ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಗ್ರಾಪಂ ವ್ಯಾಪ್ತಿಯ ಹೊಂಗಹಳ್ಳಿ ಅಂಬೇಡ್ಕರ್ ಭವನ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯುವಂತೆ ಆದೇಶಿಸಿರುವ ತಾಪಂ ಇಒ ಕ್ರಮ ಖಂಡಿಸಿ ಗ್ರಾಮಸ್ಥರು, ದಲಿತ ಮುಖಂಡರು ಪಟ್ಟಣದ ತಾಪಂ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಹುಲಿಕೆರೆ ಗ್ರಾಪಂ ವ್ಯಾಪ್ತಿಯ ಹೊಂಗಹಳ್ಳಿ ಅಂಬೇಡ್ಕರ್ ಭವನ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯುವಂತೆ ಆದೇಶಿಸಿರುವ ತಾಪಂ ಇಒ ಕ್ರಮ ಖಂಡಿಸಿ ಗ್ರಾಮಸ್ಥರು, ದಲಿತ ಮುಖಂಡರು ಪಟ್ಟಣದ ತಾಪಂ ಎದುರು ಪ್ರತಿಭಟನೆ ನಡೆಸಿದರು.

2025-26ನೇ ಸಾಲಿನ ವರ್ಗ 2ರಲ್ಲಿ ಹುಲಿಕೆರೆ ಗ್ರಾಪಂನ ಹೊಂಗಹಳ್ಳಿಯಲ್ಲಿ 6 ಲಕ್ಷರು. ವೆಚ್ಚದ ಅಂಬೇಡ್ಕರ್ ಭವನ ಅಭಿವೃದ್ಧಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆಯಾಗಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ ಅಧಿಕಾರಿಗಳಿಂದ ಕ್ರಿಯಾ ಯೋಜನೆ ಸಹ ಬಿಡುಗಡೆಯಾಗಿದೆ ಎಂದರು.

ಈ ಎಲ್ಲಾ ಪ್ರಕ್ರಿಯೆಗಳು ನಡೆದ ನಂತರ ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಹ ತಾಪಂ ಇಒ ಅವರು ಅನಗತ್ಯವಾಗಿ ಎಇಇ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಪತ್ರ ಬರೆದು ವರ್ಗ-2 ಕಾಮಗಾರಿಗಳನ್ನು ಮುಂದಿನ ಆದೇಶದ ವರೆಗೆ ತಡೆ ಹಿಡಿಯುವಂತೆ ಸೂಚಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕಳೆದ ಜ.17ರಂದು ಆದೇಶವಾಗಿ 10 ದಿನಗಳು ಸಹ ಕಳೆದಿಲ್ಲ. ಅಲ್ಲದೇ, ಈವರೆವಿಗೂ ಯಾವುದೇ ಕಾಮಗಾರಿಗಳು ಸಹ ಪ್ರಾರಂಭವಾಗಿಲ್ಲ. ಆದರೂ ಕಾಮಗಾರಿ ತಡೆಹಿಡಿಯುವಂತೆ ಸೂಚಿಸಿರುವುದರ ಹಿಂದೆ ಇಒ ದುರುದ್ದೇಶ ಹೊಂದಿದ್ದಾರೆ. ಅಲ್ಲದೇ, ಗ್ರಾಮದ ಕಾಲೋನಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ನಿವಾಸಿಗಳಿಗೆ ಯಾವುದೇ ಸೌವಲತ್ತು ಸಿಗಬಾರದು ಹಾಗೂ ಅಂಬೇಡ್ಕರ್ ಭವನ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಈ ಕ್ರಿಯಾ ಯೋಜನೆ ತಡೆ ಹಿಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಅಹೋರಾತ್ರಿ ಪ್ರತಿಭಟನೆ ಮುಂದಾದರು.

ನಂತರ ತಾಪಂ ಇಒ ವೇಣಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಬರೆದಿದ್ದ ಪತ್ರವನ್ನು ಹಿಂಪಡೆದು ವರ್ಗ-2 ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ತಾಲೂಕು ಜಾಗೃತ ಸಮಿತಿ ಮಾಜಿ ಸದಸ್ಯ ಮಹದೇವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಕೆ.ಶಟ್ಟಹಳ್ಳಿ ಸುರೇಶ್, ರೈತ ಮುಖಂಡ ದೊಡ್ಡೇಗೌಡನ ಕೊಪ್ಪಲು ಪಾಂಡು, ಮರಳಗಾಲ ಸುರೇಶ್ ಸೇರಿದಂತೆ ಇತರರು ಹಲವರು ಹಾಜರಿದ್ದರು.