ಡಾ.ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತ: ಹೋರಾಟ ನಿರ್ಧಾರ

| Published : Aug 12 2024, 01:08 AM IST

ಡಾ.ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತ: ಹೋರಾಟ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್‌ ಭವನದ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ವಿರುದ್ಧ ಹೋರಾಟ ನಡೆಸಲು ದಲಿತ ಸಂಘಟನೆಗಳು ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಹೆಸರಿನಲ್ಲಿ ಶನಿವಾರಸಂತೆ ಹೋಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್‌ ಭವನದ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಹೋರಾಟ ನಡೆಸಲು ದಲಿತ ಸಂಘಟನೆಗಳು ನಿರ್ಧರಿಸಿವೆ.

ಡಾ. ಅಂಬೇಡ್ಕರ್ ಭವನದ ನಿರ್ಲಕ್ಷ್ಯದ ಕುರಿತು ಭಾನುವಾರ ಶನಿವಾರಸಂತೆಯ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ದಲಿತ ಸಂಘರ್ಷ ಸಮಿತಿಯ ಮುಖಂಡರು ಅಪೂರ್ಣಗೊಂಡಿರುವ ಭವನ ಪಾಳುಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನವನ್ನು ರಚಿಸಿ ಇಡೀ ದೇಶಕ್ಕೆ ಪ್ರೇರಣೆಯಾದ ಮಹಾನಾಯಕನ ಹೆಸರಿನ ಯೋಜನೆಯೊಂದು ಪೂರ್ಣಗೊಳ್ಳದೆ ಕಾಡು ಪಾಲಾಗಿರುವುದು ಖಂಡನೀಯ. ಆಮೆಗತಿಯ ಕಾಮಗಾರಿಯ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಶಾಸಕರ ಬಳಿ ದೂರಿಕೊಂಡಿದ್ದಾಗ ಉತ್ತಮ ಸ್ಪಂದನೆ ದೊರೆತು ಶೀಘ್ರ ಯೋಜನೆ ಪೂರ್ಣಗೊಳ್ಳುತ್ತದೆ ಎನ್ನುವ ವಿಶ್ವಾಸ ಮೂಡಿತ್ತು. ಆದರೆ ಎರಡು ವರ್ಷ ಕಳೆದರೂ ಭವನದ ಕಾಮಗಾರಿ ಪೂರ್ಣಗೊಂಡಿಲ್ಲ. ಈ ನಿರ್ಲಕ್ಷ್ಯದ ಮನೋಭಾವ ಇಡೀ ದಲಿತ ಸಮುದಾಯಕ್ಕೆ ನೋವನ್ನುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಾ. ಅಂಬೇಡ್ಕರ್ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟ ಪ್ರಮುಖರು, ಮೊದಲು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಲು ನಿರ್ಣಯ ಕೈಗೊಂಡರು.

ಡಾ. ಅಂಬೇಡ್ಕರ್ ಭವನ ಸಮಿತಿಯ ಉಪಾಧ್ಯಕ್ಷ ವಿ. ಸಂದೀಪ್, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಶಿವಕುಮಾರ್, ಲೋಕೇಶ್, ದೇವರಾಜ್, ಸೋಮೇಶ್, ರಾಮಯ್ಯ, ಧರ್ಮ, ವೆಂಕಟಯ್ಯ, ಶಿವಣ್ಣ, ಕುಶಾಲ್, ಪ್ರದೀಪ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು.