ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮ
ಮಂಗಳೂರು: ದೇಶಕ್ಕೆ ಸಂವಿಧಾನ ಕೊಟ್ಟ ಮಹಾಪುರುಷ ಡಾ.ಬಿ.ಆರ್.ಅಂಬೇಡ್ಕರ್. ನಮ್ಮಂತಹ ಸಾಮಾನ್ಯರು ಕೂಡ ಶಾಸಕರು, ಸಂಸದರು, ಅಧಿಕಾರಿಯಾಗಿ ಅಧಿಕಾರದಲ್ಲಿರುವ ಅಂಬೇಡ್ಕರ್ ಅವರ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಅವರ ಸಂವಿಧಾನ ಸಮಾಜದಲ್ಲಿ ಸಮಾನತೆಯನ್ನು ಪ್ರತಿಪಾದಿಸಿ, ಸರ್ವರ ಏಳಿಗೆಗೆ ಪೂರಕವಾಗಿದೆ. ಅಂಬೇಡ್ಕರ್ ಅವರ ಕನಸಂತೆ ನಾರಿ ಶಕ್ತಿ ವಂದನ್ ಮಹಿಳಾ ಮೀಸಲಾತಿಯ ಅಧಿನಿಯಮವನ್ನು ಸಂಸತ್‌ನಲ್ಲಿ ಮಂಡಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಂವಿಧಾನದ ಆಶಯದಂತೆ ನರೇಂದ್ರ ಮೋದಿ ಸರ್ಕಾರ 2047ರ ವಿಕಸಿತ ಭಾರತ ನಿರ್ಮಾಣ ಮಾಡಿ ವಿಶ್ವಕ್ಕೆ ಶಾಂತಿ, ಭಾತೃತ್ವವನ್ನು ಸಾರಲಿದೆ ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಅವರು ಕೇವಲ ದಲಿತ ಪರ ಮಾತ್ರವಲ್ಲದೆ ಎಲ್ಲ ಶೋಷಿತರ ಪರವಾಗಿ ಹೋರಾಟ ಮಾಡಿ ಸೇವೆ ಕೊಟ್ಟಿದ್ದಾರೆ. ತಮ್ಮ ಹೋರಾಟದ ಮೂಲಕ ಸಮಾಜಕ್ಕೆ ಬೆಳಕು ನೀಡಿದ್ದಾರೆ ಎಂದರು.ಅಂಬೇಡ್ಕರ್ ವೃತ್ತ ಮುಂದೆಯೂ ರಾರಾಜಿಸಲಿ
ಮಂಗಳೂರಿನ ಜ್ಯೋತಿ ಟಾಕೀಸ್ ಬಳಿ ಸರ್ಕಲ್ ನಿರ್ಮಾಣಕ್ಕೆ ಈ ಹಿಂದೆ ಮಹಾನಗರ ಪಾಲಿಕೆಯ ಆಡಳಿತದ ಅವಧಿಯಲ್ಲಿ ಗುದ್ದಲಿಪೂಜೆ ನಡೆಸಲಾಗಿದ್ದರೂ, ಅಲ್ಲಿ ಕೆಲಸ ಇವತ್ತಿನವರೆಗೂ ಆಗಿಲ್ಲ. ಆ ರಸ್ತೆಯಲ್ಲಿ ಈ ಹಿಂದೆ ಅಂಬೇಡ್ಕರ್ ವೃತ್ತ ಇತ್ತು, ಮುಂದೆಯೂ ಅಂಬೇಡ್ಕರ್ ವೃತ್ತ ಅಲ್ಲಿ ರಾರಾಜಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರು ಕ್ರಮವಹಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ವಿನಂತಿಸಿದರು.ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಪ್ರಾಧ್ಯಾಪಕ ಮೋಹನ್ ಎಸ್.ಸಿಂಗೆ ಮುಖ್ಯ ಭಾಷಣ ಮಾಡಿದರು. ಜಿಲ್ಲಾಧಿಕಾರಿ ದರ್ಶನ್ ಸಂವಿಧಾನ ಪೀಠಿಕೆ ಓದಿದದರು. ಪರಿಷತ್ ಸದಸ್ಯ ಐವನ್ ಡಿಸೋಜಾ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್
ಡಿಸಿಪಿ ಮಿಥುನ್ ಎಚ್., ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ಮತ್ತಿತರರು ಇದ್ದರು.ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕ ಸುರೇಶ್ ಅಡಿಗ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
------------