್ಕೆ ಬಾರದ ಹಾಗೆ ಎಲ್ಲಾ ತರಹದ ವ್ಯವಹಾರವನ್ನೂ ನಡೆಸಬೇಕು. ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಮನೆಯಲ್ಲಿ ಹಾಕಿಕೊಳ್ಳಬೇಕು. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟು ಸಮಾಜಮುಖಿಯಾಗಿ ಬೆಳೆಸಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಣಾವಾರ ಮಂಜುನಾಥ್ ಮಾತನಾಡಿ, ಸರ್ವರಿಗೂ ಸಮಾನತೆ, ವಾಕ್ ಸ್ವಾತಂತ್ರ್ಯ ಇದೆ ಎನ್ನುವುದಾದರೆ ಅದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ಬುನಾದಿ ಹಾಕಿ ಭಾರತ ದೇಶಕ್ಕೆ ಅರ್ಥಪೂರ್ಣ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.

ಸಂವಿಧಾನ ಜಾಗೃತಿ ಜಾಥಾ ರಥ ರಾಂಪುರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅದ್ಧೂರಿಯಾಗಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೇದಾವತಿ ಹಾಗೂ ಗ್ರಾಪಂ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಸ್ವಾಗತಿಸಿದರು. ವಿಶೇಷವೇನೆಂದರೆ ಭಜನಾ ಸಂಘದವರು ಸಂವಿಧಾನ ಕುರಿತು ಪದ ಕಟ್ಟಿ ಹಾಡುಗಳನ್ನು ಹಾಡಿ ಈ ಕಾರ್ಯಕ್ರಮದಲ್ಲಿ ನೆರೆದಿದ್ದ ಗ್ರಾಮಸ್ಥರನ್ನು ಪುಳಕಿತಗೊಳಿಸಿದರು.

ಶಾಲಾ ಮಕ್ಕಳಿಂದ ಡಾ.ಬಿ.ಆರ್. ಅಂಬೇಡ್ಕರ್, ವೇಷಭೂಷಣ, ಅಂಬೇಡ್ಕರ್ ಬಗ್ಗೆ ಗೀತೆಗಳನ್ನು ಹಾಡಿದರು. ನೋಡಲ್ ಅಧಿಕಾರಿ ಕೃಷ್ಣೇಗೌಡ, ದಲಿತ ಮುಖಂಡ ಮೂಡಲಪ್ಪ, ಸಮಾಜ ಕಲ್ಯಾಣ ಇಲಾಖೆಯ ಕುಮಾರಿ ರತ್ನ, ಕಾರ್ಯಕ್ರಮದ ರುವಾರಿ ಶಿಕ್ಷಕರಾದ ಆರ್.ಎಮ್. ಪ್ರಕಾಶ್, ಬಿ.ಎಸ್ ಓಂಕಾರಪ್ಪ, ಎಚ್.ಕೆ ರಾಜಶೇಖರ್, ಬಿ.ಆರ್.ಪಿ ಮಲ್ಲಿಕಾರ್ಜುನಪ್ಪ, ಸಿ.ಆರ್.ಪಿ ಮಧು, ಆರ್.ಎಸ್ ನಟರಾಜು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬೈರಪ್ಪ ಮಾತನಾಡಿದರು.