ಕನ್ನಡಪ್ರಭ ವಾರ್ತೆ ಬೆಳಗಾವಿ ಭಾರತದ ಸಂವಿಧಾನವು ಕೇವಲ ಮನುಷ್ಯ ಕೇಂದ್ರಿತ ಅಲ್ಲ, ಬದಲಿಗೆ ಅದು ಜೀವ ಕೇಂದ್ರಿತವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಸಂವಿಧಾನದ ಮೂಲಕ ಸಮಾನತೆಗೆ ಒಂದು ಸ್ಪಷ್ಟವಾದ ಚೌಕಟ್ಟು ನೀಡಿದರು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾಕಾನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಭಾರತದ ಸಂವಿಧಾನವು ಕೇವಲ ಮನುಷ್ಯ ಕೇಂದ್ರಿತ ಅಲ್ಲ, ಬದಲಿಗೆ ಅದು ಜೀವ ಕೇಂದ್ರಿತವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಸಂವಿಧಾನದ ಮೂಲಕ ಸಮಾನತೆಗೆ ಒಂದು ಸ್ಪಷ್ಟವಾದ ಚೌಕಟ್ಟು ನೀಡಿದರು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾಕಾನಾಥ್ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕುವೆಂಪು ಸಭಾಭವನದಲ್ಲಿ ನಡೆದ ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಪರಂಪರೆಯ ಪುನರ್ವಿಮರ್ಶೆ ಮತ್ತು ಅಂಬೇಡ್ಕರ್ ಅವರ ಭಾರತದ ಮರುಕಲ್ಪನೆ ವಿಷಯದ ಮೇಲೆ ಮಾತನಾಡಿದ ಅವರು, ಭಾರತದಲ್ಲಿ ಅನೇಕ ನಾಯಕರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ಭಾರತದ ಆತ್ಮವನ್ನು ಅರಿತಿದ್ದ ಡಾ.ಬಿ.ಆರ್.ಅಂಬೇಡ್ಕರ್ ದೇಶದಲ್ಲಿನ ಜಾತಿ ಪದ್ಧತಿ ತೊಲಗಿಸಿ, ಆರ್ಥಿಕ ಸಮಾನತೆ ತರಲು ಜೀವನವಿಡೀ ಶ್ರಮಿಸಿದರು. ಸಂವಿಧಾನದ ಪ್ರತಿಯೊಂದು ಅನುಚ್ಛೇದ ಅವರ ಪ್ರತಿಪಾದನೆಯನ್ನು ತಿಳಿಸುತ್ತದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಅಶ್ವತ್ಥ್‌ ನಾರಾಯಣ್ ಮಾತನಾಡಿ, ಭಾರತದ ಚರಿತ್ರೆಗೆ ಹೊಸ ಆಯಾಮ ನಿರೂಪಿಸಿ ಮತ್ತು ಸಾಮಾಜಿಕ ಇತಿಹಾಸಕ್ಕೆ ಹೊಸ ಚೌಕಟ್ಟನ್ನು ಸೃಷ್ಟಿಸಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ ಅವರಿಗೆ ಸಲ್ಲುತ್ತದೆ. ಅವರು ಇಡೀ ಭಾರತದ ಆತ್ಮ ಮತ್ತು ಹೃದಯವನ್ನು ಸಂವಿಧಾನೀಕರಣಗೊಳಿಸಿದರು, ಅದರ ಹಿಂದಿನ ಪರಿಶ್ರಮವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಬಗ್ಗೆ ಆಳವಾಗಿ ತಿಳಿಯಬೇಕು ಹೊರತು ಅವರ ಭಾಷಣಗಳಿಂದಲ್ಲ, ಅವರ ಬಗೆಗಿನ ಓದು ನಮ್ಮಲ್ಲಿ ಹೊಸ ಆಲೋಚನೆಗಳನ್ನು ಹುಟ್ಟಿಸುತ್ತದೆ. ಆಗ ನಾವು ಅವರ ವಿಚಾರಗಳೊಂದಿಗೆ ಅನುಸಂಧಾನ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.

ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿ, ಅಂಬೇಡ್ಕರ್ ಅವರ ವ್ಯಕ್ತಿತ್ವ ನಿಜಕ್ಕೂ ಅನಂತಸ್ಪರ್ಶಿ. ದೇಶದ 142 ಕೋಟಿ ಜನಸಂಖ್ಯೆಯ ಆಶೋತ್ತರಗಳನ್ನು ಈಡೇರಿಸುವ ಏಕೈಕ ಮಾರ್ಗ ಸಂವಿಧಾನ. ಎಲ್ಲ ಕಾಲಘಟ್ಟಗಳಿಗೂ ಅಂಬೇಡ್ಕರ್ ಅವರ ಚಿಂತನೆ ಹರಡಬೇಕು ಎಂದು ಹೇಳಿದರು.ಕುಲಸಚಿವ ಸಂತೋಷ್ ಕಾಮಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಮನೆ ಮನೆಗೂ ಮನ ಮನಕೂ ಡಾ.ಬಿ.ಆರ್.ಅಂಬೇಡ್ಕರ್ ಪುಸಕ್ತ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎನ್.ಪಾಟೀಲ್, ಹಣಕಾಸು ಅಧಿಕಾರಿ ಎಂ.ಎ.ಸ್ವಪ್ನ ಅಂಬೇಡ್ಕರ್ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ.ಅಶೋಕ ಡಿಸೋಜಾ, ಸಂಚಾಲಕರಾದ ಡಾ.ಮಹೇಶ್ ಕುಮಾರ್.ಎನ್, ಡಾ.ಅಶ್ವಿನಿ ಜಾಮುನಿ ಎಲ್ಲ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.